ಸೋಮವಾರ, ಜುಲೈ 4, 2022
21 °C

ವಿಜಯಪುರ ಅಭಿವೃದ್ಧಿಗೆ ಒತ್ತು ನೀಡಿ: ಡಾ.ಕೆ. ಸುಧಾಕರ್‌ಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಜತೆಗೆ ವಿಜಯಪುರದಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯ  ಮೂಲಸೌಕರ್ಯ ಒದಗಿಸಿ ಆಸ್ಪತ್ರೆ ಮೇಲ್ದರ್ಜೆಗೇರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರಿಗೆ ವಿಜಯಪುರದ ಕಾಂಗ್ರೆಸ್ ಮುಖಂಡರು ಮನವಿ
ಮಾಡಿದರು.

ಬೆಂಗಳೂರಿನಲ್ಲಿ ಸಚಿವ ಡಾ.ಕೆ.ಸುಧಾಕರ್ ಅವರ ನಿವಾಸದಲ್ಲಿ ಮಂಗಳವಾರ ಭೇಟಿ ಮಾಡಿದ ಮುಖಂಡರು, ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾಗಿರುವುದಕ್ಕೆ ಅವರನ್ನು ಅಭಿನಂದಿಸಿ ಮನವಿ ಪತ್ರ ಸಲ್ಲಿಸಿದರು.

ದೇವನಹಳ್ಳಿ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದುಳಿದಿದೆ. ರಸ್ತೆಗಳು ಅಭಿವೃದ್ಧಿಯಾಗಬೇಕು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಬೇಕು. ಈ ಭಾಗದಲ್ಲಿನ ಸಾಕಷ್ಟು ಕೆರೆಗಳಿಗೆ ಎಚ್.ಎನ್. ವ್ಯಾಲಿ ಯೋಜನೆಯಡಿ ನೀರು ಹರಿದಿಲ್ಲ. ಈ ಯೋಜನೆಯಡಿ ನೀರು ಹರಿಸಬೇಕು ಎಂದು
ಒತ್ತಾಯಿಸಿದರು.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾದ ನಂತರ ತಾಲ್ಲೂಕಿನಲ್ಲಿ ಕೈಗಾರಿಕೆಗಳ ಸ್ಥಾಪನೆ ಹೆಚ್ಚಾಗುತ್ತಿದ್ದು, ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಕಡ್ಡಾಯವಾಗಿ ಉದ್ಯೋಗ ಅವಕಾಶ ಕಲ್ಪಿಸಿಕೊಡಬೇಕು. ವಿಜಯಪುರ ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಿ, ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಕೆ.ಎಸ್.ಆರ್.ಟಿ.ಸಿ ಡಿಪೊ ನಿರ್ಮಾಣ ಮಾಡಲು 4 ಎಕರೆ ಭೂಮಿ ಮೀಸಲಿಟ್ಟು, ಕಾಂಪೌಂಡ್ ನಿರ್ಮಾಣ ಮಾಡಿದ್ದರೂ ಕೂಡ ಇದುವರೆಗೂ ಡಿಪೊ ನಿರ್ಮಾಣ ಕಾರ್ಯವಾಗಿಲ್ಲ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡ ಬಿ. ಚೇತನ್ ಗೌಡ ಮಾತನಾಡಿ, ವಿಜಯಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಒಳಚರಂಡಿ ವ್ಯವಸ್ಥೆಯಾಗಬೇಕು. ಅನೇಕ ವರ್ಷಗಳಿಂದ ನಿವೇಶನಗಳಿಲ್ಲದೆ ವಾಸ ಮಾಡಲು ಯೋಗ್ಯವಾದ ಮನೆಗಳಿಲ್ಲದೆ ಜನರು ಪರದಾಡುತ್ತಿದ್ದಾರೆ. ಅವರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು. ಪಟ್ಟಣದಲ್ಲಿ ಹಾಳಾಗಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಅನುದಾನ ಒದಗಿಸಬೇಕು. ಪುರಸಭೆಗೆ ಆದಾಯ ಕಡಿಮೆಯಾಗಿದೆ. ಅಭಿವೃದ್ಧಿಯತ್ತ ಕೊಂಡೊಯ್ಯಲು ಹೆಚ್ಚಿನ ಅನುದಾನ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಮಂಜುನಾಥ್, ಮುಖಂಡರಾದ ವೆಂಕಟೇಶ್, ಬಚ್ಚೇಗೌಡ
ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು