ಎತ್ತಿನಹೊಳೆ: ಎರಡು ವರ್ಷದಲ್ಲಿ ಪೂರ್ಣ–ಸಂಸದ ವೀರಪ್ಪ ಮೊಯಿಲಿ

7
‘ಎರಡು ತಿಂಗಳಲ್ಲಿ ಎನ್.ಎಚ್.ವ್ಯಾಲಿ ಕಾಮಗಾರಿ ಪೂರ್ಣ’

ಎತ್ತಿನಹೊಳೆ: ಎರಡು ವರ್ಷದಲ್ಲಿ ಪೂರ್ಣ–ಸಂಸದ ವೀರಪ್ಪ ಮೊಯಿಲಿ

Published:
Updated:
Prajavani

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನಗರದ ತ್ಯಾಜ್ಯ ನೀರು ಸಂಸ್ಕರಿಸಿ ಕೆರೆಗಳಿಗೆ ಹರಿಸುವ ಎನ್.ಎಚ್.ವ್ಯಾಲಿ ಯೋಜನೆ ಕಾಮಗಾರಿ ಇನ್ನೆರಡು ತಿಂಗಳಲ್ಲಿ ಪೂರ್ಣಗೊಂಡು ಲೋಕಾರ್ಪಣೆಯಾಗಲಿದೆ ಎಂದು ಸಂಸದ ಎಂ.ವೀರಪ್ಪ ಮೊಯಿಲಿ ತಿಳಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕೋಲಾರ –ಚಲಘಟ್ಟ ವ್ಯಾಲಿ ಯೋಜನೆಯಡಿ ಈಗಾಗಲೇ ಕೆಲವು ಕೆರೆಗಳಿಗೆ ನೀರು ಹರಿಸಲಾಗಿದೆ. ಕೆಲ ರೈತ ಮುಖಂಡರು ಈ ನೀರು ರಾಸಾಯನಿಕಯುಕ್ತವಾದದು ಹಾಗಾಗಿ ಬಳಕೆಗೆ ಯೋಗ್ಯವಲ್ಲ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯದ ತೀರ್ಪು ಬಂದ ನಂತರ ಮತ್ತೆ ಚಾಲನೆ ಸಿಗಲಿದೆ‌. ಎನ್.ಎಚ್.ವ್ಯಾಲಿ ಬಗ್ಗೆ ಯಾವುದೇ ತಕರಾರು ಇಲ್ಲ’ ಎಂದರು.

‘ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಬಹುತೇಕ ಮುಗಿದಿದೆ. ಸಣ್ಣಪುಟ್ಟ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ತ್ಯಾಜ್ಯ ನೀರು ಎರಡು ಬಾರಿ ಸಂಸ್ಕರಿಸಿ ಕೆರೆಗಳಿಗೆ ಹರಿಸುವುದು ಈ ಯೋಜನೆ ಉದ್ದೇಶ. ಅಂತರ್ಜಲ ಹೆಚ್ಚಿಸಿ, ಬತ್ತಿ ಹೋಗಿರುವ ಕೊಳವೆ ಬಾವಿಗಳಿಗೆ ಜೀವ ಜಲ ಸಿಗಬೇಕು. ಎತ್ತಿನಹೊಳೆ ಕಾಮಗಾರಿ ವೇಗ ಮತ್ತಷ್ಟು ಹೆಚ್ಚಿಸಲಾಗಿದೆ. ತ್ವರಿತವಾಗಿ ಬಯಲು ಸೀಮೆ ಜನರಿಗೆ ಕುಡಿಯುವ ನೀರಿಗೆ ಅನುಕೂಲವಾಗಬೇಕು ಎಂಬುದು ನಮ್ಮ ಬಯಕೆ’ ಎಂದರು.

‘ಎತ್ತಿನಹೊಳೆ ಕಾಮಗಾರಿ ನಾನಾ ಕಾರಣಗಳಿಂದ ವಿಳಂಬವಾಗಿತ್ತು. ಹಾಸನ ಜಿಲ್ಲೆ ಅರಸೀಕೆರೆ ದಾಟಿ 25ಕಿ.ಮೀ ಮುಂದೆ ಕಾಮಗಾರಿ ನಡೆಯುತ್ತಿದೆ. ಕೊರಟಗೆರೆ ತಾಲ್ಲೂಕು ಬೈರಗೊಂಡ್ಲು ಬಳಿ ಬ್ಯಾರೇಜ್ ನಿರ್ಮಾಣಕ್ಕೆ ಜಮೀನು ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಸಾವಿರಾರು ಕೋಟಿ ಯೋಜನೆ ಕಾಮಗಾರಿಗೆ ನಾಲ್ಕು ಭಾಗಗಳನ್ನಾಗಿ ಮಾಡಿ ನೂರಾರು ಕಾರ್ಮಿಕರು ಹಗಲುರಾತ್ರಿ ಎನ್ನದೆ ಕಾರ್ಯನಿರ್ವಹಿಸಿದ್ದಾರೆ. ಇನ್ನು ಎರಡು ವರ್ಷದಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳಲಿದೆ’ ಎಂದು ಹೇಳಿದರು.

ಕೆಪಿಸಿಸಿ ಎಸ್ಸಿ ಘಟಕದ ರಾಜ್ಯ ಕಾರ್ಯದರ್ಶಿ ಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್, ಎಪಿಎಂಸಿ ಉಪಾಧ್ಯಕ್ಷ ಸುಧಾಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷ ಡಿ.ವಿ.ಕೃಷ್ಣಮೂರ್ತಿ, ತಾಲ್ಲೂಕು ಕೃಷಿಕ ಸಮಾಜ ನಿರ್ದೇಶಕ ಬೀಸೇಗೌಡ, ಮುಖಂಡರಾದ ಲಕ್ಷಣ್‌ಗೌಡ, ವಿ.ನಾರಾಯಣಸ್ವಾಮಿ, ಬಿ.ವಿ.ಸ್ವಾಮಿ, ನರಸಪ್ಪ, ಹರ್ಷ ಮೊಯಿಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !