ಮಹಿಳೆಯರಿಗೆ ಮುಳುವಾಗುತ್ತಿರುವ ತಂತ್ರಜ್ಞಾನ

ಶನಿವಾರ, ಮಾರ್ಚ್ 23, 2019
28 °C
ಹಿರಿಯ ಪತ್ರಕರ್ತೆ ಸಿ.ಜಿ.ಮಂಜುಳಾ ವಿಷಾದ

ಮಹಿಳೆಯರಿಗೆ ಮುಳುವಾಗುತ್ತಿರುವ ತಂತ್ರಜ್ಞಾನ

Published:
Updated:
Prajavani

ದೊಡ್ಡಬಳ್ಳಾಪುರ: ಮಹಿಳೆಯ ಜೀವ ಉಳಿಸಲು ಅವಿಷ್ಕಾರಗೊಂಡ ತಂತ್ರಜ್ಞಾನ ಇಂದು ಹೆಣ್ಣು ಕುಲವನ್ನೇ ನಾಶ ಮಾಡುವುದಕ್ಕೆ ಬಳಸುತ್ತಿರುವುದು ದುರಂತದ ಸಂಗತಿ ಎಂದು ಹಿರಿಯ ಪತ್ರಕರ್ತೆ ಸಿ.ಜಿ.ಮಂಜುಳಾ ಅವರು ವಿಷಾದ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಸಾಧಕಿಯರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

’ತಾಯ್ತನದ ಸಂದರ್ಭದಲ್ಲಿ ಉಂಟಾಗುತ್ತಿದ್ದ ಸಮಸ್ಯೆಗಳನ್ನು ಪತ್ತೆಹಚ್ಚಿ ಗುಣಪಡಿಸಲು ಸ್ಕ್ಯಾನಿಂಗ್ ಸೇರಿದಂತೆ ಹಲವಾರು ತಂತ್ರಜ್ಞಾನ ಅವಿಷ್ಕಾರಗಳು ನಡೆದಿವೆ. ಆದರೆ, ಇದೇ ತಂತ್ರಜ್ಞಾನದಿಂದ ಹೆಣ್ಣು ಸಂತಾನವನ್ನೇ ನಾಶ ಮಾಡಲು ಬಳಸುತ್ತಿದ್ದಾರೆ‘ ಎಂದರು.

’ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಹೆಣ್ಣು ಭ್ರೂಣ ಹತ್ಯೆಗಳು ಈಗ ದಕ್ಷಿಣ ಭಾರತದಲ್ಲೂ ನಡೆಯುತ್ತಿರುವುದು ವರದಿಯಾಗುತ್ತಿದೆ. ಸುಶಿಕ್ಷಿತ ವರ್ಗದಲ್ಲೂ ಹೆಣ್ಣನ್ನು ತಾತ್ಸಾರ ಮನೋಭಾವದಿಂದ ನೋಡಲಾಗುತ್ತಿದೆ. ಜತೆಗೆ ಅವರು ಬೆಳೆಯುವ ಹಂತದಿಂದಲೇ ನಾವು ತಾರತಮ್ಯ ಮಾಡುತ್ತಿದ್ದೇವೆ. ನಮ್ಮಲ್ಲಿನ ಈ ಧೋರಣೆ ಬದಲಾಗಬೇಕಿದೆ. ಮಹಿಳೆಯರಿಗೆ ಮನೆ ಒಳಗಿನ ಶತ್ರುಗಳನ್ನು ಎದುರಿಸುವುದೇ ಕಷ್ಟವಾಗುತ್ತಿದೆ‘ ಎಂದರು.

’ಮಹಿಳಾ ಅಧ್ಯಯನವು ಒಂದು ಮುಖ್ಯ ಶಾಖೆಯಾಗಿ ಬೆಳೆದಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವ ತಾರತಮ್ಯ ಗಾರ್ಮೆಂಟ್ಸ್‌ಗಳಲ್ಲಿ ಮಾತ್ರ ಇಲ್ಲ. ಇನ್ನುಳಿದ ಕ್ಷೇತ್ರಗಳಲ್ಲಿ ಈ ತಾರತಮ್ಯವಿದೆ. ಸಿನಿಮಾ ರಂಗದಲ್ಲಿ ನೋಡಿದರೆ ಸಹ ನಾಯಕ ನಟರಿಗೆ ನೀಡುವಷ್ಟು ಸಂಭಾವನೆ ನಾಯಕಿಯರಿಗೆ ಇಲ್ಲದಾಗಿದೆ. ದೇಶದ ಆರ್ಥಿಕ ಬೆಳವಣಿಗೆಯ ಜಿಡಿಪಿ ವೃದ್ಧಿಗೆ ಮಹಿಳೆಯರು ಮನೆಗಳಲ್ಲಿ ಮಾಡುವ ಕೆಲಸವನ್ನು ಉದ್ಯೋಗ ಎಂದು ಗುರುತಿಸಲಾಗುತ್ತಿದೆ‘ ಎಂದರು.

ಮಹಿಳಾ ಸಮಾಜದ ಅಧ್ಯಕ್ಷೆ ಕೆ.ಎಸ್.ಪ್ರಭಾ ಮಾತನಾಡಿ, ’ಮಹಿಳೆಯರಿಗೆ ಈಗ ಸಿಕ್ಕಿರುವ ಹಕ್ಕುಗಳು ಅವರ ಹೋರಾಟದ ಫಲವಾಗಿದೆ. ದೇಶ ಅಭಿವೃದ್ಧಿ ಕಾರ್ಯದಲ್ಲಿ ಅವರ ಸಾಧನೆ ಅಭೂತಪೂರ್ಣವಾದದ್ದು. ಎಲ್ಲ ಕ್ಷೇತ್ರಗಳಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಶಿಕ್ಷಣದಿಂದಾಗಿ ಆಕೆ ಸಾಂಪ್ರದಾಯಿಕ ಚೌಕಟ್ಟು ಮೀರಿ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ‘ ಎಂದರು.

’ಮದುವೆ ಎಂದರೆ ಹೆಣ್ಣು ಆಧೀನಳು ಎನ್ನುವ ಧೋರಣೆ ಬದಲಾಗಬೇಕು. ಹೆಣ್ಣು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಗಂಡಸರು ಸಹ ಅವರ ಘನತೆ, ಗೌರವ ಹೆಚ್ಚಿಸಲು ಪೂರಕವಾಗಬೇಕು. ಉದ್ಯೋಗ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಹಿಳೆಗೆ ಭದ್ರತೆ ಇಲ್ಲದಿರುವುದು ಆತಂಕಕಾರಿ ಸಂಗತಿಯಾಗಿದೆ. ಹೆಣ್ಣು ಮತ್ತು ಗಂಡು ಇಬ್ಬರು ಪರಸ್ಪರ ಪ್ರೀತಿ, ಗೌರವಗಳಿಂದ ಬದುಕು ನಡೆಸಿದರೆ ಯಶಸ್ವಿ ಕುಟುಂಬಗಳಾಗುತ್ತವೆ‘ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಪಿ.ರಾಜಣ್ಣ ವಹಿಸಿದ್ದರು. ಇದೇ ಸಂದರ್ಭದಲ್ಲಿ ಜನಪದ ಗಾಯನದಲ್ಲಿ ಹೆಸರುವಾಸಿಯಾಗಿರುವ ಮಹಿಳಾ ಸಾಧಕಿ ಪಿಳ್ಳಮ್ಮ ಅವರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಮಹಿಳಾ ವೇದಿಕೆಯ ಸಂಯೋಜಕಿ ಶೈಲ, ಸಂಧ್ಯಾರಾಣಿ, ಉಪನ್ಯಾಸಕರಾದ ಶ್ರೀನಿವಾಸಯ್ಯ, ಸದಾಶಿವರಾಮಚಂದ್ರಗೌಡ ಮಾತನಾಡಿದರು. ಪ್ರಸ್ತಾವಿಕವಾಗಿ ವಿದ್ಯಾರ್ಥಿ ವಿಷ್ಣುಪ್ರಸಾದ್ ಮಾತನಾಡಿದರು. ಶರತ್, ಪೂಜಾದೇವಿ ಕಾರ್ಯಕ್ರಮ ನಿರೂಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !