ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀತದಿಂದ ಮುಕ್ತಿ ಪಡೆದ ಕುಟುಂಬಗಳು

Last Updated 17 ನವೆಂಬರ್ 2019, 5:06 IST
ಅಕ್ಷರ ಗಾತ್ರ

ಆನೇಕಲ್ : ಜೀತದಾಳುಗಳಾಗಿ ದುಡಿಸಿಕೊಂಡು ಜೀತ ಪದ್ಧತಿಯಲ್ಲಿ ಕೆಲಸ ಮಾಡುತ್ತಿದ್ದ 10 ಮಂದಿ ಪುಟಾಣಿ ಮಕ್ಕಳು ಸೇರಿದಂತೆ 29 ಮಂದಿಯನ್ನು ಜೀತ ವಿಮುಕ್ತಿಗೊಳಿಸಿ ಸಂರಕ್ಷಿಸಿದ ಘಟನೆ ಆನೇಕಲ್ ತಾಲ್ಲೂಕಿನ ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೂಗೂರು ಗ್ರಾಮದಲ್ಲಿ ನಡೆದಿದೆ.

ಜೀತ ಪದ್ಧತಿ ಬಗ್ಗೆ ಸ್ವಯಂಸೇವಾ ಸಂಸ್ಥೆಯೊಂದು ದೂರು ನೀಡಿದ್ದರಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ಉಪವಿಭಾಗಾಧಿಕಾರಿ ಡಾ.ಶಿವಣ್ಣ, ತಹಶೀಲ್ದಾರ್‌ ದಿನೇಶ್‌ ಮತ್ತು ಸರ್ಜಾಪುರ ಪಿಎಸ್‌ಐ ಮಂಜುನಾಥ್‌ರೆಡ್ಡಿ ನೇತೃತ್ವದ ತಂಡ ದಾಳಿ ನಡೆಸಿ ಕೂಗೂರಿನ ನೀಲಗಿರಿ ತೋಪೊಂದರಲ್ಲಿ ಕೆಲಸ ಮಾಡುತ್ತಿದ್ದ ಜೀತದಾಳುಗಳನ್ನು ಬಂಧಮುಕ್ತಗೊಳಿಸಿದ್ದಾರೆ.

ದೂರುಗಳು ಬಂದ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ಟೊಮೊಟೊ ವ್ಯಾಪಾರಿಯ ಸೋಗಿನಲ್ಲಿ ಉಪವಿಭಾಗಾಧಿಕಾರಿ ಡಾ.ಶಿವಣ್ಣ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿಯ ಪರಿಸ್ಥಿತಿಯನ್ನು ಗುರುತಿಸಿ ಜೀತಕ್ಕಿದ್ದವರೊಂದಿಗೆ ಮಾತನಾಡಿ ವಾಸ್ತವ ತಿಳಿದುಕೊಂಡು ಶನಿವಾರ ಮುಂಜಾನೆ ದಾಳಿ ನಡೆಸಿ ಜೀತದಾಳುಗಳನ್ನು ಬಂಧಮುಕ್ತಗೊಳಿಸಿದ್ದಾರೆ.

ಹೊಸಕೋಟೆ ತಾಲ್ಲೂಕಿನ ಮೇಡಿಮಲ್ಲಸಂದ್ರದ ವೆಂಕಟರಾಜು ಎಂಬುವವರು ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ವೇಮನಪಲ್ಲಿ ಮತ್ತು ಪೆದುಗಟ್ಟಿ ಗ್ರಾಮಗಳಿಂದ ಜನರನ್ನು ಕರೆತಂದು ಈ ಕುಟುಂಬಗಳಿಗೆ ಗುಡಿಸಲುಗಳನ್ನು ಹಾಕಿಕೊಟ್ಟು ನೀಲಗಿರಿ ತೋಪುಗಳನ್ನು ಕೊಯ್ಲು ಮಾಡುವ ಕೆಲಸ ಮಾಡಿಸುತ್ತಿದ್ದರು. ಈ ಕುಟುಂಬಗಳಿಗೆ ವೇತನ ನೀಡುತ್ತಿರಲಿಲ್ಲ. ಸಂಬಳ ಕೇಳಿದರೆ ಖರ್ಚಿಗೆಂದು ₹500–1,000 ನೀಡುತ್ತಿದ್ದರು ಎನ್ನಲಾಗಿದೆ.

ಕೆಲಸಕ್ಕೆ ಸೇರುವ ಸಂದರ್ಭದಲ್ಲಿ ₹60 ಸಾವಿರವನ್ನು ಮಾಲೀಕರು ನೀಡಿದ್ದರು ಎನ್ನಲಾಗಿದೆ. ಈಗ ವಿಚಾರಿಸಿದರೆ ₹5 ಲಕ್ಷ ಸಾಲವಿದೆ ಎಂದು ಹೇಳುತ್ತಾರೆ ಎಂದು ಜೀತಕ್ಕಿದ್ದ ಕಾರ್ಮಿಕರು ಮಾಹಿತಿ ನೀಡುತ್ತಾರೆ. ಸಾಲ ತೀರಲಿಲ್ಲ ಎಂಬ ನೆಪವೊಡ್ಡಿ ಕೆಲಸ ಮಾಡಿಸುತ್ತಿದ್ದರು. ಕೆಲಸಕ್ಕೆ ತಕ್ಕಂತೆ ಕೂಲಿ ನೀಡುತ್ತಿರಲಿಲ್ಲ.

ಊರಿಗೆ ಹೋಗಲು ನಿರ್ಬಂಧ ಹಾಕಿದ್ದರು. ಹಾಗಾಗಿ ಜೀತದಾಳುಗಳಂತೆ ಕೆಲಸ ಮಾಡುತ್ತಿದ್ದ ಇವರು ಬಂಧನದಲ್ಲಿದ್ದಂತದಿದ್ದರು. ಇವರ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ ನಂತರ ದಾಳಿ ನಡೆಸಿ ಜೀತವಿಮುಕ್ತಿಗೊಳಿಸಿ ರಕ್ಷಿಸಲಾಗಿದೆ. ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ಡಾ.ಶಿವಣ್ಣ ತಿಳಿಸಿದರು.

ಜೀತದಾಳುವಾಗಿ ಕೆಲಸ ಮಾಡುತ್ತಿದ್ದ ರಮೇಶ್ ಮಾತನಾಡಿ, ಕಷ್ಟಪಟ್ಟು ಕೆಲಸ ಮಾಡಿದರೂ ಸರಿಯಾಗಿ ಆಹಾರ ನೀಡುತ್ತಿರಲಿಲ್ಲ. ಕಾಯಿಲೆ ಬಂದರೂ ಕೆಲಸ ಮಾಡಬೇಕಾಗಿತ್ತು. ಊರಿಗೆ ಕಳುಹಿಸುತ್ತಿರಲಿಲ್ಲ. ಶೆಡ್‌ಗಳಲ್ಲಿ ವಾಸ ಮಾಡಬೇಕಾಗಿತ್ತು. ಯಾವುದೇ ಸೌಲಭ್ಯಗಳಿರಲಿಲ್ಲ. ಮಕ್ಕಳಿಂದಲೂ ಕೆಲಸ ಮಾಡಿಸುತ್ತಿದ್ದರು ಎಂದು ದೂರಿದರು.

ದಾಳಿ ನಡೆಸುತ್ತಿದ್ದಂತೆ ಜೀತದಾಳುಗಳನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ವೆಂಕಟರಾಜು ತಲೆಮರೆಯಿಸಿಕೊಂಡಿದ್ದು ಸರ್ಜಾಪುರ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT