ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ| ‘ಕಂಠಪಾಠ ಬೇಡ, ವಿಷಯ ಅರ್ಥೈಸಿಕೊಳ್ಳಿ’: ಸೋಮೇಶ್ವರ ಸಲಹೆ

ವಿದ್ಯಾರ್ಥಿಗಳಿಗೆ ಶಿಕ್ಷಣ ತಜ್ಞ ಡಾ.ನಾ. ಸೋಮೇಶ್ವರ ಸಲಹೆ
Last Updated 22 ಫೆಬ್ರುವರಿ 2023, 5:22 IST
ಅಕ್ಷರ ಗಾತ್ರ

ಬಾಶೆಟ್ಟಿಹಳ್ಳಿ(ದೊಡ್ಡಬಳ್ಳಾಪುರ): ‘ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಆಸಕ್ತಿದಾಯಕ ಓದು, ಅಗತ್ಯ ಪೂರ್ವ ಸಿದ್ಧತೆ ಹಾಗೂ ನಿರಂತರ ಪರಿಶ್ರಮ ನಮ್ಮ ಶೈಕ್ಷಣಿಕ ಸಾಧನೆಗೆ ಅಗತ್ಯ’ ಎಂದು ಶಿಕ್ಷಣ ತಜ್ಞ ಹಾಗೂ ಲೇಖಕ ಡಾ.ನಾ. ಸೋಮೇಶ್ವರ ಪ್ರತಿಪಾದಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯುವ ಸಂಚಲನ ಸಹಯೋಗದೊಂದಿಗೆ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಪೂರಕವಾಗಿ ಕಲಿಕೆ, ನೆನಪು ಹಾಗೂ ಮರೆವು ಕುರಿತು ವಿದ್ಯಾರ್ಥಿಗಳೊಂದಿಗೆ ವಿಚಾರ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಯಾವುದೇ ವಿಷಯವನ್ನು ಕಂಠಪಾಠ ಮಾಡುವ ಬದಲು ಅರ್ಥೈಸಿಕೊಳ್ಳಬೇಕು. ವಿದ್ಯಾರ್ಥಿಗಳು ಪ್ರತಿದಿನ ಕನಿಷ್ಠ 6 ಗಂಟೆಗಳ ಕಾಲ ಓದಬೇಕು. ಬೆಳಗಿನ ಹೊತ್ತಿನಲ್ಲಿ ಎರಡು ಗಂಟೆ, ಸಂಜೆಯ ಸಮಯದಲ್ಲಿ ನಾಲ್ಕು ಗಂಟೆ ಓದುವುದು ಅಗತ್ಯ. ಬೆಳಿಗ್ಗೆ ಹೊಸ ಹೊಸ ಅಧ್ಯಾಯ ಮಾಡಿದರೆ, ಸಂಜೆ ಹೊತ್ತು ಬರೆಯುವ ಮತ್ತು ಅಭ್ಯಾಸ ಮಾಡಬೇಕು. ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ವಿನ್ಯಾಸ ಅರ್ಥ ಮಾಡಿಕೊಳ್ಳಬೇಕು. ಪಠ್ಯಗಳ ನೀಲನಕ್ಷೆ ಅಧ್ಯಯನ ಮಾಡಬೇಕು ಎಂದು ಹೇಳಿದರು.

ಸುಂದರ ಚಿತ್ರಗಳನ್ನು ಕೇಳಿದ ಕಡೆ ಬರೆಯಲೇಬೇಕು. ಪರೀಕ್ಷೆಯ ದಿನ 15 ನಿಮಿಷಗಳು ಮುಂಚೆ ಪರೀಕ್ಷಾ ಕೇಂದ್ರದ ಬಳಿಗೆ ಹೋಗಬೇಕು. ಅಲ್ಲಿ ಸ್ನೇಹಿತರೊಂದಿಗೆ ಓದಿರುವ ಕುರಿತು ಚರ್ಚೆ ಮಾಡಬಾರದು. ಪರೀಕ್ಷಾ ಕೇಂದ್ರದ ಒಳಗೆ ಹೊರಡುವ 10 ನಿಮಿಷಗಳ ಮುಂಚೆ 400 ಎಂ.ಎಲ್ ನೀರು ಕುಡಿಯಬೇಕು. ಇದು ನೆನಪಿನ ಶಕ್ತಿಗೆ ಅನುಕೂಲ. ಪರೀಕ್ಷೆ ಮುಗಿದ ನಂತರವೂ ಅದರ ಬಗ್ಗೆ ಯಾವುದೇ ಚರ್ಚೆ ಮಾಡದೆ ಮುಂದಿನ ವಿಷಯಕ್ಕೆ ತಯಾರಿ ನಡೆಸಿಕೊಳ್ಳಬೇಕು ಎಂದರು.

ವೈದ್ಯರಾದ ಡಾ. ಇಂದಿರಾ ಶಾಮಪ್ರಸಾದ್ ಮಾತನಾಡಿ, ‘ಪರೀಕ್ಷೆಗಳನ್ನು ಎದುರಿಸಲು ದೈಹಿಕ ಕಸರತ್ತು ಸಹ ಮುಖ್ಯ. ಉಂಡೆ ಬೆಲ್ಲ, ಎಳ್ಳು, ಸಿಪ್ಪೆಸಹಿತ ಕಡಲೆ ಬೀಜ, ಒಣಗಿದ ಕೊಬ್ಬರಿ, ಉರಿದ ರಾಗಿ, ಮೊಳಕೆ ಕಾಳುಗಳನ್ನು ವಿದ್ಯಾರ್ಥಿಗಳು ತಿನ್ನಬೇಕು’ ಎಂದರು.

ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ, ಯುವ ಸಂಚಲನ ಅಧ್ಯಕ್ಷ ಚಿದಾನಂದಮೂರ್ತಿ, ಶಾಲಾ ಮುಖ್ಯ ಶಿಕ್ಷಕ ಆರ್. ನಾರಾಯಣಸ್ವಾಮಿ, ಸಮಾಜ ಶಿಕ್ಷಕ ಭಾಸ್ಕರ್, ಅಜಾಕ್ಸ್ ಕಂಪನಿಯ ಸಿ. ಮಂಜುನಾಥ್, ಎಸ್‌ಡಿಎಂಸಿ ಅಧ್ಯಕ್ಷ ಮುನಿಆಂಜಿನಪ್ಪ, ಜಗನ್ನಾಥ್ ಸದಸ್ಯ, ಆಕಲಪ್ಪ, ಮಲ್ಯ ಇದ್ದರು.

‘ಉತ್ತರ ಸ್ವಂತ ವಾಕ್ಯದಲ್ಲಿರಲಿ’

ಪರೀಕ್ಷೆಯಲ್ಲಿ ನಮ್ಮದೇ ಆದ ವಾಕ್ಯಗಳನ್ನು ರಚಿಸಿ, ಸಮರ್ಪಕವಾದ ಉತ್ತರ ಬರೆಯಬೇಕು. ಇದನ್ನು ನಿಯಮಿತವಾಗಿ ಅಭ್ಯಾಸ ಮಾಡಬೇಕು. ನಾವು ಬರೆಯುವ ಉತ್ತರವನ್ನು ಪೋಷಕರು ಹಾಗೂ ಅಧ್ಯಾಪಕರಿಗೆ ತೋರಿಸಿ ತಪ್ಪುಗಳನ್ನು ತಿದ್ದಿಸಿಕೊಳ್ಳಬೇಕು. ಅವರು ನೀಡುವ ಸಲಹೆ ಪಾಲಿಸಬೇಕು. ಅಂತಿಮ ಪರೀಕ್ಷೆಯಲ್ಲಿ ನಮ್ಮ ನೆನಪಿನ ಶಕ್ತಿಯನ್ನು ಪರೀಕ್ಷಿಸುವ
ಪ್ರಶ್ನೆಗಳಿರುತ್ತವೆ ಎಂದು ಶಿಕ್ಷಣ ತಜ್ಞ ಡಾ. ನಾ. ಸೋಮೇಶ್ವರ ತಿಳಿಸಿದರು.

ಬರೆಯುವ ಶೈಲಿ ರೂಢಿಸಿಕೊಳ್ಳಿ

ನಮ್ಮ ಬರಹದ ಶೈಲಿ ಹೇಗಿದೆ. ನಾವು ಬಳಸುವ ವಾಕ್ಯಗಳು ಹೇಗಿವೆ. ನಾವು ಬಳಸುವ ಪದಗಳು ಎಷ್ಟು ಲಾಲಿತ್ಯವಾಗಿವೆ ಎನ್ನುವುದನ್ನು ಗಮನಿಸಿ ಅಂಕಗಳನ್ನು ನೀಡುವರು ಎನ್ನುವುದನ್ನು ವಿದ್ಯಾರ್ಥಿಗಳು ನೆನಪಿಟ್ಟುಕೊಳ್ಳಬೇಕು. ಜೊತೆಗೆ ಚಿತ್ತುಗಳಿಲ್ಲದೆ ಅಂದವಾಗಿ ಮತ್ತು ಕಾಗುಣಿತದ ದೋಷವಿಲ್ಲದೆ ಬರೆಯುವುದಕ್ಕೆ ವಿಶೇಷವಾದ ಆದ್ಯತೆಯಿರುತ್ತದೆ ಎನ್ನುವುದು ಗಮನದಲ್ಲಿರಬೇಕು ಎಂದು ವಿದ್ಯಾರ್ಥಿಗಳಿಗೆ ಡಾ. ನಾ. ಸೋಮೇಶ್ವರ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT