ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಕಣ್ಣಾಮುಚ್ಚಾಲೆ: ನೀರಿಗೆ ಪರದಾಟ 

ದೇವನಹಳ್ಳಿ ಬೆಸ್ಕಾಂ ಕಚೇರಿಗೆ ಮುತ್ತಿಗೆ; ಸಾರ್ವಜನಿಕರ ಆಕ್ರೋಶ
Last Updated 5 ಮೇ 2020, 17:29 IST
ಅಕ್ಷರ ಗಾತ್ರ

ದೇವನಹಳ್ಳಿ: ಕಳೆದ ಎರಡು ತಿಂಗಳಿಂದ ವಿದ್ಯುತ್ ಪೂರೈಕೆ ಕಣ್ಣಾಮುಚ್ಚಾಲೆಯಿಂದ ಜಾಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐದು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ನಾಗಮಂಗಲ ಗ್ರಾಮದ ಅಪ್ಪಣ್ಣ ಮಾತನಾಡಿ, ‘2011–12ಸಾಲಿನಲ್ಲಿ ಸರ್ಕಾರ ನಿರಂತರ ಜ್ಯೋತಿ ವಿದ್ಯುತ್ ಯೋಜನೆಯಡಿ ದಿನದ 24 ತಾಸು ವಿದ್ಯುತ್ ಪೂರೈಕೆಗಾಗಿ ಪ್ರೈಮರಿ ಮಾರ್ಗ ಬದಲಿಸಿ ಸೆಕೆಂಡರಿ ಮಾರ್ಗ ಮೇಲ್ದರ್ಜೆಗೇರಿಸಿ ಸಾರ್ವಜನಿಕರಿಗೆ ಬೆಳಕಿನ ಭರವಸೆ ನೀಡಿತ್ತು. ರೈತರಿಗೆ ತ್ರೀಫೇಸ್‌ನಲ್ಲಿ ಕನಿಷ್ಠ 8 ತಾಸು ವಿದ್ಯುತ್ ಪೂರೈಕೆ ಯೋಜನೆ ಘೋಷಣೆ ಮಾಡಿತ್ತು. ಆದರೆ, ಬೆಸ್ಕಾಂ ಭರವಸೆ ಈಡೇರಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಗಮಂಗಲ, ಚೌಡನಹಳ್ಳಿ, ಬೋವಿಪಾಳ್ಯ, ಸಿಂಗ್ರಹಳ್ಳಿ ,ಬೆಟ್ಟೆನಹಳ್ಳಿ ಸುತ್ತಮುತ್ತ ವ್ಯಾಪ್ತಿಯ ನೀರಾವರಿ ಪಂಪ್ ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಯಾವಾಗ ಬರಲಿದೆ ಎಂದು ಕುಡಿಯುವ ನೀರಿಗಾಗಿ ಸಾರ್ವಜನಿಕರು, ರೈತರು ಹಗಲುರಾತ್ರಿ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ. ಗ್ರಾಮಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಸಕಾಲದಲ್ಲಿ ವಿದ್ಯುತ್ ಪೂರೈಕೆ ಇಲ್ಲದೆ ವ್ಯರ್ಥವಾಗಿದೆ. ಓವರ್ ಹೆಡ್ ಟ್ಯಾಂಕ್‌ಗಳ ಕತೆ ಹೇಳತೀರದಾಗಿದೆ ಎಂದು ಆರೋಪಿಸಿದರು.

ಗ್ರಾಮದ ಕೂಗಳೆತೆಯ ದೂರದಲ್ಲಿ 11 ಕೆ.ವಿ.ಮಾರ್ಗ ಹಾದು ಹೋಗಿದೆ. ದೇವನಹಳ್ಳಿ ತಾಲ್ಲೂಕಿನ ಗಡಿ ಗ್ರಾಮ, ಬೆಂಗಳೂರು ಉತ್ತರ ತಾಲ್ಲೂಕಿನ ಗಡಿಗ್ರಾಮ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ಗಡಿಗ್ರಾಮ ಬಾಶೆಟ್ಟಿಹಳ್ಳಿ, ಮಾರಸಂದ್ರ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶ ಇರುವುದರಿಂದ ಆ ಪ್ರದೇಶದಲ್ಲಿ ನಿರಂತರ ವಿದ್ಯುತ್ ಪೂರೈಕೆ ಇರಲಿದೆ.

‘ಆದರೆ, ಗ್ರಾಮೀಣ ಪ್ರದೇಶವನ್ನು ನಿರ್ಲಕ್ಷ್ಯ ಮಾಡಿರುವ ಬೆಸ್ಕಾಂ ಖಾಸಗಿ ಕೈಗಾರಿಕೆ ಮಾಲೀಕರಿಗೆ ಸಹಾನುಭೂತಿ ತೋರಿಸಿ ವಾರ್ಷಿಕ ವಿದ್ಯುತ್ ಉಳಿತಾಯ ಪ್ರಶಸ್ತಿಗೆ ಪ್ರಯತ್ನಿಸುತ್ತಿದೆ’ ಎಂದು ದೂರಿದರು.

ಪ್ರತಿಯೊಂದಕ್ಕೂ ವಿದ್ಯುತ್ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ವಿದ್ಯುತ್ ಅವಶ್ಯಕವಾಗಿ ಬೇಕಿರುವುದು ಬೆಳಿಗ್ಗೆ 6ರಿಂದ10 ಮತ್ತು ಸಂಜೆ 7ರಿಂದ10. ಇಂತಹ ಸಂದರ್ಭದಲ್ಲಿ ವಿದ್ಯುತ್ ಇಲ್ಲದಿದ್ದರೆ ಹೇಗೆ ? ಒಂದು ದಿನ ವಿದ್ಯುತ್ ಬಿಲ್ಲು ಪಾವತಿಸಿದಿದ್ದರೆ ಮನೆ ಬಳಿ ಬಂದು ರಂಪಾಟ ಮಾಡುತ್ತಾರೆ. ಈ ಭಾಗದ ವಿದ್ಯುತ್ ಮಾರ್ಗಧಿಕಾರಿ ನಾಪತ್ತೆಯಾಗಿದ್ದಾರೆ. ಸಕಾಲದಲ್ಲಿ ವಿದ್ಯುತ್ ಪೂರೈಕೆ ಮಾಡದಿದ್ದರೆ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ಸ್ಥಳೀಯರಾದ ಅನ್ನಪೂರ್ಣಮ್ಮ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT