‘ನೌಕರರ ವೇತನ ಶೀಘ್ರ ಬಿಡುಗಡೆ'

7
ಸಂಘಟನೆ ಪದಾಧಿಕಾರಿಗಳು, ಗುತ್ತಿಗೆದಾರರಿಗೆ ಜಿಲ್ಲಾ ಆರೋಗ್ಯಧಿಕಾರಿ ಯೋಗೀಶ್‌ ಗೌಡ ಭರವಸೆ

‘ನೌಕರರ ವೇತನ ಶೀಘ್ರ ಬಿಡುಗಡೆ'

Published:
Updated:
Deccan Herald

ದೇವನಹಳ್ಳಿ: ತಾಲ್ಲೂಕಿನ ಸರ್ಕಾರಿ ಸಮುದಾಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಆಧಾರಿತ ನೌಕರರ ವೇತನವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯಧಿಕಾರಿ ಡಾ.ಯೋಗೀಶ್‌ ಗೌಡ ಭರವಸೆ ನೀಡಿದರು.

ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಗುತ್ತಿಗೆದಾರರೊಂದಿಗೆ ಅವರು ಮಾತನಾಡಿದರು.

ನೌಕರರನ್ನು ನೇಮಿಸಿಕೊಂಡಿರುವ ಖಾಸಗಿ ಗುತ್ತಿಗೆದಾರರಿಂದಾಗಿ ಮೂರು ತಿಂಗಳು ವೇತನ ವಿಳಂಬವಾಗಿದೆ. ಡಿ ದರ್ಜೆ ನೌಕರರಿಗೆ ವೇತನ ವಿಳಂಬಕ್ಕೆ ತಾಂತ್ರಿಕ ತೊಂದರೆ ಇತ್ತು. ಆದಕ್ಕೆ ಪ್ರತಿಭಟನೆ ಮಾಡುವ ಅವಶ್ಯಕತೆ ಇಲ್ಲ ಎಂದರು.

ಈ ಸಂಬಂಧ ಗುತ್ತಿಗೆ ಕಂಪನಿ ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಒಂದು ತಿಂಗಳ ವೇತನ ಬಿಡುಗಡೆಯಾಗಿದೆ. ಉಳಿದ ಎರಡು ತಿಂಗಳ ವೇತನ ಇನ್ನೆರಡು ದಿನಗಳಲ್ಲಿ ನೀಡಲಾಗುವುದು ಎಂದು ತಿಳಿಸಿದರು.

ಆಸ್ಪತ್ರೆಗೆ ಬರುವ ರೋಗಿಗಳ ಹಿತ ಕಾಪಾಡಲು ಎಲ್ಲರೂ ಸಹಕರಿಸಿ ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಕಾರ್ಡ್‌ ವಿತರಣೆಗೆ ಸರ್ಕಾರ ಆದೇಶ ನೀಡಿದೆ. ಎರಡನೇ ಹಂತದಲ್ಲಿ ಗ್ರಾಮಾಂತರ ಜಿಲ್ಲೆಯಲ್ಲಿ ಕಾರ್ಡ್‌ ವಿತರಿಸಲಾಗುವುದು ಎಂದರು.

ಆರೋಗ್ಯ ಕಾರ್ಡ್‌ ಇಲ್ಲದೆ ಆರು ತಿಂಗಳಿಂದ ಒಳರೋಗಿಗಳಾಗಿ ದಾಖಲಾಗುವವರಿಗೆ ಈಗಾಗಲೇ ಸೇವೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ದಲಿತ ಸುರಕ್ಷಾ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ನಾರಾಯಣಸ್ವಾಮಿ ಮಾತನಾಡಿ, ಸಕಾಲದಲ್ಲಿ ವೇತನ ಪಾವತಿಸದಿದ್ದರೆ ನೌಕರರ ಕುಟುಂಬದ ನಿರ್ವಹಣೆ ಹೇಗೆ, ಸೇವಾ ಭದ್ರತೆ ಇಲ್ಲದೆ ತಿಂಗಳ ವೇತನ ನಂಬಿಕೊಂಡಿದ್ದಾರೆ ಎಂದರು.

ಪ್ರತಿ ತಿಂಗಳು ಸಕಾಲದಲ್ಲಿ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಸೇರಿದಂತೆ ಡಯಾಲಿಸಿಸ್‌, ಶುಚಿತ್ವಕ್ಕೆ ನೀರು ಒದಗಿಸಬೇಕು ಎಂದರು.

ಜನರಿಕ್‌ ಮಳಿಗೆಗಳಲ್ಲಿ ಔಷಧಗಳ ಕೊರತೆ ಇದೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ಆಡಳಿತಧಿಕಾರಿ ಡಾ.ಶ್ರೀನಿವಾಸ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !