ಶನಿವಾರ, ಮಾರ್ಚ್ 28, 2020
19 °C
ಜನ, ಜಾನುವಾರುಗಳಿಗೆ ವಿಷಯುಕ್ತ ನೀರು ಸರಬರಾಜು ಆಗುವುದು ಖಚಿತ * ರೈತರ ಆತಂಕ

ಎತ್ತಿನಹೊಳೆ ಕುಡಿಯುವ ನೀರಿಗೂ ಕಂಟಕ   

-ನಟರಾಜ ನಾಗಸಂದ್ರ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಬಿಬಿಎಂಪಿ ವ್ಯಾಪ್ತಿಯಿಂದ ತಾಲ್ಲೂಕಿಗೆ ತಂದು ಅವೈಜ್ಞಾನಿಕವಾಗಿ ಸುರಿಯುತ್ತಿರುವ ಕಸದ ರಾಶಿಯಿಂದ ಎತ್ತಿನಹೊಳೆಯಿಂದ ನೀರು ಸಂಗ್ರಹಿಸಲು ನಿರ್ಮಿಸಲಾಗುತ್ತಿರುವ ಬೈರಗೊಂಡ್ಲು ಜಲಾಶಯಕ್ಕೂ ಕಂಟಕ ಎದುರಾಗಿದೆ.

ಮಳೆಗಾಲದಲ್ಲಿ ನೀರು ಹರಿದು ಹೋಗುವ ಜಲಾನಯನ ಪ್ರದೇಶದ ಬಹುತೇಕ ಭಾಗ ಇರುವುದೇ ಎಂಎಸ್‌ಜಿಪಿ ಮತ್ತು ಟೆರ್ರಾ ಫಾರಂ ಘಟಕಗಳ ವ್ಯಾಪ್ತಿಯಲ್ಲಿ. ಇಲ್ಲಿನ ಭೌಗೋಳಿಕ ಲಕ್ಷಣ ನೋಡಿದರೆ ಇದು ಅರ್ಥವಾಗುತ್ತದೆ. ಇನ್ನು ಸ್ಪಷ್ಟವಾಗಿ ತಿಳಿಯಲು ಗೂಗಲ್‌ ಮ್ಯಾಪ್‌ ತೆರೆದು ನೋಡಿದರೆ ಬಿಬಿಎಂಪಿ ಕಸ ವಿಲೇವಾರಿ ಘಟಕ ಇರುವ ಮಧ್ಯಭಾಗದಲ್ಲಿ ಹಾದು ಹೋಗಿರುವ ರಾಜಕಾಲುವೆ, ನೀರು ಸಂಗ್ರಹವಾಗುವ ಸರ್ಕಾರಿ ಕುಂಟೆಗಳನ್ನು ಕಂದಾಯ ಇಲಾಖೆ ಗುರುತು ಮಾಡಿರುವುದನ್ನು ಕಾಣಬಹುದು.

ಕಸ ವಿಲೇವಾರಿ ಘಟಕಗಳ ಸುತ್ತಲಿನ ಕೆರೆಗಳ ಮುಖ್ಯ ಜಲಾನಯನ ಪ್ರದೇಶವೂ ಇದೇ ಆಗಿರುವುದರಿಂದ ಮಳೆಗಾಲದಲ್ಲಿ ಕಸದ ರಾಶಿಗಳಿಂದ ಹರಿದು ಬರುವ ಕಲುಷಿತ ನೀರನ್ನು ಕುಡಿದು ಹಸುಗಳು ಸಾವನ್ನಪ್ಪಿರುವ ಕುರಿತು 2015ರ ಸೆಪ್ಟಂಬರ್‌ನಲ್ಲಿ ಸಕ್ಕರೆಗೊಲ್ಲಹಳ್ಳಿ ಗ್ರಾಮದ ನಾಗರಾಜ್‌ ಅವರು ಟೆರ್ರಾ ಫಾರಂ ಮಾಲೀಕರ ವಿರುದ್ಧ ನೀಡಿರುವ ದೂರು (ಪ್ರಕರಣದ ಸಂಖ್ಯೆ 198/15, 429 ಜತೆಗೆ 34ಐಪಿಸಿ) ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

ಘನತ್ಯಾಜ್ಯ ಸುರಿಯಬೇಕಾದ ಸ್ಥಳದಲ್ಲಿ ಬಯೋಕಾನ್ ದ್ರವ್ಯ ತಂದು ಸುರಿಯುತ್ತಿದ್ದ ಲಾರಿಯನ್ನು ಸ್ಥಳೀಯ ನಿವಾಸಿಗಳು ರಸ್ತೆಯಲ್ಲಿಯೇ ತಡೆದು ನಿಲ್ಲಿಸು ಪೊಲೀಸರಿಗೆ ಒಪ್ಪಿಸಿ ದೂರು ದಾಖಲಿಸಿದ್ದರು. (ಪ್ರಕರಣ ಸಂಖ್ಯೆ 179/15, 323, 269, 270, 277, 273, 284, 120(ಬಿ) ಜತೆಗೆ 34 ಐಪಿಸಿ) ಈ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ 2019ರ ಫೆಬ್ರುವರಿ 22ರಂದು ಖುಲಾಸೆಗೊಳಿಸಿದೆ.

ಕಸದ ರಾಶಿಯನ್ನು ಸೂಕ್ತ ರೀತಿಯಲ್ಲಿ ತೆರವುಗೊಳಿಸಲು ಇಂದಿನಿಂದಲೇ ಆರಂಭಿಸಿದರೂ ಕನಿಷ್ಠ ಹತ್ತು ವರ್ಷ ಆಗಲಿದೆ. ಅಷ್ಟೊಂದು ಭೀಕರ ಪರಿಸ್ಥಿತಿಯನ್ನು ಕಸದ ರಾಶಿಗಳು ಸೃಷ್ಟಿ ಮಾಡಿವೆ. ಈ ಭಾಗದಲ್ಲಿ ಈಗಾಗಲೇ ಅಂತರ್ಜಲ ಮಟ್ಟವೂ ಕಲುಷಿತಗೊಂಡಿದೆ. ಕೊಳವೆ ಬಾವಿಗಳ ನೀರನ್ನು ನೇರವಾಗಿ ಕುಡಿಯಲು ಸಾಧ್ಯವಿಲ್ಲದಂತಾಗಿವೆ.

‌ಮನೆ ಬಳಕೆಗೆಂದು ಕೊಳವೆ ಬಾವಿಗಳ ನೀರು ಸಂಗ್ರಹಿಸಿ ಐದಾರು ಗಂಟೆಗಳ ಕಾಲ ಬಿಂದಿಗೆ, ತಪ್ಪಲೆಗಳಲ್ಲಿ ಇಟ್ಟರೆ ನೀರಿನ ಬಣ್ಣವೇ ಬದಲಾಗುತ್ತದೆ. ಇಂತಹ ಸ್ಥಿತಿಯಲ್ಲಿ ಬೈರಗೊಂಡ್ಲು ಜಲಾಶಯಕ್ಕೆ ಕೂಗಳತೆ ದೂರದಲ್ಲಿರುವ ಬಿಬಿಎಂಪಿ ಕಸ ವಿಲೇವಾರಿ ಘಟಕಗಳಿಂದ ಮಳೆಗಾಲದಲ್ಲಿ ನೀರು ಪಶ್ಚಿಮಾಭಿಮುಖವಾಗಿ ಮತ್ತು ಉತ್ತಾರಭಿಮುಖವಾಗಿ ಹರಿದು ಹೋಗಿ ಜಲಾಶಯ ಸೇರುತ್ತದೆ.

‌ಬೈರಗೊಂಡ್ಲು ಕುಡಿಯುವ ನೀರು ಸಂಗ್ರಹ ಜಲಾಶಯದಿಂದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಕೊರಟಗೆರೆ, ಮಧುಗಿರಿ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ಜನ, ಜಾನುವಾರಿಗಳಿಗೆ ವಿಷಯುಕ್ತ ನೀರು ಸರಬರಾಜು ಆಗುವುದು ಖಚಿತ ಎನ್ನುತ್ತಾರೆ ಈ ಭಾಗದ ಹಿರಿಯ ರೈತರು.

ಬೆಳೆಗಳಿಗೂ ಉಳಿಗಾಲವಿಲ್ಲ: ಗುಂಡ್ಲಹಳ್ಳಿ ಗ್ರಾಮದ ಟೆರ್ರಾ ಫಾರಂ ಹಾಗೂ ಎಂಎಸ್‌ಜಿಪಿ ಘಟಕದಲ್ಲಿ ಬಿಬಿಎಂಪಿ ಕಸ ತಂದು ಸುರಿಯುತ್ತಿರುವುದರಿಂದ ಸುತ್ತಲಿನ ಪರಿಸರ ಮಾಲಿನ್ಯ ಉಂಟಾಗಿದೆ. ಅಲ್ಲದೆ, ಕಾಡು ಪ್ರಾಣಿಗಳಿಂದ ರೈತರ ಬೆಳೆಗಳಿಗೂ ಉಳಿಗಾಲ ಇಲ್ಲದಂತಾಗಿದೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)