ಶುಕ್ರವಾರ, ಆಗಸ್ಟ್ 6, 2021
22 °C
ಸೈನಿಕ ಹುಳು; ನಿಯಂತ್ರಣಕ್ಕೆ ಸಲಹೆ

ದೊಡ್ಡಬಳ್ಳಾಪುರ | ಸೈನಿಕ ಹುಳು ಹಾವಳಿ: ಹೊಲಗಳಿಗೆ ವಿಜ್ಞಾನಿಗಳ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಮುಸುಕಿನ ಜೋಳದ ಬೆಳೆಗೆ ಫಾಲ್‌ಹುಳು ಕಾಟದ ಬಾಧೆ ಆರಂಭವಾಗಿದೆ. ರೈತರು ಈ ಬಾರಿಯೂ ಜೋಳದ ಬೆಳೆಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಬೀಜೋಪಚಾರದಲ್ಲಿಯೇ ಹುಳುಗಳ ನಿಯಂತ್ರಣದ ಬಗ್ಗೆ ತಜ್ಞರ ಸಲಹೆಗಳನ್ನು ಪಾಲಿಸಿದರೆ ಕೀಟಗಳನ್ನು ನಿಯಂತ್ರದಲ್ಲಿಡಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎ.ಪಿ.ಮಲ್ಲಿಕಾರ್ಜುನಗೌಡ, ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ.ಬಿ. ಮಂಜುನಾಥ್ ಸಲಹೆ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಫಾಲ್ ಸೈನಿಕ ಹುಳು ಅಥವಾ ಸ್ಪೊಡೋಪ್ಟೆರಾ ಫ್ರುಜಿಫೆರ್ಡಾ ಅಮೇರಿಕಾ ಖಂಡದ ದೇಶಗಳಿಂದ ಆಫ್ರಿಕಾ ಖಂಡದ ಮೂಲಕ ಭಾರತ ದೇಶಕ್ಕೆ ಜುಲೈ 2018ರಲ್ಲಿ ಲಗ್ಗೆ ಇಟ್ಟಿದೆ.

ಫಾಲ್ ಸೈನಿಕ ಹುಳು ಬಹು ಬೆಳೆ ಭಕ್ಷಕ. ಇದು ವಿದೇಶಿ ಮೂಲದ ಕೀಟವಾಗಿದ್ದು ಆಕ್ರಮಣಕಾರಿ ಪ್ರವೃತ್ತಿಯನ್ನು ಹೊಂದಿದೆ. ಸುಮಾರು 80ಕ್ಕಿಂತ ಹೆಚ್ಚು ಆಸರೆಯ ಸಸ್ಯಗಳನ್ನು ಹೊಂದಿದೆ. ಮುಖ್ಯವಾಗಿ ಹುಲ್ಲುಗಾವಲು, ಹುರುಳಿ, ಗೋವಿನಜೋಳ, ರಾಗಿ, ಕಡಲೆ, ಭತ್ತ, ಜೋಳ, ಕಬ್ಬು, ಕಿರುಧಾನ್ಯದ ಬೆಳೆಗಳು ಮತ್ತು ಮೇವಿನ ಬೆಳೆಗಳು ಸೇರಿದಂತೆ ಅನೇಕ ಬೆಳೆಗಳು ಆಗಾಗ್ಗೆ ಈ ಕೀಟದ ಬಾಧೆಗೆ ತುತ್ತಾಗುತ್ತಿವೆ. ತರಕಾರಿ ಬೆಳೆಗಳು ಮತ್ತು ಹಣ್ಣಿನ ಬೆಳೆಗಳ ಮೇಲೆಯೂ ಕೆಲವೊಮ್ಮೆ ಮಾತ್ರ ಹಾನಿಮಾಡುತ್ತವೆ.

ಈ ಕೀಟ ಹೆಚ್ಚಾಗಿ 40 ರಿಂದ 50 ದಿನದೊಳಗಿನ ಬೆಳೆಯನ್ನು ನಾಶಮಾಡುತ್ತವೆ. ನಿರಂತರವಾಗಿ ಆಹಾರ ಭಕ್ಷಿಸುವ ಇವು ತಾವು ತಿನ್ನುವ ಆಹಾರವು ಖಾಲಿಯಾದ ತಕ್ಷಣ ಆಹಾರ ಅನ್ವೇಷಣೆಯಲ್ಲಿ ಒಂದು ಹೊಲದಿಂದ ಮತ್ತೊಂದು ಹೊಲಕ್ಕೆ ಸೈನಿಕೋಪಾದಿಯಲ್ಲಿ ಪಸರಿಸುವ ಶಕ್ತಿಯನ್ನು ಹೊಂದಿವೆ ಎಂದರು.

ನಿರ್ವಹಣಾ ಕ್ರಮಗಳು: ರೈತರು ಸೂಕ್ತ ವಿಧಾನಗಳನ್ನು ಅನುಸರಿಸದೇ ರಾಸಾಯನಿಕ ಅಂಗಡಿಗಳಿಂದ ತಂದ ಕೀಟನಾಶಕಗಳನ್ನು ಬಳಸುತ್ತಾರೆ. 10 ದಿನಗಳ ನಂತರ ಮತ್ತೆ ಕೀಟಗಳ ಆರಂಭಗೊಳ್ಳುತ್ತದೆ. ಈ ನಿಟ್ಟಿನಲ್ಲಿ ರೈತರು ಸೂಕ್ತ ಕೀಟನಾಶಕವನ್ನು ಬಳಸಬೇಕು. ಪೈರಿನಲ್ಲಿ ಅಡಗಿರುವ ಹುಳುಗಳು ಸಂಜೆ ಹೊತ್ತು ಹೆಚ್ಚಾಗಿ ಹೊರಬರುವುದರಿಂದ ಸಂಜೆ ಹೊತ್ತು ಮಾತ್ರ ಕೀಟನಾಶಕಗಳನ್ನು ಸಿಂಪಡಿಸಬೇಕಿದೆ.

ಮುಸುಕಿನಜೋಳ ಬಿತ್ತನೆಗೂ ಮುನ್ನ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದು ಸೂಕ್ತ ಎಂದು ಹೇಳಿದರು.

ಬೇವಿನ ಬೀಜದ ಕಷಾಯವನ್ನು ಶೇ5 ರಂತೆ ಅಥವಾ ಬೇವಿನ ಮೂಲದ ಎಣ್ಣೆಯನ್ನು ಸುಳಿಗೆ ಬೀಳುವಂತೆ ಸಿಂಪರಣೆ ಮಾಡುವುದರಿಂದ ಮೊಟ್ಟೆ ಮತ್ತು ಮರಿಹುಳುಗಳನ್ನು ನಾಶಪಡಿಸಬಹುದು. ಮುಸುಕಿಜೋಳದಲ್ಲಿ ಹುಳುವಿನ ಹಾವಳಿ ಕಂಡು ಬಂದ ತಕ್ಷಣ ರೈತ ಸಂಪರ್ಕ ಕೇಂದ್ರದಲ್ಲಿನ ಅಧಿಕಾರಿಗಳಿಂದ ಸೂಕ್ತ ಸಲಹೆ, ಸೂಚನೆಗಳನ್ನು ಪಡೆಯುವುದು ಒಳತು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.