ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬಯಲು ಸೀಮೆ ಜಿಲ್ಲೆಗಳಿಗೆ ಕೆಲವೇ ದಿನಗಳಲ್ಲಿ ಎತ್ತಿನ ಹೊಳೆಯ ನೀರು ಹರಿಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಅವರು, ಸೆಪ್ಟೆಂಬರ್ 6 ರಂದು ಸಕಲೇಶಪುರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಎತ್ತಿನ ಹೊಳೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. ಈಗಾಗಲೇ ಈ ಭಾಗಗಳಿಗೆ ಎಚ್.ಎನ್ ವ್ಯಾಲಿಯ ಸಂಸ್ಕರಿತ ನೀರು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಎತ್ತಿನ ಹೊಳೆಯ ನೀರು ಸಿಗಲಿದೆ. ಸೆಪ್ಟೆಂಬರ್ 6ರಂದು ಸಕಲೇಶಪುರ ಕಾರ್ಯಕ್ರಮಕ್ಕೆ ತಾಲ್ಲೂಕಿನ ಜನರೂ ಭಾಗಿಯಾಗಲಿದ್ದಾರೆ. ಎರಡು, ಮೂರು ತಿಂಗಳಲ್ಲಿ ನೀರು ಸಿಗಲಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಎತ್ತಿನ ಹೊಳೆ ಯೋಜನೆಗೆ ಚಾಲನೆ ನೀಡಲಾಗಿತ್ತು. ಆರಂಭದಲ್ಲಿ ಇದರ ವೆಚ್ಚವೂ ₹13.5 ಸಾವಿರ ಕೋಟಿಯಾಗಿದ್ದು, ಅದು ಪೂರ್ಣಗೊಳ್ಳುವ ವೇಳೆಗೆ ₹23.5 ಸಾವಿರ ಕೋಟಿಯಾಗಿದೆ ಎಂದರು.
ಎತ್ತಿನ ಹೊಳೆ ಯೋಜನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 4 ಟಿಎಂಸಿ, ಚಿಕ್ಕಬಳ್ಳಾಪುರ 4.5 ಟಿಎಂಸಿ, ಕೋಲಾರ 5 ಟಿಎಂಸಿ ನೀರು ಹಂಚಿಕೆಯಾಗಲಿದ್ದು, ಇದರಿಂದ ಕುಡಿಯುವ ನೀರಿನ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿವಿಧ ಕಾಮಗಾರಿಗಳಿಗೆ ಚಾಲನೆ: ಇದೇ ವೇಳೆ ₹52 ಲಕ್ಷ ವೆಚ್ಚದಲ್ಲಿ ಪಟ್ಟಣದ ಚಿಕ್ಕಕೆರೆ ಆಂಜನೇಯ ಸ್ವಾಮಿ ದೇಗುಲದ ಅಭಿವೃದ್ಧಿ ಕಾಮಗಾರಿ, 6 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಶುದ್ಧೀಕರಣ ಘಟಕ, ₹22 ಲಕ್ಷ ವೆಚ್ಚದಲ್ಲಿ ವಾರ್ಡ್ ನಂ.20ರಲ್ಲಿ ನಿರ್ಮಾಣ ಆಗಿರುವ ಅಂಗನವಾಡಿ ಕಟ್ಟಡ, ₹13.12 ಲಕ್ಷ ವೆಚ್ಚದಲ್ಲಿ ಪುಟ್ಟಪ್ಪನ ಗುಡಿ ಬೀದಿಯಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಶಾಲಾ ಕಟ್ಟಡ, ₹10.41 ಲಕ್ಷ ವೆಚ್ಚದಲ್ಲಿ ಕೆಂಪೇಗೌಡ ವೃತ್ತದ ಬಳಿ ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ನಿರ್ಮಾಣವಾಗಿರುವ ಶೌಚಾಲಯವನ್ನು ಸಚಿವರು ಉದ್ಭಾಟಿಸಿದರು.
ಬಯಪ್ಪ ಅಧ್ಯಕ್ಷ ವಿ.ಶಾಂತ ಕುಮಾರ್, ಗ್ಯಾರಂಟಿ ಸಮಿತಿಯ ಜಿಲ್ಲಾಧ್ಯಕ್ಷ ಚನ್ನಹಳ್ಳಿ ರಾಜಣ್ಣ, ತಾಲ್ಲೂಕು ಅಧ್ಯಕ್ಷ ಸಿ.ಜಗನ್ನಾಥ್, ಕೃಷಿಕ ಸಮಾಜದ ಎಸ್.ಆರ್.ರವಿ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ವಿಜಯಪುರ ಬ್ಲಾಕ್ ಕಾಂಗ್ರೆಸ್ ರಾಮಚಂದ್ರಪ್ಪ, ತಹಶೀಲ್ದಾರ್ ಬಾಲಕೃಷ್ಣ, ಪುರಸಭೆ ಮುಖ್ಯಾಧಿಕಾರಿ ದೊಡ್ಡಮಲವಯ್ಯ, ಎಂಜಿನಿಯರ್ ಗಜೇಂದ್ರ, ಪುರಸಭೆ ಸದಸ್ಯರಾದ ಗುಟ್ಟಹಳ್ಳಿ ರವಿ, ಆರ್.ರಘು, ಎಚ್.ಸಿ.ಚಂದ್ರಣ್ಣ, ಮುನಿಕೃಷ್ಣ, ಬಾಂಬೆ ನಾರಾಯಣಸ್ವಾಮಿ, ಶ್ರೀಧರ್ ಮೂರ್ತಿ, ಸಂಪಗಿ ಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.