ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ದೇಶ ಆರ್ಥಿಕತೆಗೆ ಪೆಟ್ಟು: ಶಾಸಕ ಮುನಿನರಸಿಂಹಯ್ಯ ಆರೋಪ

Last Updated 28 ನವೆಂಬರ್ 2021, 6:16 IST
ಅಕ್ಷರ ಗಾತ್ರ

ದೇವನಹಳ್ಳಿ:ರಾಜ್ಯ ಹಾಗೂ ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಏಕಪಕ್ಷೀಯ ನಿರ್ಧಾರಗಳಿಂದ ದೇಶ ದಿವಾಳಿಯಾಗುತ್ತಿದೆ. ದೇಶದ ಏಳಿಗೆಗಾಗಿ ಪುನಃ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿದೆ. ಮೇಲ್ಮನೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಕಾರ್ಯಕರ್ತರು ಮುಂದಾಗಬೇಕಿದೆ ಎಂದು ಮಾಜಿ ಶಾಸಕ ಮುನಿನರಸಿಂಹಯ್ಯ ಹೇಳಿದರು.

ತಾಲ್ಲೂಕಿನ ಕುಂದಾಣ ಹೋಬಳಿಯ ಕನ್ನಮಂಗಲ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕೊಡುವುದು ಕಾಂಗ್ರೆಸ್‌ನ ಸಿದ್ಧಾಂತ ಹಾಗೂ ಧ್ಯೇಯ. ಎಲ್ಲಾ ಸಮುದಾಯಗಳನ್ನೂ ಒಟ್ಟಿಗೆ ಅಭಿವೃದ್ಧಿಯತ್ತ ಕೊಂಡೊಯ್ಯುವಂತಹ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು.

ಸರ್ಕಾರದ ಸವಲತ್ತುಗಳನ್ನು ಎಲ್ಲರಿಗೂ ತಲುಪಿಸಲು ಕಾರ್ಯ ನಿರ್ವಹಿಸುತ್ತಿರುವ ಸ್ಥಳೀಯ ಸಂಸ್ಥೆಗಳು ರಾಷ್ಟ್ರದ ಅಭಿವೃದ್ಧಿಗೆ ಬೇರುಮಟ್ಟದಿಂದ ಸಂಘಟನೆಯಾಗಬೇಕಿದೆ. ಅವುಗಳಿಗೆ ಶಕ್ತಿ ತುಂಬಲು ಕಾಂಗ್ರೆಸ್ ಬೆಂಬಲಿಸಬೇಕು. ಸ್ಥಳೀಯ ಜನಪ್ರತಿನಿಧಿಗಳು ಮತ ನೀಡಬೇಕು. ಇತರೇ ಸದಸ್ಯರಿಂದ ಮತ ಹಾಕಿಸಬೇಕು ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಎಸ್. ರವಿ ಮಾತನಾಡಿ, ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಒಳ ಒಪ್ಪಂದ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ. ನಮಗೆ ನೇರ ಪ್ರತಿಸ್ಪರ್ಧಿ ಜೆಡಿಎಸ್. ಪಕ್ಷದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು ದಿಟ್ಟವಾಗಿ ನಿಂತು ಚುನಾವಣೆ ಎದುರಿಸಬೇಕು ಎಂದರು.

ಮಾಜಿ ಶಾಸಕ ಕೆ. ವೆಂಕಟಸ್ವಾಮಿ ಮಾತನಾಡಿ, ಗ್ರಾಮಾಂತರ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಪಕ್ಷದ ಅಭ್ಯರ್ಥಿಯ ಗೆಲುವಿನಲ್ಲಿ ನಾವೆಲ್ಲರೂ ಸಹಭಾಗಿಗಳಾಗಬೇಕು ಎಂದು ಕರೆ ನೀಡಿದರು.

ಯುಪಿಎ ಸರ್ಕಾರ ನೀಡಿದ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಪ್ರದೇಶದ ಪ್ರತಿಯೊಂದು ದುಡಿಯುವ ಕೈಗಳಿಗೆ ಉದ್ಯೋಗ ಒದಗಿಸಿರುವ ಜನಪರ ಯೋಜನೆಯಾಗಿದೆ. ಈ ಯೋಜನೆಯ ಅನುಷ್ಠಾನದ ಯಶಸ್ಸಿನಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ. ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯತ್ತ ಸಾಗಬೇಕಾದರೆ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುವುದು ಅನಿವಾರ್ಯ ಎಂದರು.

ಮಾಜಿ ಸಂಸದ ಸಿ. ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ. ಲಕ್ಷ್ಮೀನಾರಾಯಣಪ್ಪ, ಚನ್ನಹಳ್ಳಿ ರಾಜಣ್ಣ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಸಿ. ಮಂಜುನಾಥ್, ಬಿ. ಚೇತನ್ ಗೌಡ, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಉಪಾಧ್ಯಕ್ಷ ಶಾಂತ್ ಕುಮಾರ್, ಜಗನ್ನಾಥ್, ಲಕ್ಷ್ಮಣಗೌಡ, ಪುರಸಭಾ ಸದಸ್ಯ ವಿ. ನಂದಕುಮಾರ್, ಚೌಡಪ್ಪನಹಳ್ಳಿ ಲೋಕೇಶ್, ಭುವನಹಳ್ಳಿ ಮುನಿರಾಜು, ಎಸ್.ಆರ್. ರವಿಕುಮಾರ್, ಬಿಜ್ಜವಾರ ನಾಗರಾಜ್, ಕೆ.ಆರ್. ನಾಗೇಶ್
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT