ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಣ ಪ್ರದೇಶಕ್ಕೂ ನರೇಗಾ ವಿಸ್ತರಿಸಿ

ಯೋಜನೆಗೆ ತಿದ್ದುಪಡಿ ತಂದು ರೈತರಿಗೆ ಅನುಕೂಲ ಕಲ್ಪಿಸಲು ಒತ್ತಾಯ
Last Updated 25 ಜನವರಿ 2020, 14:24 IST
ಅಕ್ಷರ ಗಾತ್ರ

ವಿಜಯಪುರ: ರೈತ ದೇಶದ ಬೆನ್ನೆಲುಬು ಎಂಬುದು ಕೇವಲ ಹೇಳಿಕೆಯಾಗುತ್ತಿದೆ. ಸರ್ಕಾರಗಳು ರೈತರಿಗೆ ನೀಡುವ ಸೌಲಭ್ಯಗಳಲ್ಲಿ ತಾರತಮ್ಯ ಮಾಡುತ್ತಿರುವುದು ಎಷ್ಟು ಸರಿ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಸಹಯೋಗದಲ್ಲಿ ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಗಳ ಮೂಲಕ ಜಾರಿಗೆ ತಂದಿರುವ ನರೇಗಾ ಯೋಜನೆಯಡಿ ಗ್ರಾಮೀಣ ಭಾಗದ ರೈತರು ‘ನಮ್ಮ ಹೊಲ, ನಮ್ಮ ದಾರಿ’ ಯೋಜನೆಯಡಿ ರಸ್ತೆಗಳ ನಿರ್ಮಾಣ ಸೇರಿದಂತೆ ಹಸುಗಳ ಶೆಡ್, ಚರಂಡಿ, ಸಿ.ಸಿ.ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡುವ ಮೂಲಕ ಹಲವು ಸೌಲಭ್ಯಗಳನ್ನು ಒದಗಿಸುತ್ತಿದ್ದು, ಪಟ್ಟಣ ಪ್ರದೇಶಗಳಲ್ಲಿ ವಾಸವಾಗಿರುವ ರೈತರು ಈ ಸೌಲಭ್ಯಗಳನ್ನು ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ ಎಂದು ರೈತ ಹನುಮಂತಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಗ್ರಾಮಾಂತರ ಪ್ರದೇಶಗಳಲ್ಲಿರುವ ರೈತರಂತೆ ಪಟ್ಟಣದಲ್ಲಿರುವ ರೈತರೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಹಾಲು ಉತ್ಪಾದನೆ ಮಾಡಲು ಶ್ರಮ ಪಡುತ್ತಿದ್ದಾರೆ. ಅದರಿಂದಲೇ ಜೀವನ ಮಾಡುತ್ತಿದ್ದಾರೆ. ಹಸುಗಳ ಶೆಡ್‌ ನಿರ್ಮಾಣಕ್ಕೆ ಗ್ರಾಮಾಂತರ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ₹ 43 ಸಾವಿರ ಇತರ ವರ್ಗದ ರೈತರಿಗೆ ₹ 19,500 ಸಹಾಯಧನ ಬಿಡುಗಡೆಯಾಗುತ್ತದೆ ಎಂದು ತಿಳಿಸಿದರು.

ಪಟ್ಟಣ ಪ್ರದೇಶಗಳಲ್ಲಿರುವ ರೈತರು ಈ ಎಲ್ಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ನರೇಗಾ ಯೋಜನೆಗೆ ತಿದ್ದುಪಡಿ ತಂದು ಪಟ್ಟಣ ಪ್ರದೇಶಗಳಲ್ಲಿನ ರೈತರಿಗೂ ಅನುಕೂಲ ಕಲ್ಪಿಸಬೇಕು ಎಂದುಅವರು ಒತ್ತಾಯಿಸಿದರು.

ರೈತ ನಾರಾಯಣಸ್ವಾಮಿ ಮಾತನಾಡಿ, ‘ನಾವು ಪಟ್ಟಣದಲ್ಲಿ ವಾಸವಾಗಿದ್ದೇವೆ. ನಮ್ಮ ಜಮೀನು ಗ್ರಾಮಾಂತರ ಪ್ರದೇಶದಲ್ಲಿದೆ. ಜಮೀನಿನ ದಾಖಲೆ ನೀಡಿ, ತೋಟಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ಆದರೆ ನಾವು ವಾಸವಿರುವ ದಾಖಲೆಗಳು ಪಟ್ಟಣದಲ್ಲಿರುವುದರಿಂದ ಯಾವ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಹಸುಗಳ ಶೆಡ್ ನಿರ್ಮಾಣ ಮಾಡಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸವಾಗಿರಲೇಬೇಕು. ಇಲ್ಲವಾದರೆ ಉದ್ಯೋಗದ ಚೀಟಿ ಸಿಗುವುದಿಲ್ಲ. ಈ ಸೌಲಭ್ಯ ಪಟ್ಟಣಗಳಿಗೂ ವಿಸ್ತರಿಸಿದರೆ ಅನುಕೂಲವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT