ಶುಕ್ರವಾರ, ನವೆಂಬರ್ 22, 2019
27 °C

‘ಪಠ್ಯದಿಂದ ಟಿಪ್ಪು ಹೊರಗಿಡುವುದು ಖಂಡನೀಯ’

Published:
Updated:
Prajavani

ದೊಡ್ಡಬಳ್ಳಾಪುರ: ‘ಬಿಜೆಪಿ ಮತ್ತು ಕಾಂಗ್ರೆಸ್‌ ಮತಗಳಿಕೆಗಾಗಿ ಟಿಪ್ಪು ಜಯಂತಿಯನ್ನು ಬಳಸಿಕೊಳ್ಳುತ್ತಿವೆಯೇ ಹೊರತು ಮುಸ್ಲಿಮರ ಉದ್ದಾರಕ್ಕಾಗಿ ಅಥವಾ ಟಿಪ್ಪು ಮೇಲಿನ ಪ್ರೀತಿಯಿಂದ ಅಲ್ಲ’ ಎಂದು ಬಹುಜನ ಸಮಾಜವಾದಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್‌ ದೂರಿದರು.

ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಟಿಪ್ಪು ಜಯಂತಿಯನ್ನು ಸರ್ಕಾರ ರದ್ದುಪಡಿಸುವುದು ಹಾಗೂ ಪಠ್ಯದಿಂದ ಟಿಪ್ಪು ಪಾಠ ತೆಗೆದುಹಾಕುವ ಕ್ರಮ ಖಂಡನೀಯ. ಇದನ್ನು ಬಿಎಸ್‌ಪಿ ವಿರೋಧಿಸುತ್ತದೆ. ಬಿಎಸ್‌ಪಿ ವತಿಯಿಂದ ಟಿಪ್ಪು ಜಯಂತಿಯನ್ನು ಪಕ್ಷದ ಕಾರ್ಯಾಲಯದಲ್ಲಿ ಆಚರಣೆ ಮಾಡಲಾಗುವುದು. ಟಿಪ್ಪು ಬ್ರಿಟೀಷರನ್ನು ದೇಶದಿಂದ ಹೊರಹಾಕಲು ಪ್ರಾಮಾಣಿಕವಾಗಿ ಹೋರಾಟ ನಡೆಸಿದ ದೀಮಂತ ವ್ಯಕ್ತಿ. ಇಂತಹ ಸ್ವಾಭಿಮಾನಿ ಹೋರಾಟಗಾರನಿಗೆ ಕಳಂಕ ತರುವ ರೀತಿಯಲ್ಲಿ ಇಂದು ನಡೆದುಕೊಳ್ಳುತ್ತಿರುವುದು ವಿಷಾದನೀಯ’ ಎಂದರು.

‘ನಾವು ಸರ್ವ ಜನಾಂಗದ ಏಳಿಗೆಗಾಗಿ ರಾಜಕಾರಣ ಮಾಡುವವರೇ ಹೊರತು ಬರೀ ಮತ ಗಳಿಕೆಗಾಗಿ ಮಾತ್ರ ಜಯಂತಿ ಆಚರಿಸುವುದಿಲ್ಲ. ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಗರಿಷ್ಠ ಮುಖಬೆಲೆಯ ನೋಟ್‌ಗಳನ್ನು ರದ್ದುಪಡಿಸುವ ಸಂದರ್ಭದಲ್ಲಿಯೇ ದೇಶದ ಆರ್ಥಿಕತೆ ಕುಸಿಯಲಿದೆ, ಬಡವರು ತೊಂದರೆಗೆ ಸಿಲುಕಲಿದ್ದಾರೆ ಎಂದು ಎಚ್ಚರಿಸಲಾಗಿತ್ತು. ಗರಿಷ್ಠ ಮುಖಬೆಲೆಯ ನೋಟ್‌ ರದ್ದತಿ ಪರಿಣಾಮಗಳನ್ನು ಈಗ ದೇಶದ ಜನತೆ ಅನುಭವಿಸುತಿದ್ದಾರೆ’ ಎಂದರು.

ಬಿಎಸ್‌ಪಿ ತಾಲ್ಲೂಕು ಅಧ್ಯಕ್ಷ ಹನುಮಂತೇಗೌಡ, ಅತಾಉಲ್ಲಾ, ಶೇಕ್‌ಮುಸ್ತಾಫ, ಫಜಲ್‌ ಅಹಮದ್‌, ದಾಳಪ್ಪ ಇದ್ದರು.

ಪ್ರತಿಕ್ರಿಯಿಸಿ (+)