ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್: ಬಿಬಿಎಂಪಿ ವಿರುದ್ಧ ಚಿಕ್ಕನಾಗಮಂಗಲ ಗ್ರಾಮಸ್ಥರ ಪ್ರತಿಭಟನೆ

Last Updated 18 ಆಗಸ್ಟ್ 2022, 5:24 IST
ಅಕ್ಷರ ಗಾತ್ರ

ಆನೇಕಲ್:ಚಿಕ್ಕನಾಗಮಂಗಲ ಬಿಬಿಎಂಪಿ ಘನತ್ಯಾಜ್ಯ ಸಂಸ್ಕರಣಾ ಘಟಕದ ಅವ್ಯವಸ್ಥೆ ಖಂಡಿಸಿ ಗ್ರಾಮಸ್ಥರು ಬುಧವಾರ ಬೃಹತ್‌ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಶಾಂತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಗಮಂಗಲ ಗ್ರಾಮದಲ್ಲಿರುವ ಬಿಬಿಎಂಪಿ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಬಿಬಿಎಂಪಿಯವರು ಹಸಿ ಕಸ ಹಾಕುತ್ತಿದ್ದಾರೆ. ಅದರಲ್ಲಿ ಉತ್ಪತ್ತಿಯಾಗುವ ಕಲುಷಿತ ದ್ರವ ಮತ್ತು ಕಸದಿಂದಾಗಿ ಗಬ್ಬು ನಾರುತ್ತಿದೆ. ಇದರಿಂದ ಗ್ರಾಮಸ್ಥರು ವಿವಿಧ ರೋಗಗಳಿಂದ ಬಳಲುತ್ತಿದ್ದಾರೆ. ಹಾಗಾಗಿ, ಬಿಬಿಎಂಪಿಯವರು ಈ ಘಟಕವನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಿಕ್ಕನಾಗಮಂಗಲ ವೆಂಕಟೇಶ್‌ ಮಾತನಾಡಿ, ಘನ ತ್ಯಾಜ್ಯ ಸಂಸ್ಕರಣಾ ಘಟಕದಿಂದ ಬರುವ ಕಲುಷಿತ ನೀರನ್ನು ರಾಜಕಾಲುವೆ ಮೂಲಕ ಕೆರೆಗೆ ಹರಿಬಿಡಲಾಗುತ್ತಿದೆ. ಇದರಿಂದ ಪ್ರಾಣಿ, ಪಕ್ಷಿಗಳು, ಜಲಚರಗಳು,ಜಾನುವಾರು ತೊಂದರೆಗೆ ಸಿಲುಕಿವೆ ಎಂದರು.

ಈ ಕೆರೆಯಲ್ಲಿ ಹಲವಾರು ಕೊಳವೆಬಾವಿಗಳಿದ್ದು ಅಂತರ್ಜಲ ಕಲುಷಿತವಾಗುತ್ತಿದೆ. ಇಲ್ಲಿನ ಸಮಸ್ಯೆ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಉಪಯೋಗವಾಗಿಲ್ಲ. ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಳಾಂತರ ಮಾಡದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸರ್ಪೇಶ್‌ ಮಾತನಾಡಿ, ಬೆಂಗಳೂರು ನಗರಕ್ಕೆ ಹೊಂದಿಕೊಂಡಿದ್ದರೂ ಹಲವಾರು ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಗ್ರಾಮಕ್ಕೆ ಮೂಲ ಸೌಲಭ್ಯ ಕಲ್ಪಿಸಬೇಕಿದೆ. ಚಿಕ್ಕನಾಗಮಂಗಲ ಸಂಪರ್ಕ ರಸ್ತೆಯೂ ಹದಗೆಟ್ಟಿದ್ದು ಪ್ರತಿದಿನ ಸಾರ್ವಜನಿಕರು ಪರದಾಡುವಂತಾಗಿದೆ. ಒಳಚರಂಡಿ ಮತ್ತು ಎಸ್‌ಟಿಪಿ ಘಟಕದ ಅವಶ್ಯಕತೆಯಿದೆ. ತ್ಯಾಜ್ಯ ನೀರು ರಾಜಕಾಲುವೆಗೆ ಹರಿಯದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬಿಬಿಎಂಪಿ ಜಂಟಿ ಆಯುಕ್ತ ಪರಶುರಾಮ್‌ ಅವರಿಗೆ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು. ಗ್ರಾ.ಪಂ. ಸದಸ್ಯೆ ಶಶಿಕಲಾ, ಮುಖಂಡರಾದ ಬಾಬು ರೆಡ್ಡಿ, ಜಗದೀಶ್, ರಾಯಣ್ಣ, ಸೋಮಣ್ಣ, ಶಿವಣ್ಣ, ರಾಮಸ್ವಾಮಿ, ಶ್ರೀಧರ್‌, ಜಗದೀಶ್‌, ವೆಂಕಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT