ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಎತ್ತಿನಹೊಳೆ ಯೋಜನೆ ಅವೈಜ್ಞಾನಿಕ

ಗುತ್ತಿಗೆದಾರರ ಅನುಕೂಲಕ್ಕಾಗಿ ರೂಪಿಸಿರುವ ಯೋಜನೆ: ಟೀಕೆ
Last Updated 6 ಮಾರ್ಚ್ 2023, 4:37 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಬಯಲು ಸೀಮೆಯ ಜಿಲ್ಲೆಗಳಿಗೆ ನೀರುಣಿಸುವ ಎತ್ತಿನ ಹೊಳೆ ಯೋಜನೆಯು ನೀರಾವರಿ ತಜ್ಞರ ವರದಿಗೆ ಮಾನ್ಯತೆ ನೀಡದೆ ಗುತ್ತಿಗೆದಾರರ ಅನುಕೂಲಕ್ಕೆ ರೂಪಿಸಿರುವ ಅವೈಜ್ಞಾನಿಕ ಯೋಜನೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಹೇಳಿದರು.

ಬಯಲುಸೀಮೆಯ ಬರಪೀಡಿತ ಜಿಲ್ಲೆಗಳ ನೀರಿನ ಹಕ್ಕಿಗಾಗಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ಜಲಜಾಗೃತಿ ಪಾದಯಾತ್ರೆ ದೊಡ್ಡಬಳ್ಳಾಪುರ ನಗರ ಬಸ್ ನಿಲ್ದಾಣದ ಬಳಿ ಆಗಮಿಸಿದ್ದ ವೇಳೆ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘₹8 ಸಾವಿರ ಕೋಟಿ ವೆಚ್ಚದಲ್ಲಿ ಆರಂಭವಾದ ಯೋಜನೆ ವೆಚ್ಚ ₹24 ಸಾವಿರ ಕೋಟಿ ತಲುಪಿರುವುದೆ. ಇದು ಎತ್ತಿನ ಹೊಳೆ ಯೋಜನೆ ನೀರಿನ ಹೆಸರಿನಲ್ಲಿ ಲೂಟಿ ನಡೆಯುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ’ ಎಂದು ಆರೋಪಿಸಿದರು.

ಯೋಜನೆಗೆ ಒಳಪಡುವ ಪ್ರದೇಶಗಳಲ್ಲಿ ರಾಶಿ ನೀರಿನ ಪೈಪುಗಳನ್ನು ಹಾಕುತಿರುವುದು ಬಿಟ್ಟರೆ ಯಾವುದೇ ಫಲಿತಾಂಶ ಕಾಣುತ್ತಿಲ್ಲ. ಈ ಪೈಪುಗಳು ಸಹ ಈಗ ತುಕ್ಕು ಹಿಡಿಯುತ್ತಿವೆ ಎಂದರು.‌

ಎತ್ತಿನ ಹೊಳೆ ಯೋಜನೆಗೆ 2014ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಗುದ್ದಲಿ ಪೂಜೆ ನೆರವೇರಿಸಲಾಯಿತು. ಈ ಯೋಜನೆಯಡಿ, ಮಳೆ ಲಭ್ಯತೆ, ಜಲಾನಯನ ಪ್ರದೇಶದ ಮಾಹಿತಿ ಆಧರಿಸಿದರೆ ನೀರು ಕೊಡಲು ಸಾಧ್ಯವೇ ಇಲ್ಲ ಎಂದು ಐಐಎಸ್‍ಸಿ ಹೇಳಿದೆ. ಯೋಜನೆ ದೋಷಪೂರಿತ ಎಂದು ಸೆಂಟ್ರಲ್ ವಾಟರ್ ಕಮಿಷನ್ ಸಹ ಹೇಳಿದೆ. 2015ರಲ್ಲಿ ಯೋಜನೆಯ ವಿರುದ್ಧ ನಡೆಸಿದ ಹೋರಾಟಕ್ಕೆ ಯಾವುದೇ ಮನ್ನಣೆ ದೊರೆಯಲಿಲ್ಲ ಎಂದು ಬೇಸರಿಸಿದರು.

ರೈತರಿಂದ ವಿಧಾನಸೌಧ ಮುತ್ತಿಗೆ ಹಾಕಲು ಟ್ರ್ಯಾಕ್ಟರ್ ರ‍್ಯಾಲಿ ನಡೆಸಿದಾಗ ಹೋರಾಟಗಾರರನ್ನು ಹತ್ತಿಕ್ಕಲಾಯಿತು. ಅಂದಿನಿಂದಲೂ ಈ ಯೋಜನೆಯ ವಿಫಲತೆಗಳ ಬಗ್ಗೆ ಸರ್ಕಾರಕ್ಕೆ ಕೂಗಿ ಹೇಳುತ್ತಿದ್ದರೂ ಕೇಳುತ್ತಿಲ್ಲ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲ್ಲೂಕುಗಳಿಗೆ ತ್ಯಾಜ್ಯ ನೀರನ್ನು ಸಂಸ್ಕರಿಸಿ ನೀರುಣಿಸುವ ಕೆ.ಸಿ.ವ್ಯಾಲಿ ಮತ್ತು ಎಚ್.ಎನ್.ವ್ಯಾಲಿಗಳ ಯೋಜನೆಯಲ್ಲಿ ನೀರು ಶುದ್ಧೀಕರಣಕ್ಕೆ ಆದ್ಯತೆ ನೀಡದೇ ನೀರು ಕಲುಷಿತವಾಗುತ್ತಿರುವ ಬಗ್ಗೆ ದೂರುಗಳಿವೆ. ಕೊಳವೆ ಬಾವಿಗಳಲ್ಲಿ ವಿಷಪೂರಿತ ನೀರು ಬರುತ್ತಿದೆ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ಸಿಪಿಐಎಂ ಮುಖಂಡ ಆರ್.ಚಂದ್ರತೇಜಸ್ವಿ, ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುದ್ದರಂಗಪ್ಪ, ರಂಗಪ್ಪ, ಉಷಾರಾಣಿ, ಪ್ರಭಾ, ಎಂ.ಆರ್‌.ಲಕ್ಷ್ಮೀನಾರಾಯಣ್, ಲೋಕೇಶ್ ಗೌಡ, ಶಿಪ್ರಕಾಶ್‌ರೆಡ್ಡಿ, ಸ್ಥಳೀಯ ಮುಖಂಡರಾದ ರಾಜಘಟ್ಟ ರವಿ, ಮುತ್ತೇಗೌಡ, ಹನುಮೇಗೌಡ, ಮಂಜುನಾಥ್, ಸಂಜೀವ್ ನಾಯಕ್, ಡಿ.ಪಿ.ಆಂಜನೇಯ, ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT