ಗುರುವಾರ , ನವೆಂಬರ್ 14, 2019
19 °C

‘ಸೋಲು, ಗೆಲುವನ್ನು ಸಮನಾಗಿ ಸ್ವೀಕರಿಸಿ’

Published:
Updated:
Prajavani

ವಿಜಯಪುರ: ‘ವಿದ್ಯಾರ್ಥಿ ಜೀವನ ಕೇವಲ ಪಠ್ಯಪುಸ್ತಕಗಳ ಅಧ್ಯಯನ, ಅಂಕಗಳಿಗಷ್ಟೆ ಸೀಮಿತವಾಗಬಾರದು. ಕಲೆ, ಸಾಹಿತ್ಯ, ಕ್ರೀಡೆ ಮುಂತಾದ ಕ್ಷೇತ್ರಗಳ ಕಡೆಗೆ ಗಮನಹರಿಸಿದರೆ ಸಾಧನೆಗೆ ಹಾದಿ ಸುಗಮವಾಗುತ್ತದೆ’ ಎಂದು ನಾಗಾರ್ಜುನ ಕಾಲೇಜಿನ ಪ್ರಾಂಶುಪಾಲರಾದ ಡಾ.ಆನಂದಮ್ಮ ಹೇಳಿದರು.

ಇಲ್ಲಿನ ಇರಿಗೇನಹಳ್ಳಿ ಬಳಿಯ ನಾಗಾರ್ಜುನ ಕಾಲೇಜಿನ ಪದವಿ ವಿದ್ಯಾರ್ಥಿ ಮುನೇಗೌಡ ಬೆಂಗಳೂರು ವಿಶ್ವವಿದ್ಯಾಲಯದ ಅಂತರಕಾಲೇಜು ಕ್ರೀಡಾಕೂಟದಲ್ಲಿ ಗ್ರೀಕ್, ರೋಮನ್ ಶೈಲಿಯ ಕುಸ್ತಿ ಪಂದ್ಯದಲ್ಲಿ ಪ್ರಥಮ ಸ್ಥಾನ ಹಾಗೂ ಮೈಸೂರಿನಲ್ಲಿ ನಡೆದ ದಸರಾ ಕ್ರೀಡಾಕೂಟದ ಕುಸ್ತಿ ಪಂದ್ಯದಲ್ಲಿ ತೃತೀಯ ಸ್ಥಾನ ಪಡೆದಿದ್ದು ಅವರನ್ನು ಅಭಿನಂದಿಸಿ ಮಾತನಾಡಿದರು.

‘ಪ್ರತಿಯೊಂದು ಕ್ಷೇತ್ರವೂ ಸ್ಪರ್ಧೆಯಿಂದ ಕೂಡಿದೆ. ನಿರ್ದಿಷ್ಟ ಗುರಿ ಮುಟ್ಟಬೇಕಾದರೆ, ಶಿಸ್ತು, ಸಂಯಮ, ಏಕಾಗ್ರತೆ, ಸಾಧಿಸಬೇಕೆನ್ನುವ ಛಲವಿರಬೇಕು. ಮಾನಸಿಕ ತೊಳಲಾಟಗಳನ್ನು ಬದಿಗೊತ್ತಿ ಎಂತಹುದೇ ಸವಾಲುಗಳನ್ನು ಸುಲಭವಾಗಿ ಸ್ವೀಕರಿಸುವ ಮೂಲಕ ಮುಂದಿನ ಗುರಿಯನ್ನು ಸುಲಭವಾಗಿಸಿಕೊಳ್ಳಬೇಕು’ ಎಂದರು.

‘ಜೀವನದಲ್ಲಿನ ಒಂದು ಸೋಲು ನೂರು ಗೆಲುವುಗಳನ್ನು ತಂದುಕೊಡಬಲ್ಲದು. ಯಾವುದೇ ಕ್ಷೇತ್ರವಿರಲಿ, ಎದುರಾಳಿ ಎಷ್ಟು ಬಲಿಷ್ಠರು ಎನ್ನುವುದಕ್ಕಿಂತ ನಾವು ಎಲ್ಲಕ್ಕೂ ಸಮರ್ಥರಾಗಿದ್ದೇವೆ ಎನ್ನುವ ಆತ್ಮವಿಶ್ವಾಸವಿರಬೇಕು. ಉತ್ತಮ ಸಾಧನೆ ಮಾಡಿದಾಗ ಪ್ರೋತ್ಸಾಹ, ಪುರಸ್ಕಾರಗಳು ಸಿಗುತ್ತವೆ. ಸೋಲು ಕಂಡಾಗಲೂ ತಿರಸ್ಕಾರ, ಬಹಿಷ್ಕಾರಗಳು ಬರುತ್ತವೆ. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕು. ಆಗ ಮಾತ್ರ ಜೀವನದಲ್ಲಿ ಜಯ ಸಿಗುತ್ತದೆ’ ಎಂದು ಹೇಳಿದರು.

ದೈಹಿಕ ಶಿಕ್ಷಕ ಹರೀಶ್, ಕಾಲೇಜಿನ ಉಪನ್ಯಾಸಕ ವೃಂದದವರು ಇದ್ದರು.

ಪ್ರತಿಕ್ರಿಯಿಸಿ (+)