ಬರ: ಸಮರ್ಪಕವಾಗಿ ನಿಭಾಯಿಸಲು ಸೂಚನೆ

ಭಾನುವಾರ, ಮಾರ್ಚ್ 24, 2019
27 °C
ದೇವನಹಳ್ಳಿ: ತಾಲ್ಲೂಕಿನ 81 ‌ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಸಾಧ್ಯತೆ

ಬರ: ಸಮರ್ಪಕವಾಗಿ ನಿಭಾಯಿಸಲು ಸೂಚನೆ

Published:
Updated:
Prajavani

 ದೇವನಹಳ್ಳಿ: ತಾಲ್ಲೂಕಿನ 24‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ 81 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ ಎಂದು ತಾಲ್ಲೂಕು ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ ಸಹಾಯಕ ಎಂಜಿನಿಯರ್ ಸೋಮಶೇಖರ್ ತಿಳಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಬರಗಾಲ ಘೋಷಣೆಯಾದ ನಂತರ ಎರಡು ಹಂತದಲ್ಲಿ ₹50 ಲಕ್ಷ ವೆಚ್ಚದಲ್ಲಿ ಕೊರೆಯಿಸಲಾದ ಒಟ್ಟು 36 ಕೊಳವೆ ಬಾವಿಗಳ ಪೈಕಿ 15ರಲ್ಲಿ ಮಾತ್ರ ನೀರು ಸಿಕ್ಕಿದೆ. 1350 ಅಡಿ ಕೊರೆಯಿಸಿದರೂ ನೀರು ಸಿಗುವ ಖಾತರಿ ಇಲ್ಲ ಎಂದು ಹೇಳಿದರು.

ಇಒ ಮುರುಡಯ್ಯ ಮಾತನಾಡಿ, ಬರಗಾಲ ನಿರ್ವಹಣೆ ಅನುದಾನ ಕಳೆದ ಎರಡು ವರ್ಷಗಳ ಉಳಿಕೆ ಹಣ ₹24 ಲಕ್ಷ ಇದುವರೆಗೆ ಬಂದಿಲ್ಲ. ಫೆ.15ರಿಂದ ಫೆ.24ರವರೆಗೆ ಭಟ್ರೇನಹಳ್ಳಿ, ಬಿಜ್ಜವಾರ, ಕೊಯಿರಾ, ಕುಂದಾಣ, ವೆಂಕಟಗಿರಿಕೋಟೆ ಗ್ರಾಮಗಳಲ್ಲಿ ಟ್ಯಾಂಕರ್ ನೀರು ಪೂರೈಕೆ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಮಾಹಿತಿ ನೀಡಿ, 2018ನೇ ಸಾಲಿನಲ್ಲಿ ಬರಗಾಲ ಘೋಷಣೆಯಾದ ನಂತರ 7423 ಬೆಳೆ ನಷ್ಟಕ್ಕೆ ಒಳಪಡುವ ಅರ್ಹ ರೈತರರಿಗೆ ಒಟ್ಟು ₹4 ಕೋಟಿ ಪರಿಹಾರಕ್ಕೆ ಶಿಫಾರಸು ಮಾಡಲಾಗಿದೆ. ಸಣ್ಣ ಮತ್ತು ಅತಿಸಣ್ಣ ರೈತರಿಗೆ ಆದ್ಯತೆ ನೀಡಲಾಗಿದೆ. ಪ್ರತಿ ಎಕರೆಗೆ ₹2600 ಪರಿಹಾರ ಸಿಗಲಿದೆ. ಪರಿಹಾರ ನೀಡುವ ಜವಾಬ್ದಾರಿ ಕಂದಾಯ ಇಲಾಖೆಯದ್ದು ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷಣ್‌ಗೌಡ ಮಾತನಾಡಿ, ಬರಗಾಲ ಸಮೀಕ್ಷೆ ನಡೆಸಲಾಗಿದೆ. ಆದರೆ, ಇದುವರೆಗೂ ಪರಿಹಾರ ಸಿಗಲಿಲ್ಲ. ಕೇಂದ್ರ ಸರ್ಕಾರ ಬರ ಅಧ್ಯಯನ ತಂಡ ಇದುವರೆಗೂ ಇತ್ತ ಸುಳಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕಿ ಅಶ್ವಥಮ್ಮ ಮಾಹಿತಿ ನೀಡಿ, ತಾಲ್ಲೂಕಿನಲ್ಲಿ 263 ಅಂಗನವಾಡಿ ಕೇಂದ್ರಗಳಿವೆ. 550 ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಎರಡು ತಿಂಗಳಿಂದ ವೇತನ ನೀಡಿಲ್ಲ. ಪ್ರತಿಯೊಂದು ಮಾಹಿತಿ ಅಪ್ ಲೋಡ್ ಮಾಡಬೇಕಾಗಿರುವುದರಿಂದ ವಿಳಂಬವಾಗಿದೆ. ಅಪೌಷ್ಟಿಕತೆಯಿಂದ ನರಳುತ್ತಿರುವ 7 ಮಂದಿ ಮಕ್ಕಳಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.

ಇದಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಗರಂ ಆಗಿ ಪ್ರತಿಕ್ರಿಯಿಸಿದರು. ಮಧ್ಯೆ ಪ್ರವೇಶಿಸಿದ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ರಾಧಮ್ಮ ಮುನಿರಾಜು ಮತ್ತು ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಅನೇಕ ಅಂಗನವಾಡಿಗಳಲ್ಲಿ ಹಗಲು ವೇಳೆಯಲ್ಲೇ ಅಕ್ಕಿ ಕಳವು ಮಾಡಲಾಗುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಮಂಜುನಾಥ್ ಮಾತನಾಡಿ, ವಿಶ್ವನಾಥಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಮುಖ್ಯರಸ್ತೆಯವರೆಗೆ ಸಿಮೆಂಟ್ ರಸ್ತೆಗೆ ಕ್ರಿಯಾ ಯೋಜನೆ ರೂಪಿಸಿ ಎಂದು ಜಿಲ್ಲಾ ಪಂಚಾಯಿತಿ ಸಹಾಯಕ ಎಂಜಿನಿಯರ್ ಮಂಜುನಾಥ್‌ಗೆ ಸೂಚಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕನ್ಯಾಕುಮಾರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !