ಮಂಗಳವಾರ, ಮಾರ್ಚ್ 2, 2021
23 °C

‘ಜೀವದ್ರವ್ಯ ರಕ್ತದ ದಾನಕ್ಕೆ ಹಿಂಜರಿಯದಿರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಜಗತ್ತಿನೆಲ್ಲೆಡೆ ಪ್ರತಿಕ್ಷಣ ಲೆಕ್ಕವಿಲ್ಲದಷ್ಟು ಮಂದಿ ರಕ್ತದ ಅಗತ್ಯದಲ್ಲಿರುತ್ತಾರೆ. ಸಾವಿರಾರು ಮಂದಿ ತಮಗೆ ಬೇಕಾದವರಿಗೆ ಬೇಕಿರುವ ರಕ್ತವನ್ನು ಹುಡುಕಿಕೊಂಡು ಆತಂಕದಿಂದ ಅಲೆಯುತ್ತಿರುತ್ತಾರೆ. ರಕ್ತ ಅಕ್ಷರಶಃ ಜೀವದ್ರವ್ಯವಾಗಿದ್ದು ಅದನ್ನು ದಾನ ಮಾಡಲು ಹಿಂಜರಿಯಬಾರದು’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ತಾಲ್ಲೂಕಿನ ಕಗ್ಗಲಹಳ್ಳಿ ಗ್ರಾಮದ ಶನಿಮಹಾತ್ಮ ದೇವಾಲಯದ ಆವರಣದಲ್ಲಿ ‘ಸ್ವಾಮಿ ವಿವೇಕಾನಂದ ವಾಲೆಂಟರಿ ಬ್ಲಡ್ ಬ್ಯಾಂಕ್’ ಹಾಗೂ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಶ್ರಾವಣ ಶನಿವಾರದ ಅಂಗವಾಗಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

‘ಜಗತ್ತಿನಲ್ಲೇ ಅತಿ ಶ್ರೇಷ್ಠವಾದ ದಾನ ಎಂದರೆ ಅದು ರಕ್ತದಾನ. ನೀವು ರಕ್ತದಾನ ಮಾಡಿದರೆ ಒಬ್ಬರಿಗೆ ಜೀವ ಕೊಟ್ಟಂತೆ. ರಕ್ತದಾನಕ್ಕೆ ಪರ್ಯಾಯವಿಲ್ಲ. ಇದನ್ನು ಯಾವುದೋ ಕೈಗಾರಿಕೆ ಅಥವಾ ಪ್ರಯೋಗಾಲಯದಲ್ಲಿ ತಯಾರಿಸಲು ಸಾಧ್ಯವಿಲ್ಲ. ನಿಮಗೆ ರಕ್ತ ಬೇಕು ಎಂದರೆ ಇನ್ನೊಬ್ಬರು ನೀಡಿದಾಗಲೇ ಅದನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಕಾರ್ಯಗಳಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

ಮುಖಂಡ ಕಗ್ಗಲಹಳ್ಳಿ ಗುರಪ್ಪ ಮಾತನಾಡಿ, ಅಪಘಾತ, ಕ್ಯಾನ್ಸರ್, ಹೃದಯ, ಹೆರಿಗೆ ಸಂಬಂಧಿ ಚಿಕಿತ್ಸೆಯ ವೇಳೆ ವ್ಯಾಪಕವಾಗಿ ರಕ್ತ ಬೇಕಾಗುತ್ತದೆ. ಆದರೆ ಭಾರತವೂ ಸೇರಿದಂತೆ ಇಡೀ ವಿಶ್ವದಾದ್ಯಂತ ಬೇಡಿಕೆಗೆ ತಕ್ಕಂತೆ ರಕ್ತದ ಪೂರೈಕೆಯಿಲ್ಲ. ಬದುಕುವ ಎಲ್ಲ ಅವಕಾಶಗಳಿದ್ದರೂ ಎಷ್ಟೋ ಜೀವಗಳು ರಕ್ತದ ಕೊರತೆಯಿಂದಾಗಿ ಆಸ್ಪತ್ರೆಗಳಲ್ಲಿ ಅಸು ನೀಗುತ್ತಿವೆ ಎಂದರು.

ಯಾವುದೇ ಒಂದು ರೋಗಿಗೆ ಅಗತ್ಯ ಗಳಿಗೆಯಲ್ಲಿ ರಕ್ತ ಸಿಗದಿದ್ದರೆ ಆತ ಬದುಕುವುದು ಕಷ್ಟ. ಇಂತಹ ವ್ಯಕ್ತಿಗಳಿಗೆ ಅಗತ್ಯವಿರುವ ಯಾವುದೇ ಬಗೆಯ ರಕ್ತವನ್ನು ಸಕಾಲದಲ್ಲಿ ಪೂರೈಸುವ ಮೂಲಕ ಜೀವರಕ್ಷಕರಾಗಬೇಕು ಎಂದರು.

ಸ್ಥಳೀಯ ಮುಖಂಡ ಜಯರಾಮೇಗೌಡ ಮಾತನಾಡಿ, ‘ಜನರಿಗೆ ಸಂಕಷ್ಟದ ಸಮಯದಲ್ಲಿ ಬ್ಲಡ್ ಬ್ಯಾಂಕ್‌ಗಳು ಉತ್ತಮ ಕಾರ್ಯ ಮಾಡುತ್ತಿವೆ. ಇವುಗಳೊಂದಿಗೆ ಲಯನ್ಸ್‌ನಂತಹ ಸಂಸ್ಥೆಗಳು ಕೈ ಜೋಡಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಬ್ಯಾಂಕ್‌ಗಳು ವರ್ಷದ ಎಲ್ಲ ದಿನವೂ ರಕ್ತದ ಅಗತ್ಯವಿರುವ ರೋಗಿಗಳಿಗೆ ರಕ್ತ ಪೂರೈಸುವ ಮಹತ್ಕಾರ್ಯದಲ್ಲಿ ತೊಡಗಿವೆ‌’ ಎಂದರು.

‘ಯಾರು, ಎಷ್ಟೇ ಹೊತ್ತಿನಲ್ಲಿ ರಕ್ತದ ಅಗತ್ಯವನ್ನು ಕೇಳಿಕೊಂಡು ಬಂದರೂ ರಕ್ತ ಇಲ್ಲ ಎನ್ನದೆ ಕ್ಷಣಮಾತ್ರದಲ್ಲಿ ನೀಡಿ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಗಳಲ್ಲಿ ನಾವೆಲ್ಲರೂ ಕೈ ಜೋಡಿಸಬೇಕು’ ಎಂದರು.

ಚೌಡಪ್ಪನಹಳ್ಳಿ ಡೇರಿ ಅಧ್ಯಕ್ಷ ಶಂಕರ್, ರಾಜಣ್ಣ, ಸೇರಿದಂತೆ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.