ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರು ಬದುಕಿರುವುದೇ ದೊಡ್ಡ ಪವಾಡ: ಎಲೆರಾಂಪುರದ ಡಾ.ಹನುಮಂತನಾಥ ಸ್ವಾಮೀಜಿ

ಹೋರಾಟಕ್ಕೆ ತಾರ್ಕಿಕ ಅಂತ್ಯ -
Last Updated 18 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಬಿಬಿಎಂಪಿ ಕಸ ವಿಲೇವಾರಿ ಘಟಕಗಳ ಸುತ್ತಲಿನ ಗ್ರಾಮಗಳ ಜನರು ನಿಜಕ್ಕೂ ಇನ್ನು ಬದುಕಿ ಉಳಿದಿರುವುದೇ ಒಂದು ದೊಡ್ಡ ಪವಾಡವಾಗಿದೆ. ಅಲ್ಲಿನ ಪರಿಸರ ಹಾಳಾಗಿರುವ ಬಗ್ಗೆ ಹೇಳಲು ಶಬ್ದಗಳೇ ಸಾಲುವುದಿಲ್ಲ’ ಎಂದು ಹೇಳಿದವರು ಬಿಬಿಎಂಪಿ ಕಸ ವಿಲೇವಾರಿ ಘಟಕದ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿ ನಿಂತಿದ್ದ ಕೊರಟಗೆರೆಯ ಎಲೆರಾಂಪುರದ ಕುಂಚಿಟಿಗರ ಮಠದ ಡಾ.ಹನುಮಂತನಾಥಸ್ವಾಮೀಜಿ.

ಬಿಬಿಎಂಪಿ ಕಸ ವಿಲೇವಾರಿ ಘಟಕಗಳ ವಿರುದ್ದದ ಹೋರಾಟದಲ್ಲಿ ಭಾಗವಹಿಸಲು ಕಾರಣವಾದ ಹಾಗೂ ಈ ಹೋರಾಟಕ್ಕೆ ತಾರ್ತಿಕ ಅಂತ್ಯ ಕಾಣಿಸುವ ಕುರಿತಂತೆ ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.

ಪೂಜೆಗೆ ಅಡ್ಡಿ; ಹೋರಾಟಕ್ಕೆ ಕಿಡಿ: ಗುಂಡ್ಲಹಳ್ಳಿ ಗ್ರಾಮದ ಸಮೀಪದಲ್ಲಿನ ಟೆರ‍್ರಾಫಾರಂ ಬಿಬಿಎಂಪಿ ಕಸ ವಿಲೇವಾರಿ ಘಟಕದ ಮಧ್ಯಭಾಗದಲ್ಲೇ ಮುಜರಾಯಿ ಇಲಾಖೆಗೆ ಸೇರಿರುವ ಶ್ರೀರಾಮದೇವಾಲಯ ಇದೆ. ಈ ದೇವಾಲಯದ ಜೀರ್ಣೋದ್ಧಾರದ ಪೂಜೆಗೆ ಅಲ್ಲಿನ ಗ್ರಾಮಸ್ಥರ ಆಹ್ವಾನದ ಮೇರೆಗೆ ಹೋಗಿದ್ದೆ. ಕಸದ ರಾಶಿಯ ಮಧ್ಯದಲ್ಲಿ ನಡೆದು ಹೋಗುವಾಗ ನರಕ ಬೇರೆಲ್ಲೂ ಇಲ್ಲ. ಅದು ಟೆರ‍್ರಾ ಫಾರಂ ನಲ್ಲೇ ಇದೆ ಅನ್ನಿಸಿತು. ಇಡೀ ದೇಹವನ್ನು ನೊಣಗಳು ಬಂದು ಮುತ್ತಿಕೊಳ್ಳುವುದು ಒಂದು ಕಡೆಯಾದರೆ, ಉಸಿರಾಡಲು ಸಾಧ್ಯವಾಗದಂತೆ ಮೂಗು ಮುಚ್ಚಿಕೊಂಡು ದೇವರ ಪೂಜೆ ನಡೆಸುವಂತಾಗಿತ್ತು. ಅಂದಿನ ಆ ದೃಶ್ಯಗಳೇ ನಾನು ಕಸದ ವಿರುದ್ಧ ನಡೆದ ಹೋರಾಟದಲ್ಲಿ ಭಾಗವಹಿಸಲು ಕಾರಣವಾಯಿತು’ ಎಂದರು.

‘ಬಿಬಿಎಂಪಿ ಕಸ ವಿಲೇವಾರಿಯ ಎರಡೂ ಘಟಕಗಳ ಸುತ್ತಲು ಇರುವ ಗ್ರಾಮಗಳ ಭಕ್ತರು ಮಠದಲ್ಲಿನ ದಾಸೋಹಕ್ಕೆ ನೀಡುತ್ತಿದ್ದ ರಾಗಿ, ಕಾಳು ಆಧಾರವಾಗಿವೆ. ಈ ಭಾಗದ ಭಕ್ತರ ಮನೆಗಳಲ್ಲಿನ ನಡೆಯುವ ಶುಭಕಾರ್ಯಗಳ ಸಂದರ್ಭದಲ್ಲಿ ಇಲ್ಲಿಗೆ ಬಂದಾಗ ದುರ್ನಾತವನ್ನು ಸಹಿಸಲು ಅಸಾಧ್ಯವಾಗಿದೆ. ಇಂತಹ ಪರಿಸರದಲ್ಲಿ ಈ ಜನ ಹೇಗೆ ಬದುಕಿದ್ದಾರೆ, ಮಕ್ಕಳ ಆರೋಗ್ಯದ ಸ್ಥಿತಿ ಹೇಗೆ, ಇಂತಹ ಪರಿಸರದಲ್ಲಿ ಬೆಳೆಯುವ ಮಕ್ಕಳ ಭವಿಷ್ಯ ಅದೆಷ್ಟು ಕರಾಳವಾಗಲಿದೆ ಎನ್ನುವುದು ಊಹೆಗೂ ನಿಲುಕದಾಗಿದೆ’ ಎಂದರು.

ಬಿಬಿಎಂಪಿ ಕಸ ವಿಲೇವಾರಿಯಿಂದ ಇಲ್ಲಿ ಉಂಟಾಗಿರುವ ಸಮಸ್ಯೆಗಳು, ನಿಯಮಗಳ ಉಲ್ಲಂಘನೆ ಈ ಎಲ್ಲಾ ವಿಷಯಗಳನ್ನು ದಾಖಲಾತಿಗಳೊಂದಿಗೆ ರಾಜ್ಯ ಹೈಕೋರ್ಟ್‌ನಲ್ಲೂ ಪ್ರಶ್ನಿಸುವ ಸಿದ್ದತೆಗಳು ಆರಂಭವಾಗಿವೆ. ಅಲ್ಲದೆ ನಮ್ಮ ಹೋರಾಟವನ್ನು ಸಹ ಮುಂದುವರಿಸಲಾಗುವುದು ಎಂದರು.

‘ಮುಖ್ಯಮಂತ್ರಿಗಳ ಸಭೆಯಲ್ಲಿ ನೀಡಿರುವ ಭರವಸೆಗಳು ಪಾಲನೆಯಾಗದೇ ಇದ್ದರೆ ಮತ್ತೆ ಹೋರಾಟವನ್ನು ಆರಂಭಿಸಲಾಗುವುದು. ಈ ಭಾಗದ ಜನ ನೆಮ್ಮದಿಯಾಗಿ ಬದುಕಬೇಕು, ಎತ್ತಿನಹೊಳೆಯಿಂದ ಬರುವ ನೀರು ಸಂಗ್ರಹವಾಗುತ್ತಿರುವ ಬೈರಗೊಂಡ್ಲು ಜಲಾಶಯದಲ್ಲಿನ ಕುಡಿಯುವ ನೀರು ಶುದ್ಧವಾಗಿ ಉಳಿಯಬೇಕು ಎನ್ನುವುದೇ ನಮ್ಮ ಹೋರಾಟದ ಮುಖ್ಯಗುರಿಯಾಗಿದೆ’ ಎನ್ನುತ್ತಾರೆ ಸ್ವಾಮೀಜಿ.

ಪರಿಣಾಮ ಬೀರದ ಧರಣಿ:ಟೆರ‍್ರಾ ಫಾರಂ ಕಸ ವಿಲೇವಾರಿ ಘಟಕದ ವಿರುದ್ಧ ಮಹಿಳೆಯರು ಮೊದಲಬಾರಿಗೆ ನಡೆಸಿದ ಹೋರಾಟಕ್ಕೆ ಹೋಲಿಕೆ ಮಾಡಿದರೆ ಇತ್ತೀಚೆಗಷ್ಟೇ ನಡೆದ ಏಳು ದಿನಗಳ ಧರಣಿ ಅಷ್ಟೇನು ಪರಿಣಾಮಕಾರಿಯಾಗಿ ನಡೆಯಲಿಲ್ಲ. ಟೆರ‍್ರಾ ಫಾರಂ ಕಸ ವಿಲೇವಾರಿ ಘಟಕ ಕುರಿತಂತೆ ಹೋರಾಟಗಾರರು ತಲೆಕೆಡಿಸಿಕೊಂಡಷ್ಟು ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದ ವಿರುದ್ಧ ತಲೆಕೆಡಿಸಿಕೊಳ್ಳುತ್ತಿಲ್ಲ, ಆಕ್ರೋಶವು ಕಾಣುತ್ತಿಲ್ಲ. ಈ ತಾರತಮ್ಯದ ಧೋರಣೆ ಬದಲಾಗಬೇಕು. ಇಲ್ಲಿಗೆ ಕಸ ಬರದಂತೆ ತಡೆಯಬೇಕು ಎನ್ನುವುದಷ್ಟೇ ನಮ್ಮ ಹೋರಾಟದ ಮುಖ್ಯ ಗುರಿಯಾಗಬೇಕು ಎಂದು ಸ್ವಾಮೀಜಿ ಹೇಳಿದರು.

ಸರಣಿ ವರದಿಗಳ ಪ್ರಸ್ತಾವ:ಧರಣಿಯನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಕ್ಕೂ ಮುನ್ನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಸ ಕಂಟಕ ಕುರಿತು ಪ್ರಜಾವಾಣಿಯಲ್ಲಿ ಬಂದಿರುವ ಸರಣಿ ವರದಿಗಳನ್ನು ಗಮನಕ್ಕೆ ತರಲಾಗಿತ್ತು. ಈ ವರದಿಗಳ ಪರಿಣಾಮವು ಸಹ ಮತ್ತೆ ಟೆರ್ರಾಫಾರ್ಮ ಕಸ ವಿಲೇವಾರಿ ಘಟಕವನ್ನು ಆರಂಭಿಸದೇ ಇರಲು ಹಾಗೂ ಈಗ ಕಾರ್ಯನಿರ್ವಹಿಸುತ್ತಿರುವ ಎಂಎಸ್‌ಜಿಪಿ ಕಸ ವಿಲೇವಾರಿ ಘಕವನ್ನು ಶೀಘ್ರವಾಗಿ ಸ್ಥಗಿತಗೊಳಿಸುವ ಭರವಸೆ ನೀಡಲು ಸಹಕಾರಿಯಾಗಿದೆ ಎಂದು ಸ್ವಾಮೀಜಿ ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT