ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಸಂಘಟಿತರಿಗೆ ಸೌಲಭ್ಯ ನೀಡಿ’

ಕಾರ್ಮಿಕ ಅಧಿಕಾರಿಗಳಿಗೆ ಜಿ.ಪಂ. ಸಿಇಒ ಎಂ.ಆರ್. ರವಿಕುಮಾರ್‌ ಸೂಚನೆ
Last Updated 18 ಜೂನ್ 2021, 4:35 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಕಾರ್ಮಿಕ ಇಲಾಖೆ ಅಧಿಕಾರಿಗಳು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯ ತಲುಪಿಸುವಂತಹ ಕೆಲಸ ಮಾಡಬೇಕು’ ಎಂದುಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್. ರವಿಕುಮಾರ್ ಸೂಚಿಸಿದರು.

ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕೋವಿಡ್-19 ಎರಡನೇ ಅಲೆಯ ತೀವ್ರತೆಯಿಂದ ಸಂಕಷ್ಟದಲ್ಲಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಪರಿಹಾರ ಧನ ನೀಡುವ ಜಿಲ್ಲಾಮಟ್ಟದ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಕಾರ್ಮಿಕ ಅಧಿಕಾರಿಗಳು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿ ಪರಿಹಾರ ಒದಗಿಸಬೇಕು ಎಂದು ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಜಗದೀಶ ಕೆ. ನಾಯಕ್ ಮಾತನಾಡಿ, ಜಿಲ್ಲೆಯಲ್ಲಿರುವ ಅಸಂಘಟಿತ ವಲಯದ ಕಾರ್ಮಿಕರು ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಸರ್ಕಾರದ ಸೌಲಭ್ಯ ಪಡೆಯಬೇಕು. ಕಾರ್ಮಿಕ ಅಧಿಕಾರಿಗಳು ತಾಲ್ಲೂಕು ಮಟ್ಟದಲ್ಲಿ ಅಸಂಘಟಿತ ಕಾರ್ಮಿಕರಿಗೆ ಸಂಬಂಧಿಸಿದ ದಾಖಲೆ ಸಂಗ್ರಹಿಸಿ ಅವರಿಗೆ ಸೂಕ್ತ ಸಹಾಯಧನ ತಲುಪಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರ ಘೋಷಿಸಿರುವ ಕೋವಿಡ್ ಪರಿಹಾರ ನಿಧಿಯು ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ತಲುಪಲಿದೆ. ಈ ಕುರಿತಂತೆ ವಿವಿಧ ಸಂಘ, ಸಂಸ್ಥೆಗಳು ತಮ್ಮಲ್ಲಿ ನೋಂದಣಿಯಾಗಿರುವ ಕಾರ್ಮಿಕರಿಗೆ ತಿಳಿಸಬೇಕು. ಇದರಿಂದ ಹಲವರಲ್ಲಿರುವ ಗೊಂದಲ ನಿವಾರಣೆಯಾಗಲಿದೆ ಎಂದರು.

ಕಳೆದ ಬಾರಿ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಕೆಲವರಿಗೆ ಸಹಾಯಧನ ತಲುಪುವುದು ವಿಳಂಬವಾಗಿತ್ತು. ಹೊಸದಾಗಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಖಾತ್ರಿಪಡಿಸಿಕೊಂಡು ಅರ್ಜಿ ಸಲ್ಲಿಸಬೇಕು. ಕಾರ್ಮಿಕ ಅಧಿಕಾರಿಗಳು ಅಸಂಘಟಿತ ವಲಯದ ಕಾರ್ಮಿಕರ ಜೊತೆ ಆಗಿಂದಾಗ್ಗೆ ಸಭೆ ನಡೆಸುವ ಮೂಲಕ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಸಹಾಯಕ ಕಾರ್ಮಿಕ ಆಯುಕ್ತರಾದ ತಮ್ಮಣ್ಣ, ವೀಣಾ, ಕಾರ್ಮಿಕ ಅಧಿಕಾರಿ ನಾಗೇಂದ್ರ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಮುನಿಕೃಷ್ಣಪ್ಪ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸುಮಾ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೃಷ್ಣಪ್ಪ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಭವ್ಯಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಅಸಂಘಟಿತ ವಲಯದ ಕಾರ್ಮಿಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT