ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ತಿಪ್ಪೆ ಸೇರುತ್ತಿರುವ ಅಂದದ ಹೂವು

ಗ್ರಾಮಾಂತರ ಜಿಲ್ಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಪಾಲಿಹೌಸ್‌ಗಳ ಹೂವು ಬೆಳೆಗಾರರು
Last Updated 3 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಪಾಲಿಹೌಸ್‌ಗಳಲ್ಲಿ ಬೆಳೆಯಲಾಗಿದ್ದ ಜರ್ಬೆರಾ, ಕಾರ್ನಿಷ್‌, ಜಿಪ್ಸೋಪಿಲ್ಲಾ, ಹೈಬ್ರಿಡ್‌ ಸೇವಂತಿಗೆ ಸೇರಿದಂತೆ ಹಲವಾರು ಜಾತಿಯ ಹೂವುಗಳು ಕೊರೊನಾ ಹಿನ್ನೆಲೆಯಲ್ಲಿ ಕೊಯ್ಲು ಮಾಡಲಾಗದೆ ಹಾಗೆಯೇ ತೋಟಗಳಲ್ಲೇ ಕೊಳೆಯುತ್ತಿವೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 700 ಪಾಲಿಹೌಸ್‌ಗಳಿವೆ. 1,340 ಹೆಕ್ಟೇರ್‌ ಪ್ರದೇಶದಲ್ಲಿ ದೇಶಿಯ ಹಾಗೂ ವಿದೇಶಗಳಿಗೆ ರಫ್ತು ಮಾಡುವ ಗುಣಮಟ್ಟದ ಹೂವುಗಳನ್ನು ಬೆಳೆಯಲಾಗಿದೆ. ಪ್ರತಿದಿನ ₹1.3ಕೋಟಿ ಹೂವಿನ ವಹಿವಾಟು ನಡೆಯುತ್ತಿದೆ. ಅದರಲ್ಲೂ ದೇವನಹಳ್ಳಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭವಾದ ನಂತರ ಜಿಲ್ಲೆಯಿಂದ ಹೂವು ವಿದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಆಗ ತೊಡಗಿತ್ತು. ಆದರೆ, ಈಗ ದೇಶಿ ಮಾರುಕಟ್ಟೆ ಬಂದ್ ಆಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಹಾಗೂ ಹೊಸಕೋಟೆ ತಾಲ್ಲೂಕುಗಳ ಪಾಲಿಹೌಸ್‌ನಲ್ಲಿ ಬೆಳೆದಿರುವ ಹೂವುಗಳನ್ನು ಕಿತ್ತು ಹೊರ ಸಾಗಿಸುವುದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ತಾಲ್ಲೂಕಿನ ಚನ್ನದೇವಿಅಗ್ರಹಾರ, ಕೆಸ್ತೂರು, ಚಿಕ್ಕತುಮಕೂರು,ಅರಳುಮಲ್ಲಿಗೆ,ತೂಬಗೆರೆ, ಗುಂಡಮಗೆರೆ ಹೊಸಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳ ರೈತರು ಪಾಲಿಹೌಸ್‌ಗಳಲ್ಲಿ ಬೆಳೆಯಲಾಗಿರುವ ಹೂವುಗಳನ್ನು ಕಿತ್ತು ರೈತರು ತಿಪ್ಪೆಗುಂಡಿಗೆ ಸುರಿಯುತ್ತಿದ್ದಾರೆ.

‘ಪಾಲಿಹೌಸ್‌ಗಳಲ್ಲಿ ಬೆಳೆಯುವ ಹೂವುಗಳನ್ನು ಹೆಚ್ಚು ದಿನಗಳ ಕಾಲ ಸಸಿಗಳಲ್ಲಿಯೇ ಉಳಿಯಲು ಬಿಡುವಂತಿಲ್ಲ. ಹೂವು ಸಸಿಗಳಲ್ಲಿಯೇ ಉಳಿದರೆ ಹಲವಾರು ರೀತಿಯ ಸಣ್ಣ ಕೀಟ ಹಾಗೂ ರೋಗಗಳ ಹಾವಳಿ ಹೆಚ್ಚಾಗುತ್ತದೆ. ಇದರಿಂದ ದುಬಾರಿ ಬೆಲೆ ಬಾಳುವ ಹೂವಿನ ಸಸಿಗಳು ಹಾಳಾಗುತ್ತವೆ. ಹೀಗಾಗಿ ಹೂವುಗಳನ್ನು ಅನಿವಾರ್ಯವಾಗಿ ಕೊಯ್ಲು ಮಾಡಿ ಹೊರಗೆ ಸಾಗಿಸಲೇ ಬೇಕಾಗಿದೆ’ ಎನ್ನುತ್ತಾರೆ ಚಿಕ್ಕತುಮಕೂರು ಗ್ರಾಮದ ಹೂವು ಬೆಳೆಗಾರ ತಿ.ರಂಗರಾಜು.

ಫೆಬ್ರುವರಿ ಎರಡನೇ ವಾರದಿಂದಲೇ ವಿದೇಶಗಳಿಗೆ ಹೂವು ರಫ್ತು ಕಡಿಮೆಯಾಗಿತ್ತು. ಮಾರ್ಚ್‌ ತಿಂಗಳಿಂದ ಸಂಪೂರ್ಣವಾಗಿ ಬಂದ್‌ ಆಗಿದೆ. ನಮ್ಮಲ್ಲೂ ಮದುವೆ, ಹಬ್ಬ ಸೇರಿದಂತೆ ಎಲ್ಲವೂ ನಿಂತು ಹೋಗಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲೂ ಬೇಡಿಕೆಯೇ ಇಲ್ಲದಾಗಿದೆ. ಹೀಗಾಗಿ ಹೂವು ಬೆಳೆಗಾರರು ಸಾಲದ ಸುಳಿಗೆ ಸಿಲುಕುವಂತಾಗಿದೆ. ಸರ್ಕಾರ ಕೂಡಲೇ ಹೂವು ಬೆಳೆಗಾರರ ರಕ್ಷಣೆಗೆ ಮುಂದಾಗಬೇಕು ಎಂದು ಕೆಸ್ತೂರು ಗ್ರಾಮದ ಹೂವು ಬೆಳೆಗಾರ ಪುರುಷೋತ್ತಮ್‌ ಮನವಿ ಮಾಡಿದ್ದಾರೆ.

ಪಾಲಿಹೌಸ್‌ಗಳನ್ನು ಬ್ಯಾಂಕ್‌ಗಳಿಂದ ಸಾಲ ಪಡೆದೇ ರೈತರು ನಿರ್ಮಿಸಿದ್ದಾರೆ. ಹೀಗಾಗಿ ಹೂವು ಮಾರಾಟವಾಗದೆ ಸಂಕಷ್ಟಕ್ಕೆ ಸಿಲುಕಿರುವ ಈ ಸಂದರ್ಭದಲ್ಲಿ ಪಾಲಿಹೌಸ್‌ಗಳ ನಿರ್ಮಾಣಕ್ಕೆ ಪಡೆದಿರುವ ಸಾಲದ ಇಎಂಐ ಕಂತನ್ನು ಆರು ತಿಂಗಳ ಮಟ್ಟಿಗೆ ಮನ್ನಾ ಮಾಡಬೇಕು. ಪಾಲಿಹೌಸ್‌ಗಳಲ್ಲಿ ಹೂವು ಬೆಳೆಗೆ ವಿಧಿಸಲಾಗುತ್ತಿರುವ ವಿದ್ಯುತ್‌ ಶುಲ್ಕವನ್ನು ಆರು ತಿಂಗಳ ಮಟ್ಟಿಗೆ ಮನ್ನಾ ಮಾಡಬೇಕು. ರಸಗೊಬ್ಬರ, ಕ್ರಿಮಿನಾಶಕದ ಮೇಲಿನ ಜಿಎಸ್‌ಟಿ ಆರು ತಿಂಗಳ ಮಟ್ಟಿಗೆ ಕೈಬಿಡಬೇಕು. ಆಗ ಮಾತ್ರ ಹೂವು ಬೆಳೆಗಾರರು ಉಳಿಯಲು ಸಾಧ್ಯ ಎಂದು ಚನ್ನದೇವಿಅಗ್ರಹಾರ ಗ್ರಾಮದ ಹೂವು ಬೆಳೆಗಾರ ಸಿ.ಎಸ್‌.ಪುರುಷೋತ್ತಮ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT