ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔದ್ಯೋಗಿಕ ಕೌಶಲ ತರಬೇತಿಗೆ ಒತ್ತು

ದೊಡ್ಡಬಳ್ಳಾಪುರ: ಉದ್ಯೋಗ ಜಾಗೃತಿ ಮೇಳ
Last Updated 1 ಜುಲೈ 2022, 2:19 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಕರ್ನಾಟಕ ಕೌಶಲಾಭಿವೃದ್ಧಿ ನಿಗಮ, ಜಿಲ್ಲಾ ಕೌಶಲ ಕೋಶದಿಂದ ಯುಎನ್‌ಡಿಪಿ ಇಂಡಿಯಾ ಹಾಗೂ ಎಸ್‌ಎಪಿ ಲ್ಯಾಬ್ಸ್ ಸಹಯೋಗದಡಿ ಬುಧವಾರ ನಗರದ ಆರ್.ಎಲ್. ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಕಲಾ ಮಂದಿರದಲ್ಲಿ ಉನ್ನತಿ ಪರಿಕಲ್ಪನೆಯ ಜಿಲ್ಲಾ ಮಟ್ಟದ ಕೆರಿಯರ್ ಸಮಾವೇಶದ ಅಂಗವಾಗಿ ಉದ್ಯೋಗ ಜಾಗೃತಿ ಮೇಳ ನಡೆಯಿತು.

ರಾಜ್ಯ ಕೌಶಲಾಭಿವೃದ್ಧಿ ಇಲಾಖೆಯ ಕಾರ್ಯ ನಿರ್ವಾಹಕ ನಿರ್ದೇಶಕಿ ಭಾವನಾ ಮಾತನಾಡಿ, ಯುವಜನರಲ್ಲಿ ಉದ್ಯಮಶೀಲತೆ ವೃದ್ಧಿಗೆ ಕರ್ನಾಟಕ ಕೌಶಲಾಭಿವೃದ್ಧಿ ನಿಗಮ ಒತ್ತು ನೀಡಿದ್ದು, ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ವಿದ್ಯಾರ್ಹತೆ ಮತ್ತು ಉದ್ಯೋಗದ ನಡುವೆ ಇರುವ ಕೊರತೆ ನೀಗಿಸಲು ವಿವಿಧ ಕೌಶಲ ತರಬೇತಿಯನ್ನು ಯುವಜನರಿಗೆ ನೀಡುವುದು ಮೊದಲ ಆದ್ಯತೆಯಾಗಿದೆ. ಅವಕಾಶಗಳ ಸದ್ಬಳಕೆಗೆ ಪೂರಕ ವೇದಿಕೆ ಇದಾಗಿದೆ ಎಂದರು.

ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಲಕ್ಷ್ಮಿನಾರಾಯಣರಾಜು ಮಾತನಾಡಿ, ಸಂವಹನ ಕೌಶಲವನ್ನು ವೃದ್ಧಿಗೊಳಿಸಲು ಬೇಕಾದ ಪರಿಕ್ರಮಗಳ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಉತ್ತಮ. ಔದ್ಯೋಗಿಕ ಬೆಳವಣಿಗೆಗೆ ಬೇಕಾದ ಮಾರ್ಗದರ್ಶನ ಹಾಗೂ ಲಭ್ಯ ಸಂಪನ್ಮೂಲಗಳ ಸದ್ವಳಕೆಯಿಂದ ಸಾಧನೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಅನೇಕ ಪ್ರತಿಷ್ಠಿತ ಸಂಸ್ಥೆಗಳು ಕೌಶಲಾಧಾರಿತ ಯುವಜನರ ನಿರೀಕ್ಷೆಯಲ್ಲಿವೆ ಎಂದು ಹೇಳಿದರು.

ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ. ರಾಜೇಂದ್ರ ಮಾತನಾಡಿ, ನಾಗರಿಕ ಸೇವೆ ಸೇರಿದಂತೆ ಮಹತ್ವದ ಪರೀಕ್ಷೆಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ ಅನನ್ಯ. ಯುವಜನರಲ್ಲಿ ಕೃಷಿ ಸಂಬಂಧಿತ ತಾಂತ್ರಿಕ ಕೌಶಲಗಳನ್ನು ಉತ್ತೇಜಿಸುವ ಕುರಿತು ತರಬೇತಿ ನೀಡಬೇಕಿದೆ ಎಂದು
ತಿಳಿಸಿದರು.

ಒಂದು ದಿನದ ಅಭಿಯಾನದಲ್ಲಿ 40 ಮಳಿಗೆಗಳ ಮೂಲಕ ವಿವಿಧ ಕಂಪನಿಗಳು ಹಲವು ಕಾಲೇಜುಗಳಿಂದ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಉದ್ಯೋಗ ಹಾಗೂ ಭವಿಷ್ಯದ ಸಾಧ್ಯತೆ ಕುರಿತು ಅರಿವು ಮೂಡಿಸಿದವು. ಹಲವು ಉದ್ಯಮಿಗಳು, ತಜ್ಞರು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶದ ಬಗ್ಗೆ ತಿಳಿಸಿಕೊಟ್ಟರು.

ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಹಿರಿಯ ವಲಯ ಹೆಚ್ಚುವರಿ ನಿರ್ದೇಶಕಿ ಡಾ.ಎಸ್. ರಾಧಾ, ಹೆಡ್ ಹೆಲ್ಡ್ ಹೈ ಫೌಂಡೇಶನ್‌ನ ವ್ಯವಸ್ಥಾಪಕ ಟ್ರಸ್ಟಿ ಮದನ್ ಪಡಕಿ, ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕಿ ಅಮಲಿ ನಾಯಕ್, ಹನಿಕಾಂಬ್ ಕ್ರಿಯೆಟಿವ್ ಸಪೋರ್ಟ್‌ನ ಮಾರ್ಕೆಟಿಂಗ್ ಮ್ಯಾನೇಜರ್ ಎಂ.ವಿ. ಸೌಮ್ಯಾ ಮತ್ತು ಯುಎನ್‌ಡಿಪಿ ಮುಖ್ಯಸ್ಥ ಜಯಚಂದ್ರನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT