ಗುರುವಾರ , ಮೇ 19, 2022
24 °C
ಹಾರಗದ್ದೆ ಗ್ರಾ.ಪಂ: ವಿವಿಧ ಅಭಿವೃದ್ಧಿ ಕಾಮಗಾರಿಗೆ ಉದ್ಘಾಟನೆ

‘ಅಭಿವೃದ್ಧಿಗೆ ರಾಜಕೀಯ ಬೆರಸಬೇಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ತಾಲ್ಲೂಕಿನ ಹಾರಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸಂಸದ ಡಿ.ಕೆ. ಸುರೇಶ್‌, ಶಾಸಕರಾದ ರಾಮಲಿಂಗಾರೆಡ್ಡಿ, ಬಿ. ಶಿವಣ್ಣ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾವ್ಯಾ ಪ್ರಭಾಕರ್‌
ಉದ್ಘಾಟಿಸಿದರು

ಮಾದಪಟ್ಟಣದಲ್ಲಿ ಕಾವೇರಿ ನೀರು ಕುಡಿಯುವ ನೀರು ವ್ಯವಸ್ಥೆಗಾಗಿ 15 ಲಕ್ಷ ಲೀಟರ್‌ ಸಾಮರ್ಥ್ಯದ ಜಲ ಸಂಗ್ರಹಾಗಾರ, ರೈತ ಸಂಪರ್ಕ ಕೇಂದ್ರ, ಹಾರಗದ್ದೆ ಮತ್ತು ನೊಸೇನೂರು ಗ್ರಾಮದಲ್ಲಿ ಸರ್ಕಾರಿ ಶಾಲಾ ಕಟ್ಟಡ, ಲಿಂಗಾಪುರದಲ್ಲಿ ವಾಲ್ಮೀಕಿ ಭವನ, ಕುಂಬಾರನಹಳ್ಳಿಯಲ್ಲಿ ಕನಕ ಭವನವನ್ನು ಉದ್ಘಾಟಿಸಲಾಯಿತು. ಹಾರಗದ್ದೆ ಪಂಚಾಯಿತಿ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.

ಸಂಸದ ಸುರೇಶ್‌ ಮಾತನಾಡಿ, ಅಭಿವೃದ್ಧಿಯು ಜಾತಿ, ಪಕ್ಷಗಳಿಗೆ ಸೀಮಿತವಾಗಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು. ಈ ವಿಷಯದಲ್ಲಿ ರಾಜಕೀಯ ಸಲ್ಲದು ಎಂದರು.

ಕೇಂದ್ರ, ರಾಜ್ಯ ಸರ್ಕಾರ, ಗ್ರಾಮ ಪಂಚಾಯಿತಿ ಮತ್ತು ಸಾಮಾಜಿಕ ಹೊಣೆಗಾರಿಕೆಯ ಅನುದಾನ ಸೇರಿದಂತೆ ಎಲ್ಲಾ ಅನುದಾನಗಳ ಉದ್ದೇಶ ಗ್ರಾಮಾಭಿವೃದ್ಧಿಯಾಗಿದೆ. ಹಾಗಾಗಿ ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕಾದುದ್ದು ಜನಪ್ರತಿನಿಧಿಗಳ ಜವಾಬ್ದಾರಿ ಎಂದು ತಿಳಿಸಿದರು.

ಹಾರೋಹಳ್ಳಿ-ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಅಭಿವೃದ್ಧಿ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿಲ್ಲ. ಈ ರಸ್ತೆ ಅಭಿವೃದ್ಧಿಯಿಂದ ಆನೇಕಲ್‌, ಹೊಸಕೋಟೆ, ದೇವನಹಳ್ಳಿ ಸೇರಿದಂತೆ ವಿವಿಧ ತಾಲ್ಲೂಕಿನ ರಸ್ತೆಗಳು ಅಭಿವೃದ್ಧಿಯಾಗಲಿವೆ. ಹಾಗಾಗಿ ಸರ್ಕಾರ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.

ಬೆಂಗಳೂರು ಜಲ ಮಂಡಳಿಯ ಕಾವೇರಿ ನೀರು ವ್ಯವಸ್ಥೆಯನ್ನು ಆನೇಕಲ್‌, ಚಂದಾಪುರ ಸೂರ್ಯಸಿಟಿಗೆ ಕಲ್ಪಿಸಲಾಗಿದೆ. ಇನ್ನುಳಿದಂತೆ 7.5 ಎಂಎಲ್‌ಡಿ ನೀರನ್ನು ಹುಲಿಮಂಗಲ, ಹಾರಗದ್ದೆ, ಮಂಟಪ, ಹೆನ್ನಾಗರ, ಬನ್ನೇರುಘಟ್ಟ ಗ್ರಾಮ ಪಂಚಾಯಿತಿಗಳಿಗೆ‍ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿದ್ಯುತ್‌ ಚಿತಾಗಾರ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಸೀತನಾಯಕನಹಳ್ಳಿ ಮತ್ತು ನೊಸೇನೂರು ಗ್ರಾಮಗಳಲ್ಲಿ ಅಧಿಕಾರಿಗಳು ಸರ್ಕಾರಿ ಜಾಗ ಗುರುತಿಸಿ ಸ್ಮಶಾನ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಬಿಟಿಎಂ ವಿಧಾನಸಭಾ ಕ್ಷೇತ್ರದ ಶಾಸಕ ರಾಮಲಿಂಗಾರೆಡ್ಡಿ ಮಾತನಾಡಿ, ಬೆಂಗಳೂರಿಗೆ ಹೊಂದಿಕೊಂಡಿರುವ ಗ್ರಾಮ ಪಂಚಾಯಿತಿಗಳಲ್ಲಿ ಮೂಲಸೌಲಭ್ಯ ಅಭಿವೃದ್ಧಿಗೆ ಒತ್ತು ನೀಡಬೇಕು. ಆನೇಕಲ್‌ ತಾಲ್ಲೂಕಿನ 66 ಕೆರೆಗಳನ್ನು ತುಂಬಿಸುವ ಏತ ನೀರಾವರಿ ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿಯಿಂದ ತಾಲ್ಲೂಕಿನ ಗ್ರಾಮಗಳ ಅಂತರ್ಜಲಮಟ್ಟ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.

ಶಾಸಕ ಬಿ. ಶಿವಣ್ಣ ಮಾತನಾಡಿ, ತಾಲ್ಲೂಕಿನ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶ ಸೇರಿದಂತೆ ಎಲ್ಲಾ ಗ್ರಾಮಗಳಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಸೌಲಭ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಮೇಶ್‌, ಮುಖಂಡರಾದ ಎಚ್‌.ಎಸ್‌. ಬಸವರಾಜು, ಎನ್‌.ಬಿ.ಐ. ನಾಗರಾಜು, ಕೆ.ಎಸ್‌. ನಟರಾಜ್‌, ಆರ್‌.ಕೆ. ರಮೇಶ್‌, ರಾಜಗೋಪಾಲರೆಡ್ಡಿ, ಇಂಡ್ಲವಾಡಿ ನಾಗರಾಜು, ಹಾ.ವೇ. ವೆಂಕಟೇಶ್‌, ಶ್ರೀಧರ್‌, ದೊಡ್ಡಹಾಗಡೆ ಹರೀಶ್‌ಗೌಡ, ಅಚ್ಯುತರಾಜು, ದೀಪಿಕಾ ರೆಡ್ಡಿ, ಸಿಎನ್‌ ಆರ್‌  ರವಿಚಂದ್ರ, ವಿ.ಎನ್‌. ಶ್ರೀನಿವಾಸರೆಡ್ಡಿ, ಕೇಶವರೆಡ್ಡಿ, ಪ್ರಸನ್ನಕುಮಾರ್‌, ಮಂಜು, ಸಂಪಂಗಿ
ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.