ಗುರುವಾರ , ಫೆಬ್ರವರಿ 25, 2021
29 °C

ಪಕ್ಷಿ ವೀಕ್ಷಣೆಗೆ ಬೈನಾಕುಲರ್ ಕೊಡಿಸಿದ ಡಿವೈಎಸ್‌ಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ನಗರದ ಯುವ ಸಂಚಲನ ತಂಡದ ಸದಸ್ಯರು ಪಕ್ಷಿ ವೀಕ್ಷಣೆ ಮಾಡಲು ಸಹಾಯಕವಾಗುವಂತೆ ಡಿವೈಎಸ್‌ಪಿ ಆರ್‌.ಮೋಹನ್‌ಕುಮಾರ್‌ ಬೈನಾಕುಲರ್‌ ಕೊಡಿಸಿದ್ದಾರೆ.

ತಾಲ್ಲೂಕಿನ ಕಾಡನೂರು ಕೈ ಮರ ಸಮೀಪದ ಗಂಡ್ರಗೊಳ್ಳಿಪುರ ಅರಣ್ಯ ಪ್ರದೇಶದಲ್ಲಿ ಏಪ್ರಿಲ್‌, ಮೇ ತಿಂಗಳಲ್ಲಿ ನೀರು, ಆಹಾರದ ತೀವ್ರ ಕೊರತೆಯಿಂದ ಬಸವಳಿದು ಕಂಗಾಲಾಗಿದ್ದ ಪಕ್ಷಿಗಳಿಗೆ ಯುವ ಸಂಚಲನ ತಂಡದ ಸದಸ್ಯರು ಆಹಾರ, ನೀರಿನ ಸೌಲಭ್ಯ ಕಲ್ಪಿಸಿದ್ದರು.

ಈ ಕಿರು ಅರಣ್ಯ ಪ್ರದೇಶಕ್ಕೆ ಬರುವ ಪಕ್ಷಿಗಳ ಕುರಿತು ಮಾಹಿತಿ ಸಂಗ್ರಹಿಸಿದ್ದ ಯುವ ಸಂಚಲನ ತಂಡದವರು ಇಲ್ಲಿನ ಪಕ್ಷಿಗಳಿಗೆ ಅಗತ್ಯ ಇರುವ ಸಿರಿಧಾನ್ಯಗಳನ್ನು ಕುಡಿಯುವ ನೀರಿನ ಖಾಲಿಬಾಟಲಿಗಳಿಗೆ ತುಂಬಿ, ಬಾಟಲಿಯ ತಳಭಾಗದಲ್ಲಿ ಒಂದು ಸಣ್ಣ ರಂದ್ರವನ್ನು ಕೊರೆದು ಅದಕ್ಕೆ ಚಮಚ, ಒಂದು ಸಣ್ಣ ಕಡ್ಡಿಯನ್ನು ಸೇರಿಸಿದ್ದರು. ಈ ಕಡ್ಡಿಗಳ ಮೇಲೆ ಪಕ್ಷಿಗಳು ಕುಳಿತು ಧಾನ್ಯವನ್ನು ತಿನ್ನಲು ಆರಂಭಿಸಿದರೆ ಆಹಾರ ಧಾನ್ಯ ಬಾಟಲಿಯಿಂದ ಚಮಚಕ್ಕೆ ಬಂದು ಸೇರುವಂತೆ ವ್ಯವಸ್ಥೆ ಮಾಡಲಾಗಿತ್ತು. ಇದೇ ರೀತಿ ನೀರಿನ ಬಾಟಲಿಗಳನ್ನು ಆಹಾರದ ಬಾಟಲಿ ನೇತು ಹಾಕಿರುವ ಮರಗಳಲ್ಲಿಯೇ ನೇತು ಹಾಕಿ ಪಕ್ಷಿಗಳು ಸುಲಭವಾಗಿ ನೀರು ಕುಡಿಯಲು ಸಹಾಯವಾಗುವಂತೆ ಬಾಟಲಿಯ ಅರ್ಧ ಭಾಗವನ್ನು ಕತ್ತರಿಸಲಾಗಿತ್ತು. ವಾರದಲ್ಲಿ ಎರಡು ದಿನ ಬಾಟಲಿಗಳು ಖಾಲಿಯಾಗುತಿದ್ದಂತೆ ಆಹಾರ ಧಾನ್ಯ, ನೀರು ತುಂಬಿ ಬರುತಿದ್ದರು.

ಯುವ ಸಂಚಲನ ತಂಡದ ಸದಸ್ಯರು ಪಕ್ಷಿಗಳ ಬಗ್ಗೆ ವಹಿಸಿದ್ದ ಕಾಳಜಿಯ ಕುರಿತಂತೆ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಈ ವರದಿಯನ್ನು ಓದಿದ ಡಿವೈಎಸ್‌ಪಿ ಆರ್‌.ಮೋಹನ್‌ಕುಮಾರ್‌ ಅವರು ನಮ್ಮ ತಂಡದ ಸದಸ್ಯರನ್ನು ಆಹ್ವಾನಿಸಿ ಪಕ್ಷಿಗಳಿಗೆ ಅಗತ್ಯ ಇರುವ ಸಿರಿಧಾನ್ಯಗಳ ಖರೀದಿಗೆ ಹಣ ಸಹಾಯ ಮಾಡಿದ್ದರು ಎಂದು ನೆನಪು ಮಾಡಿಕೊಂಡ ಯುವ ಸಂಚಲನ ತಂಡದ ಅಧ್ಯಕ್ಷ ಚಿದಾನಂದ್‌, ಈಗ ಪಕ್ಷಿಗಳ ವೀಕ್ಷಣೆಗೆ ಸಹಾಯಕವಾಗಲಿ ಎಂದು ಆಧುನಿಕವಾಗಿರುವ ಬೈನಾಕುಲರ್‌ಗಳನ್ನು ಸಹ ಕೊಡಿಸಿದ್ದಾರೆ. ಇದರಿಂದ ಪೊಲೀಸರ ಬಗ್ಗೆ ನಮ್ಮಲ್ಲಿದ್ದ ಭಾವನೆಯೇ ಬದಲಾಗಿದೆ. ಪಕ್ಷಿಗಳಿಗೂ ಪೊಲೀಸರಿಗೂ ಎತ್ತಣಿಂದೆತ್ತ ಸಂಬಂಧವಯ್ಯ ಎನ್ನುವಂತಾಗಿದೆ ಎಂದರು.

ಡಿವೈಎಸ್‌ಪಿ ಅವರು ಬೈನಾಕುಲರ್ ಕೊಡಿಸಿರುವುದರಿಂದ ಪಕ್ಷಿಗಳು ಅದೆಷ್ಟೇ ದೂರದಲ್ಲಿ ಇದ್ದರು ಸಹ ಅವುಗಳನ್ನು ವೀಕ್ಷಣೆ ಮಾಡಲು, ಅವುಗಳ ಚಲನವಲದ ಬಗ್ಗೆ ತಿಳಿಯಲು ಸಹಕಾರಿಯಾಗಿದೆ. ಡಿವೈಎಸ್‌ಪಿ ಮೋಹನ್‌ಕುಮಾರ್‌ ಅವರಿಂದ ಬೈನಾಕುಲರ್‌ ಪಡೆದಿದ್ದರಿಂದ ಪಕ್ಷಿಗಳ ಉಳಿವಿನ ಕುರಿತಂತೆ ಮತ್ತಷ್ಟು ಹೆಚ್ಚಿನ ಕೆಲಸ ಮಾಡುವ ಹೊಣೆಗಾರಿಕೆ ಬಂದಿದೆ ಎನ್ನುತ್ತಾರೆ ಚಿದಾನಂದ್‌.

ಯುವ ಸಂಚಲನ ತಂಡಕ್ಕೆ ಪಕ್ಷಿ ವೀಕ್ಷಣೆಗೆ ಬೈನಾಕುಲರ್‌ ಕೊಡಿಸಲು ಕಾರಣವೇನು ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಡಿವೈಎಸ್‌ಪಿ ಆರ್.ಮೋಹನ್‌ಕುಮಾರ್‌ ‘ಮೈಸೂರು ಜಿಲ್ಲೆಯ ಕಬಿನಿ ಡ್ಯಾಂ ಸಮೀಪದ ಬೀಚನಹಳ್ಳಿ ಠಾಣೆಯಲ್ಲಿ ಸಬ್‌ಇನ್‌ಸ್ಪೆಕ್ಟರ್‌ ಸೇವೆ ಸಲ್ಲಿಸುತಿದ್ದ ಸಂದರ್ಭದಲ್ಲಿ ಹತ್ತಿರದಲ್ಲೇ ಅರಣ್ಯ ಪ್ರದೇಶ ಇತ್ತು. ಸ್ನೇಹಿತರೊಂದಿಗೆ ಅರಣ್ಯ ಸುತ್ತಾಡಲು ಹೋಗುತಿದ್ದಾಗ ಪಕ್ಷಿಗಳನ್ನು ಗುರುತಿಸುವ ಹವ್ಯಾಸ ಬೆಳೆಯಿತು. ಸಲಿಂಅಲಿ, ಪೂರ್ಣಚಂದ್ರತೇಜಸ್ವಿ ಅವರು ಬರೆದಿರುವ ಪಕ್ಷಿಗಳ ಕುರಿತ ಪುಸ್ತಕಗಳನ್ನು ಓದಿದೆ. ಅಂದಿನಿಂದಲೂ ಬಿಡುವಿನ ಸಂದರ್ಭಗಳಲ್ಲಿ ಇಂದಿಗು ಸಹ ಪಕ್ಷಿಗಳನ್ನು ವೀಕ್ಷಣೆ ಮಾಡುವುದು. ಅವುಗಳನ್ನು ಗುರುತಿಸುವುದು ಒಂದು ಹವ್ಯಾಸವಾಗಿ ಬೆಳೆದು ಬಂದಿದೆ. ಸದಾ ಒಂದಲ್ಲಾ ಒಂದು ಒತ್ತಡದಲ್ಲಿ ಕೆಲಸ ಮಾಡುವಾಗ ಪಕ್ಷಿ ವೀಕ್ಷಣೆ ಖುಷಿಕೊಡುತ್ತದೆ. ಇಂತಹ ಸಮಾನ ಹವ್ಯಾಸದ ಯುವಕರ ಕೆಲಸವನ್ನು ನೋಡಿದಾಗ ಅವರಿಗೆ ಅಗತ್ಯ ಇರುವ ನೆರವು ನೀಡಬೇಕು. ಪಕ್ಷಿಗಳ ಕುರಿತಂತೆ ಕೆಲಸ ಮಾಡಲು ಉತ್ತೇಜನ ನೀಡಬೇಕು ಎನ್ನುವ ಉದ್ದೇಶದಿಂದ ಬೈನಾಕುಲರ್‌ ಕೊಡಿಸಲಾಗಿದೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.