ಗುರುವಾರ , ನವೆಂಬರ್ 21, 2019
23 °C
ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಕ್ತಿತ್ವ ವಿಕಸನ, ಶೈಕ್ಷಣಿಕ ಕಾರ್ಯಾಗಾರ

ವೃತ್ತಿ ಬಗ್ಗೆ ಕೀಳರಿಮೆ ಬೇಡ: ಡಾ.ಗಣೇಶ್‌ ಭಟ್‌

Published:
Updated:
Prajavani

ದೇವನಹಳ್ಳಿ: ‘ಜೀವನ ನಿರ್ವಹಣೆಗೆ ಉದ್ಯೋಗ ಅಗತ್ಯ. ಯಾವುದೇ ವೃತ್ತಿಯ ಬಗ್ಗೆ ಕೀಳರಿಮೆ ಸಲ್ಲದು’ ಎಂದು ಸಂಪನ್ಮೂಲ ವ್ಯಕ್ತಿ ಡಾ.ಗಣೇಶ್‌ ಭಟ್‌ ಹೇಳಿದರು.

ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್‌ ಪೂರ್ವ ನಂತರದ ವಿದ್ಯಾರ್ಥಿ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾಲೇಜು ಪ್ರಾಂಶುಪಾಲರು ಮತ್ತು ಶಿಕ್ಷಕರುಗಳಿಗೆ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ, ಶೈಕ್ಷಣಿಕ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವೃತ್ತಿಯಲ್ಲಿ ತೊಡಗುವ ಸಂದರ್ಭದಲ್ಲಿ ಅನೇಕ ಅಡೆತಡೆ ಸಹಜ. ವೃತ್ತಿ ಗೌರವದೊಂದಿಗೆ ಕೆಲಸ ಮಾಡಬೇಕು. ಒತ್ತಡ, ಖಿನ್ನತೆಯಿಂದ ಹೊರಬರಲು ಯೋಗ, ಧ್ಯಾನ, ಸಂಗೀತ ಕೇಳುವುದು, ಮಕ್ಕಳೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದು ರೂಢಿಸಿಕೊಳ್ಳಬೇಕು’ ಎಂದು ಹೇಳಿದರು.

‘ವಸತಿ ಶಾಲೆಗಳು ಕುಟುಂಬವಿದ್ದಂತೆ. ಇದೊಂದು ಸರ್ಕಾರದ ಅಧೀನದಲ್ಲಿರುವ ಮಕ್ಕಳ ಕುಟುಂಬ. ಮೆದುಳಿಗೆ ಮತ್ತು ದೇಹಕ್ಕೆ ಶಕ್ತಿ ನೀಡುವ ಕ್ರೀಡಾ ಚಟುವಟಿಕೆಗಳಲ್ಲಿಯೂ ಭಾಗವಹಿಸುವಂತೆ ಮಕ್ಕಳನ್ನು ಪ್ರೇರೇಪಿಸಬೇಕು. ಇದು ಶೈಕ್ಷಣಿಕ ಬೋಧನೆಗೆ ಏಕಾಗ್ರತೆ ವೃದ್ಧಿಸಿಕೊಳ್ಳಲು ಶಿಕ್ಷಕರಿಗೂ ಸಹಕಾರಿ’ ಎಂದು ಹೇಳಿದರು.

‘ವಿದ್ಯಾರ್ಥಿಗಳಂತೆ ಶಿಕ್ಷಕರು ನಿರಂತರ ಕಲಿಕೆಯಲ್ಲಿರಬೇಕು. ಬೌದ್ಧಿಕ ಮಟ್ಟ ಹೆಚ್ಚು ಇರುವ ಇಂದಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ವಿಷಯಗಳ ಬಗ್ಗೆ ಮನನದ ಅವಶ್ಯಕತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತಳಮಟ್ಟದಿಂದಲೇ ರೂಢಿಸಬೇಕು. ಸಂಚಾರ ಪ್ರವಾಸ ಕೈಗೊಂಡು ಶೈಕ್ಷಣಿಕವಾಗಿ ಪ್ರೇರಣೆ ನೀಡಬೇಕು’ ಎಂದು ಹೇಳಿದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಹನುಮಂತರಾಯ ಮಾತನಾಡಿ, ‘ಜಿಲ್ಲೆಯಲ್ಲಿರುವ ಎಲ್ಲ ವಸತಿ ಶಾಲೆಗಳ ಪ್ರಾಂಶುಪಾಲರು ಮತ್ತು ಶಿಕ್ಷಕರನ್ನು ಮೊದಲ ಬಾರಿಗೆ ಕಾರ್ಯಗಾರ ನಡೆಸಿ ಪರಸ್ಪರ ಆತ್ಮವಿಶ್ವಾಸ ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತಿದೆ. ವಸತಿ ಶಾಲೆಯಲ್ಲಿನ ಶಿಸ್ತು ಪಾಲನೆ ಅತಿಮುಖ್ಯ. ಮೌಲ್ಯಯುತ ಶಿಕ್ಷಣದ ಜೊತೆಗೆ ಗುಣಮಟ್ಟದ ಫಲಿತಾಂಶಕ್ಕೆ ಒತ್ತು ನೀಡಬೇಕು. ಪೋಷಕರು ಮಕ್ಕಳ ಮೇಲೆ ಅಪಾರ ನಂಬಿಕೆ ಇಟ್ಟಿರುತ್ತಾರೆ. ಅದನ್ನು ಹುಸಿಯಾಗಿಸಬಾರದು’ ಎಂದು ಹೇಳಿದರು.

‘ಇಲಾಖೆ ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡುತ್ತದೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಕೊರತೆಯಾಗಬಾರದು. ನಿಲಯ ಪಾಲಕರು ಹೆಣ್ಣುಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದರು.

ಪ್ರತಿಕ್ರಿಯಿಸಿ (+)