ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳ ಅಭಿವೃದ್ಧಿಗೆ ಉದ್ಯಮಿಗಳು ಮುಂದಾಗಿ

Last Updated 22 ಮೇ 2019, 13:53 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:‘ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ ಸುತ್ತಮುತ್ತಲ ಕೆರೆಗಳನ್ನು ದತ್ತುಪಡೆದು ಅಭಿವೃದ್ಧಿಗೊಳಿಸಿದರೆ, ಕೆರೆಗಳ ಪುನಶ್ಚೇತನ ಸುಲಭವಾಗಲಿದೆ’ ಎಂದು ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡ ಹೇಳಿದರು.

ಅವರು ತಾಲ್ಲೂಕಿನ ಮಜರಾಹೊಸಹಳ್ಳಿ, ದೊಡ್ಡ ತುಮಕೂರು ಕೆರೆಗಳ ಅಭಿವೃದ್ದಿ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

‘ಜಿಲ್ಲೆಯಲ್ಲಿ 25 ಕೆರೆಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಸಾರ್ವಜನಿಕರ ಹಾಗೂ ಜಿಲ್ಲೆಯಲ್ಲಿನ ವಿವಿಧ ಕೈಗಾರಿಕೆಗಳ ವತಿಯಿಂದ ಕೆರೆಗಳ ಅಭಿವೃದ್ದಿಗೆ ಉತ್ತಮ ಸಹಕಾರ ದೊರೆಯುತ್ತಿದೆ. ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ದಿಗೆ ಸಹಕಾರಿಯಾಗುವುದನ್ನು ಕಾರ್ಖಾನೆಯ ಮಾಲೀಕರಿಗೆ ಮನವರಿಕೆ ಮಾಡಿಕೊಡಬೇಕಿದೆ’ ಎಂದ ಅವರು, ಸ್ಥಳದಲ್ಲಿ ಹಾಜರಿದ್ದ ರಿಟ್ಟಲ್ ಕಾರ್ಖಾನೆಯ ಸಿಬ್ಬಂದಿಗೆ ಕಂಪನಿಯಿಂದ ಕೆರೆಗಳ ಪುನಶ್ಚೇತನಕ್ಕೆ ನೆರವು ನೀಡುವಂತೆ ಮನವಿ ಮಾಡಿದರು.

‘ಸರ್ಕಾರವೇ ಎಲ್ಲ ಕೆಲಸವನ್ನು ಮಾಡಿಸಲಿ ಎಂದು ಕಾದು ಕುಳಿತುಕೊಳ್ಳುವುದರಲ್ಲಿ ಅರ್ಥ ಇಲ್ಲ. ದಶಕಗಳ ಹಿಂದೆ ನಮ್ಮ ಹಿರಿಯರು ಕೆರೆ, ಕುಂಟೆಗಳನ್ನು ನಿರ್ಮಿಸಿಕೊಂಡು ಸೂಕ್ತವಾಗಿ ನಿರ್ವಹಣೆ ಮಾಡುತ್ತಿದ್ದರಿಂದಲೇ ಅವರು ನೆಮ್ಮದಿಯ ಬದುಕನ್ನು ನಡೆಸಲು ಸಾಧ್ಯವಾಗಿತ್ತು. ಇಷ್ಟು ದಿನ ಕೃಷಿ ಮತ್ತು ಕುಡಿಯಲು ಮಾತ್ರ ನೀರಿಗಾಗಿ ಮಾತ್ರ ಬಳಕೆಯಾಗುತಿತ್ತು. ಆದರೆ ಈಗ ಜಿಲ್ಲೆಯಲ್ಲಿ ಸ್ಥಾಪನೆಯಾಗಿರುವ ಕಂಪನಿಗಳು, ಕೈಗಾರಿಕೆಗಳು ಸಹ ಎಲ್ಲ ರೀತಿಯ ಬಳಕೆಗು ಅಂತರ್ಜಲವನ್ನೇ ಅವಲಂಬಿಸಿವೆ. ಹೀಗಾಗಿ ಕೆರೆಗಳ ಅಭಿವೃದ್ಧಿಗೆ ಕೈಗಾರಿಕೆಗಳು ಉದಾರವಾಗಿ ಆರ್ಥಿಕ ನೆರವು ನೀಡುವ ಮೂಲಕ ಮಳೆ ನೀರು ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಬೇಕು. ಇಲ್ಲವಾದರೆ ಹಣ ನೀಡಿದರೂ ನೀರು ದೊರೆಯದಂತಹ ಭೀಕರ ಪರಿಸ್ಥಿತಿ ಎದುರಾಗಲಿದೆ’ ಎಂದರು.

‘ಅಂತರ್ಜಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಜಿಲ್ಲೆಯಲ್ಲಿನ ಎಲ್ಲ ಕೈಗಾರಿಕೆಗಳು, ವಾಣಿಜ್ಯ ಉದ್ದೇಶದ ಕಟ್ಟಡಗಳು ಸೇರಿದಂತೆ ಮನೆಗಳು ಸಹ ಮಳೆ ನೀರು ಸಂಗ್ರಹ ಮಾಡಿಕೊಳ್ಳುವಂತೆ ಈಗಾಗಲೇ ನೋಟಿಸ್ ನೀಡಲಾಗಿದ್ದು, ಈ ಕುರಿತು ಕೈಗಾರಿಕೆಗಳ ವ್ಯವಸ್ಥಾಪಕರ ಸಭೆಗಳನ್ನು ನಡೆಸಲಾಗಿದೆ’ ಎಂದರು.

ಒಳಚರಂಡಿ ನೀರು ಶುದ್ಧೀಕರಿಸಲು ಮನವಿ

‘ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹೊಂದಿಕೊಂಡಿರುವ ಚಿಕ್ಕ ತುಮಕೂರು ಬಳಿ ನಿರ್ಮಿಸಲಾಗಿರುವ ನಗರಸಭೆಯ ಒಳಚರಂಡಿ ನೀರು ಶುದ್ದೀಕರಣ ಘಟಕದಲ್ಲಿ ನೀರನ್ನು ಶುದ್ದೀಕರಿಸದೇ ಇರುವುದರಿಂದ ಸುತ್ತಮುತ್ತಲ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಸಿ.ಮಂಜುನಾಥ್, ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಚಂದ್ರೇಗೌಡ, ಮುಖಂಡರಾದ ತಿ.ರಂಗರಾಜು, ಟಿ.ರಾಮಣ್ಣ, ಸಂದೇಶ್‌, ಆದಿತ್ಯನಾಗೇಶ್, ಶಿವಕುಮಾರ್, ಪಿಡಿಒ ಪ್ರಕಾಶ್‌, ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ಕೆರೆಗಳ ಅಭಿವೃದ್ಧಿ ಸಂಘದ ಸದಸ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT