ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲಾತಿಗೆ ವಿದ್ಯಾರ್ಥಿಗಳ ದುಂಬಾಲು

ಬೈಚಾಪುರದ ಸರ್ಕಾರಿ ಉನ್ನತೀಕರಿಸಿದ ಶಾಲೆಯಲ್ಲಿ ಅತ್ಯಾಧುನಿಕ ಸೌಲಭ್ಯ
Last Updated 12 ಮಾರ್ಚ್ 2019, 19:52 IST
ಅಕ್ಷರ ಗಾತ್ರ

ದೇವನಹಳ್ಳಿ: ನಮ್ರತೆಯಿಂದ ಸಾಲುಗಟ್ಟಿ ಪ್ರಾರ್ಥನೆಯಲ್ಲಿ ತೊಡಗಿರುವ ಮಕ್ಕಳು, ಬಲಭಾಗದ ಕೊಠಡಿ ಗೋಡೆಗಳ ಮೇಲೆ ಜ್ಞಾನಪೀಠ ಪುರಸ್ಕೃತರ ಭಾವಚಿತ್ರ, ಮತ್ತೊಂದೆಡೆ ರಾಷ್ಟ್ರ ಲಾಂಛನ, ಒಳಹೊಕ್ಕಾಗ ಬಿಸಿಯೂಟದ ಸಭಾಂಗಣ. ಇದು ತಾಲ್ಲೂಕಿನ ಬೈಚಾಪುರದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ದೃಶ್ಯಗಳು.

ಗ್ರಾಮದ ‌ಆರ್.ಮುನಿಶ್ಯಾಮಪ್ಪ, ದಿನ್ನೆಮನೆ ಮುನಿವೆಂಕಟಪ್ಪ, ದೊಡ್ಡಪೂವಯ್ಯ ಅವರ ರಾಮಯ್ಯ, ಓಣಿಗಡ್ಡೆ ಅಂದಾರಿ ಮುನಿಯಪ್ಪ ಸೇರಿದಂತೆ ಹಲವರು ಈ ಶಾಲೆಗೆ 30 ಗುಂಟೆ ಭೂಮಿ ದಾನವಾಗಿ ನೀಡಿದ್ದರು. ಅದರ ಫಲವಾಗಿಯೇ 1961ರಲ್ಲಿ 25 ಮಕ್ಕಳಿಂದ ಈ ಶಾಲೆ ಆರಂಭವಾಯಿತು.

‘ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆಡಳಿತ ನಿರ್ವಹಣಾ ಕಂಪನಿ’ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ₹2ಕೋಟಿ ಅನುದಾನದಲ್ಲಿ ಇಡೀ ಶಾಲೆ ವಿನ್ಯಾಸವನ್ನೇ ಈಗ ಬದಲಾಯಿಸಿದೆ. 8 ತರಗತಿ ಕೊಠಡಿ, ಗ್ರಂಥಾಲಯ, ಬಿಸಿಯೂಟ ತಯಾರಿಸಲು ಅಡುಗೆ ಮನೆ, ದಾಸ್ತಾನು ಕೊಠಡಿ, ಕಂಪ್ಯೂಟರ್ ಕೊಠಡಿ, ಕ್ರೀಡಾ ಪರಿಕರಗಳ ಕೊಠಡಿ, ಮೂರು ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲಾಗಿದೆ.

‘ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆಡಳಿತ ನಿರ್ವಹಣಾ ಸಂಸ್ಥೆ’ ಮತ್ತು ‘ಸತ್ಯ ಸಾಯಿ ಟ್ರಸ್ಟ್’ ವತಿಯಿಂದ ಪ್ರತಿದಿನ ಬೆಳಗಿನ ಉಪಾಹಾರ ಪೂರೈಕೆ ಮಾಡಲಾಗುತ್ತಿದೆ. ಶಾಲಾ ಅಂಗಳದಲ್ಲಿ ಸೋಲಾರ್ ದೀಪ, ಪ್ರತಿ ಕೊಠಡಿಗೆ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಲಾಗಿದೆ.

2017–18ನೇ ಸಾಲಿನ ಅತ್ಯುತ್ತಮ ಶಾಲೆ ಎಂದು ರಾಜ್ಯಮಟ್ಟದ ಪ್ರಶಸ್ತಿ ಗರಿಮೆ ಸಿಕ್ಕಿದೆ. ಒಂದನೇ ತರಗತಿಯಿಂದ ಆಂಗ್ಲ ವಿಷಯ ಭೋಧನೆಗೆ ಅವಕಾಶ ನೀಡಲಾಗಿದೆ. 2011ನೇ ಸಾಲಿನಲ್ಲಿ ಹಿರಿಯ ಪ್ರಾಥಮಿಕ ಶಾಲೆಯನ್ನು ಉನ್ನತೀಕರಿಸಿ 8ನೇ ತರಗತಿಗೆ ಅವಕಾಶ ಮಾಡಿಕೊಡಲಾಗಿದೆ. ಪ್ರಸ್ತುತ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳು ನಡೆಯುತ್ತಿವೆ. ಇಷ್ಟೆಲ್ಲ ಸವಲತ್ತು ಇರುವ ಶಾಲೆಗೆ ಶಿಕ್ಷಣ ಇಲಾಖೆ 9 ಮತ್ತು 10ನೇ ತರಗತಿ ಆರಂಭಕ್ಕೆ ಅವಕಾಶ ನೀಡಬೇಕೆಂದು ಗ್ರಾಮದ ಹಿರಿಯರಾದ ಲಕ್ಷ್ಮಿ ನರಸಿಂಹಸ್ವಾಮಿ ಮತ್ತು ನಾರಾಯಣಸ್ವಾಮಿಒತ್ತಾಯಿಸಿದ್ದಾರೆ.

‘2014ರಲ್ಲಿ ಮುಖ್ಯ ಶಿಕ್ಷಕಿಯಾಗಿ ನಾನು ವರ್ಗಾವಣೆಗೊಂಡು ಬಂದಾಗ 90 ವಿದ್ಯಾರ್ಥಿಗಳು ಮಾತ್ರ ಇದ್ದರು. ಈಗ 140 ವಿದ್ಯಾರ್ಥಿಗಳ ಹಾಜರಾತಿ ಇದೆ. ದೇವನಹಳ್ಳಿ ನಗರದಲ್ಲಿ ಅನೇಕ ಸರ್ಕಾರಿ ಶಾಲೆಗಳಿದ್ದರೂ ಪೋಷಕರು ಮಕ್ಕಳನ್ನು ಈ ಶಾಲೆಗೆ ದಾಖಲಿಸಿದ್ದಾರೆ’ ಎನ್ನುತ್ತಾರೆ ಮುಖ್ಯ ಶಿಕ್ಷಕಿ ಎಸ್.ಮುನಿಯಮ್ಮ.

‘ಮಕ್ಕಳ ಕಲಿಕೆಗೆ ಬೇಕಾದ ಪ್ರತಿಯೊಂದು ಉಪಕರಣ ಶಾಲೆಯಲ್ಲಿದೆ. ಶೈಕ್ಷಣಿಕ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಇದೇ ಶಾಲೆಯಲ್ಲಿ 1983ರಲ್ಲಿ 4ನೇ ತರಗತಿಯವರೆಗೆ ಕಲಿತಿದ್ದೆ. ಈ ರೀತಿಯ ಸೌಲಭ್ಯಗಳು ಆಗ ಇರಲಿಲ್ಲ’ ಎನ್ನುತ್ತಾರೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರವಿಕುಮಾರ್.

‘ವಾರಕ್ಕೊಮ್ಮೆ ವಸ್ತು ಪ್ರದರ್ಶನ, ವಿಜ್ಞಾನ ಮಾದರಿ ತಯಾರಿಕೆ, ನಾಟಕ, ಚರ್ಚಾಸ್ಪರ್ಧೆ, ರಸಪ್ರಶ್ನೆ, ಯೋಗ, ಪ್ರಬಂಧ ಸ್ಪರ್ಧೆ ಇರುತ್ತದೆ. ನಮಗೆ 10ನೇ ತರಗತಿಯವರೆಗೆ ಇಲ್ಲೇ ಓದುವ ಆಸೆ’ ಎನ್ನುತ್ತಾರೆ 8ನೇ ತರಗತಿ ವಿದ್ಯಾರ್ಥಿನಿ ಸಿ.ಎಂ.ಮೋನಿಷಾ.

‘ಪ್ರತಿಭಾ ಕಾರಂಜಿ, ಕಲೋತ್ಸವ, ಕ್ರೀಡೆ, ಅನೇಕ ವಿಭಾಗಗಳಲ್ಲಿ ಶಾಲೆಗೆ ಪ್ರಶಸ್ತಿಗಳು ಬಂದಿವೆ’ ಎನ್ನುತ್ತಾರೆ 8ನೇ ತರಗತಿ ವಿದ್ಯಾರ್ಥಿ ಪ್ರವೀಣ್ ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT