ದೊಡ್ಡಬಳ್ಳಾಪುರ ಒಂದು ವಾರದ ಹಿಂದೆ ದೊಡ್ಡಬೆಳವಂಗಲದಲ್ಲಿ ನಡೆದ ಜೋಡಿ ಕೊಲೆ ಸಂದರ್ಭದಲ್ಲಿ ಸೂಕ್ತ ಸಮಯಕ್ಕೆ ಆಂಬುಲೆನ್ಸ್ ಸೇವೆ ದೊರೆತಿದ್ದರೆ ಚಾಕು ಇರಿತಕ್ಕೆ ಒಳಗಾಗಿದ್ದವರನ್ನು ಉಳಿಸಿಕೊಳ್ಳವ ಅವಕಾಶ ಇತ್ತು. ದೊಡ್ಡಬೆಳವಂಗಲ ಸೇರಿದಂತೆ ತಾಲ್ಲೂಕಿನಲ್ಲಿ 108 ಆಂಬುಲೆನ್ಸ್ ಸೇವೆ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿದೆ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿ
ಬಂದಿವೆ.
ಕ್ರಿಕೆಟ್ ಪಂದ್ಯಾವಳಿ ವೇಳೆ ನಡೆದ ಗಲಾಟೆ ಸಂದರ್ಭದಲ್ಲಿ ಚಾಕು ಇರಿತಕ್ಕೆ ಒಳಗಾಗಿ ತೀವ್ರ ರಕ್ತಸ್ರಾವದಿಂದ ನಡು ರಸ್ತೆಯಲ್ಲಿ ಹೊರಳಾಡುತ್ತಿದ್ದರೂ 108 ಆಂಬುಲೆನ್ಸ್ ಸೇವೆ ದೊರಕಲಿಲ್ಲ.
ತಾಲ್ಲೂಕಿನಲ್ಲಿ ಆರೋಗ್ಯ ರಕ್ಷಾ ಕವಚ 108 ಆಂಬುಲೆನ್ಸ್ ಸೇವೆ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಆರು ತಿಂಗಳ ಹಿಂದೆ ದುರಸ್ತಿಗೆ ತೆರಳಿದ್ದ ದೊಡ್ಡಬೆಳವಂಗಲ ವ್ಯಾಪ್ತಿಯ ಆಂಬುಲೆನ್ಸ್ ಮತ್ತೆ ಜನರ ಸೇವೆಗೆ ಮರಳಿಲ್ಲ. ಇದೇ ಕಾರಣದಿಂದಾಗಿ ಚಾಕು ಇರಿತಕ್ಕೆ ಒಳಗಾದ ಯುವಕರಿಗೆ ತುರ್ತು ಚಿಕಿತ್ಸೆ ದೊರಕಲು ಸಾಧ್ಯವಾಗದೆ ಅಮಾಯಕ ಯುವಕರು ಮೃತಪಟ್ಟರು ಎನ್ನುವುದು ಸ್ಥಳೀಯರ ಆರೋಪ.
ಆರೋಗ್ಯ ರಕ್ಷಾ ಸೇವೆ ಯೋಜನೆಯಲ್ಲಿ ಐದು ಆಂಬುಲೆನ್ಸ್ ಇದ್ದವು. ಪ್ರಸ್ತುತ ಗ್ರಾಮೀಣ ಪ್ರದೇಶ ನಾಲ್ಕು ಹೋಬಳಿಗಳಿಂದ 2 ಆಂಬುಲೆನ್ಸ್ ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಮಧುರೆ ಹೋಬಳಿಯ ಆಂಬುಲೆನ್ಸ್ ಕೋವಿಡ್ ಸಮಯದಲ್ಲಿ ಅಪಘಾತವಾಗಿ ದುರಸ್ಥಿಗೆ ತೆರಳಿದ್ದು ಮತ್ತೆ ಹಿಂದಿರುಗಿಯೇ ಇಲ್ಲ. ದೊಡ್ಡಬೆಳವಂಗಲ ಮತ್ತು ಮಧುರೆ, ತೂಬಗೆರೆ ಹೋಬಳಿಯ ಮೂರು ಆಂಬುಲೆನ್ಸ್‌ಗಳು ದುರಸ್ತಿಗಾಗಿ ಗ್ಯಾರೇಜ್ ಸೇರಿ ತಿಂಗಳುಗಳೇ ಕಳೆದರು ಹಿಂತಿರುಗಿ ಬಂದಿಲ್ಲ ಎನ್ನುತ್ತಾರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು.
ಹಣ ನೀಡಿದರೂ ಸೇವೆ ದೊರೆಯುವುದಿಲ್ಲ: ನಗರದಲ್ಲಿನ ತಾಯಿ ಮಗು ಆಸ್ಪತ್ರೆ ವ್ಯಾಪ್ತಿಯಲ್ಲಿ ಮಾತ್ರ ಸುಸಜ್ಜಿತವಾದ ಆಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ. ನಗರ ಪ್ರದೇಶದಲ್ಲಿ ತುರ್ತು ಸೇವೆಗೆ ಹಣ ನೀಡಿದರೆ ಖಾಸಗಿ ಆಂಬುಲೆನ್ಸ್ ದೊರೆಯುತ್ತವೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಹಣ ನೀಡಿದರು ಸಹ ಆಂಬುಲೆನ್ಸ್ ಸೇವೆ ದೊರೆಯುವುದಿಲ್ಲ. ಇಂತಹ ಕಡೆಗಳಲ್ಲಿನ ಜನರಿಗೆ ಅನುಕೂಲ ಮಾಡುವ ಉದ್ದೇಶದಿಂದ ಆರಂಭವಾದ 108 ಸೇವೆ ಮತ್ತೆ ಸೌಲಭ್ಯ ಉಳ್ಳವರ ಪಾಲಿಗೆ ಮೀಸಲಾಗಿ ನಿಂತಿವೆ. ತಾಲ್ಲೂಕಿನಲ್ಲಿ 16 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇವೆ. ಇವುಗಳ ಪೈಕಿ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳು 24X7 ಆಗಿ ಕಾರ್ಯನಿರ್ವಹಿಸುತ್ತಿವೆ. ಇಂತಹ ಕಡೆಗಳಲ್ಲಿಯೇ ಆಂಬುಲೆನ್ಸ್ ಸೇವೆ ಹೆಚ್ಚಾಗಿ ಅಗತ್ಯವಾಗಿರುತ್ತದೆ ಎನ್ನುವುದು ಗ್ರಾಮೀಣ ಭಾಗದ ಜನರ ವಾದ.
ಚಾಲಕರೇ ಇಲ್ಲ: ಮಧುರೆ ಹೋಬಳಿಗೆ ದಾನಿಗಳು ಕಾರಿನ ಆಂಬುಲೆನ್ಸ್ ನೀಡಿದ್ದಾರೆ. ಆದರೆ ಇದಕ್ಕೆ ಚಾಲಕ ಇಲ್ಲದೆ, ಆಸ್ಪತ್ರೆ ಶೆಡ್‌ನಲ್ಲಿ ನಿಲ್ಲಿಸಲಾಗಿದೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಲಾಗಿದ್ದ 108 ಆಂಬುಲೆನ್ಸ್ ಕೋವಿಡ್ ಸಮಯದಲ್ಲಿ ಅಪಘಾತಕ್ಕೆ ಒಳ ಗಾಗಿತ್ತು. ಇದಾದ ನಂತರ ಮತ್ತೆ ಹೊಸದಾಗಿ ಆಂಬುಲೆನ್ಸ್ ನೀಡಲೇ ಇಲ್ಲ. ತಾಲ್ಲೂಕು ಕೇಂದ್ರದಿಂದ 20 ಕಿ.ಮೀ ದೂರದ ಹೋಬಳಿಯ ಜನ ತುರ್ತು ಆಂಬುಲೆನ್ಸ್ ಸೇವೆ ಇಲ್ಲದೆ. ದುಬಾರಿ ಹಣ ತೆತ್ತು ಖಾಸಗಿ ಆಂಬುಲೆನ್ಸ್‌ಗಳನ್ನು ಅವಲಂಭಿಸುವಂತಾಗಿದೆ ಎಂದು ಮಧುರೆ ಹೋಬಳಿಯ ಚನ್ನದೇವಿ ಅಗ್ರಹಾರದ ವಕೀಲ ದೀಪು ತಿಳಿಸಿದರು.
ದುರಂತದ ಸಂಗತಿ: 108 ಆಂಬುಲೆನ್ಸ್ ಸೇವೆ ಪ್ರಾರಂಭವಾದ ದಿನಗಳಲ್ಲಿ ಸರ್ಕಾರಕ್ಕೆ ಇದ್ದಷ್ಟು ಕಾಳಜಿ ಈಗ ಇಲ್ಲದಾಗಿದೆ. ಆರೋಗ್ಯ ಸಚಿವರು ಉಸ್ತುವಾರಿ ಸಚಿವರಾಗಿರುವ ಜಿಲ್ಲೆಯಲ್ಲೇ ಸರಿಯಾದ ಆಂಬುಲೆನ್ಸ್ ಸೇವೆ ದೊರೆಯುತ್ತಿಲ್ಲ ಅಂದರೆ ಇದಕ್ಕಿಂತಲು ದುರಂತ ಬೇರೆನಿದೆ ಎಂದು ಚಿಕ್ಕಬೆಳವಂಗಲ ನಿವಾಸಿ ಸಿ.ಎಸ್.ಧರ್ಮೇಂದ್ರ ತಿಳಿಸಿದರು.
ಬರಲಿವೆ ಹೊಸ ವಾಹನ: ಆಂಬುಲೆನ್ಸ್ ಸೇವೆ ನೀಡುವುದನ್ನು ಸರ್ಕಾರ ವಾರ್ಷಿಕ ಟೆಂಡರ್ ಮೂಲಕ ನಿರ್ವಹಿಸುತ್ತಿದೆ. ಈಗ ಟೆಂಡರ್ ಮುಕ್ತಾಯವಾಗಿದೆ. ಹೀಗಾಗಿ ಹೊಸದಾಗಿ ಟೆಂಡರ್ ಕರೆದು ವಾಹನಗಳು ಬಂದ ಮೇಲೆ ಕೊರತೆ ನೀಗಲಿದೆ. ಸದ್ಯಕ್ಕೆ ತಾಲ್ಲೂಕಿನಲ್ಲಿ ಐದು ಆಂಬುಲೆನ್ಸ್‌ಗಳ ಪೈಕಿ ಎರಡು ಮಾತ್ರ ಕಾರ್ಯನಿರ್ವಹಿಸುತ್ತಿವೆ’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಪರಮೇಶ್ವರ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.