ಶನಿವಾರ, ನವೆಂಬರ್ 23, 2019
23 °C
ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ವಿಶ್ವ ಕುಟುಂಬ ದಿನಾಚರಣೆ

ಕುಟುಂಬ ಪರಿಕಲ್ಪನೆ ಅತ್ಯಂತ ಪವಿತ್ರ

Published:
Updated:
Prajavani

ವಿಜಯಪುರ: ಕುಟುಂಬ ಎಂಬ ಪರಿಕಲ್ಪನೆ ತುಂಬಾ ಪವಿತ್ರವಾದುದು ಮತ್ತು ಮಹತ್ವವಾದುದು. ಪ್ರತಿಯೊಬ್ಬ ವ್ಯಕ್ತಿ ಮತ್ತು ಸಮಾಜವನ್ನು ಒಂದೆಡೆ ಕೇಂದ್ರೀಕರಿಸುವ ಈ ವ್ಯವಸ್ಥೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ. ಸುಧಾಕರ್ ಹೇಳಿದರು.

ಇಲ್ಲಿನ ಗಾಂಧಿ ಚೌಕದಲ್ಲಿರುವ ಪರಿಷತ್ತಿನ ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವ ಕುಟುಂಬ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

‘ವಸುದೈವ ಕುಟುಂಬಕಂ ಎಂಬ ನುಡಿಯಿದೆ. ಇದರ ಅರ್ಥ ಇಡೀ ವಿಶ್ವವೇ ನಮ್ಮ ಕುಟುಂಬ ಎಂದು. ಇದು ಕುಟುಂಬವೊಂದರ ಮಹತ್ವವನ್ನು ಸಾರುತ್ತದೆ. ಇದರ ಪರಿಕಲ್ಪನೆ ಇಲ್ಲದಿದ್ದರೆ ಇಡೀ ಜಗತ್ತನ್ನು ಊಹಿಸಲಿಕ್ಕೂ ಅಸಾಧ್ಯವಾಗುತ್ತಿತ್ತು. ಅಷ್ಟರ ಮಟ್ಟಿಗೆ ಕುಟುಂಬದ ಅಗತ್ಯ ನಮ್ಮ ವಿಶ್ವಕ್ಕೆ ಇದೆ’ ಎಂದರು.

‘ಮುಂದೆಯೂ ಜಗತ್ತು ಶಾಂತಿ, ಸಂಯಮದ ಹಾದಿಯಲ್ಲಿ ಸಾಗಬೇಕಿದ್ದರೆ ಅದಕ್ಕೆ ಕುಟುಂಬದ ತಳಪಾಯ ಅತಿ ಅಗತ್ಯ. ಅದು ನಮ್ಮ ದೇಶವಾಗಿರಲಿ ಅಥವಾ ವಿದೇಶವಾಗಿರಲಿ; ಎಲ್ಲ ಕಡೆಯೂ ಕುಟುಂಬವೆಂಬ ಭದ್ರ ಬುನಾದಿ ಇದ್ದೇ ಇದೆ. ಆದ್ದರಿಂದಲೇ ನಮ್ಮ ವಿಶ್ವ ಇಂದು ಉಳಿದುಕೊಂಡು ಮುಂದಕ್ಕೆ ಬೆಳೆಯುತ್ತಿದೆ. ಇದಕ್ಕೆ ವಿಶ್ವದ ಪ್ರತಿಯೊಂದು ದೇಶದ ಪ್ರಜೆಗಳ ಸಹಕಾರ ಬೇಕಾಗಿದೆ’ ಎಂದರು.

ಸಾಹಿತಿ ಸ್ವರ್ಣಗೌರಿ ಮಹದೇವ್ ಮಾತನಾಡಿ, ‘ಇಡೀ ವಿಶ್ವವೇ ಒಂದು ಕುಟುಂಬವಾಗಿ ಭಾವಿಸಿಕೊಂಡು ಸಾಗುತ್ತಿರುವ ನಾವು, ಯಾವ ಸಮಯದಲ್ಲಿ ಯಾವ ದೇಶದವರು ಬಾಂಬ್ ಹಾಕುತ್ತಾರೋ ಯಾವಾಗ ಯುದ್ಧವಾಗುತ್ತೋ ಎನ್ನುವ ಭಯ, ಆತಂಕದಲ್ಲಿ ಜೀವಿಸುವಂತಾಗಿದೆ’ ಎಂದರು.

‘ನಾವು ವಾಸ ಮಾಡುತ್ತಿರುವ ಕುಟುಂಬಗಳಲ್ಲೂ ಅವಿಭಕ್ತ ಕುಟುಂಬಗಳ ಸಂಖ್ಯೆ ವಿರಳವಾಗುತ್ತಿದೆ. ಮನಸ್ತಾಪಗಳು ಹೆಚ್ಚಾಗುತ್ತಿವೆ. ವಿಶ್ವದ ಎಲ್ಲ ರಾಷ್ಟ್ರಗಳು ಪರಸ್ಪರ ಸಹೋದರತ್ವದಲ್ಲಿ ಬದುಕು ಕಟ್ಟಿಕೊಳ್ಳಬೇಕಾಗಿದೆ’ ಎಂದರು.

ಸಾಹಿತಿ ವಿ.ಎನ್. ರಮೇಶ್ ಮಾತನಾಡಿ, ‘ಪ್ರತಿಯೊಬ್ಬರು ತಮ್ಮ ಕುಟುಂಬವನ್ನು ಪ್ರೀತಿಸಬೇಕು, ಈ ಮೂಲಕ ಇಡೀ ವಿಶ್ವವನ್ನು ನಾವೆಲ್ಲರೂ ಪ್ರೀತಿಸುತ್ತೇವೆ ಎನ್ನುವ ಸಂದೇಶವನ್ನು ರವಾನಿಸಬೇಕಾಗಿದೆ. ಕುಟುಂಬವೇ ನಮಗೆ ನಮ್ಮ ಅಸ್ತಿತ್ವವನ್ನು ತಿಳಿಸಿ ಕೊಡುವ, ನಾಯಕತ್ವ ಗುಣ ಕಲಿಸುವ, ಮಾರ್ಗದರ್ಶನ ನೀಡುವ ಮತ್ತು ವಿವಿಧ ರೂಪದಲ್ಲಿ ಬೆಂಬಲ ಮತ್ತು ಪ್ರೋತ್ಸಾಹ ನೀಡುವ ವ್ಯವಸ್ಥೆಯಾಗಿದೆ’ ಎಂದರು.

ಕುಟುಂಬವೊಂದರಲ್ಲಿ ತಾಯಿ, ತಂದೆ ಮತ್ತು ಮಕ್ಕಳು ಇರುತ್ತಾರೆ. ಭಾರತ ಮುಂತಾದ ಏಷ್ಯಾ ರಾಷ್ಟ್ರಗಳಲ್ಲಿ ಈ ಕುಟುಂಬದ ವ್ಯಾಪ್ತಿ ಇನ್ನೂ ವಿಸ್ತಾರಗೊಳ್ಳುತ್ತದೆ. ಅಲ್ಲಿ ತಂದೆ, ತಾಯಿ, ಮಕ್ಕಳು ಸೇರಿದಂತೆ ಇನ್ನಷ್ಟು ಸಂಬಂಧಿಗಳು ಸೇರುತ್ತಾರೆ ಎಂದರು.

ಕಸಾಪ ನಗರ ಘಟಕದ ಅಧ್ಯಕ್ಷ ಜೆ.ಆರ್. ಮುನಿವೀರಣ್ಣ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸಾಕಷ್ಟು ಅವಿಭಕ್ತ ಕುಟುಂಬಗಳು ಇದ್ದವು. ಕುಟುಂಬದ ಹಿರಿಯರೇ ಮನೆಯ ನಿರ್ವಹಣೆಯನ್ನು ಮಾಡುತ್ತಿದ್ದರು. ಹಿರಿಯರಿಂದ ಎಳೆ ಮಕ್ಕಳವರೆಗೂ ಎಲ್ಲರೂ ಒಂದೆ ಸೂರಿನಡಿ ಜತೆಗೂಡಿ ಬಾಳುವುದರಿಂದ ಸಂಪ್ರದಾಯ ಆಚಾರ ವಿಚಾರಗಳನ್ನು ಪಾಲಿಸುವಂತಾಗಿತ್ತು’ ಎಂದರು.

ಹಿರಿಯ ಮಾರ್ಗದರ್ಶನದಿಂದ ಸಮಾಜದಲ್ಲಿಯೂ ಸಾಮರಸ್ಯ ಮೂಡಿ ಎಲ್ಲೆಲ್ಲೂ ಸುಖ ಶಾಂತಿ ನೆಮ್ಮದಿ ನೆಲೆಸಿತ್ತು. ಆದರೆ ಕಾಲ ಬದಲಾದಂತೆ ಅವಿಭಕ್ತ ಕುಟುಂಬಗಳು ಮಾಯವಾಗಿ ಒಬ್ಬಂಟಿ ಬದುಕು ಅನಿವಾರ್ಯವಾಗಿದೆ. ಹಿರಿಯ ಮಾರ್ಗದರ್ಶನ ಕೊರತೆ ಕಾಡುತ್ತಿದೆ. ಇದರಿಂದ ಯುವ ಸಮುದಾಯ ಹಾದಿ ತಪ್ಪುತ್ತಿದೆ ಎಂದು ವಿಷಾದಿಸಿದರು.

ಸಾಂಸ್ಕೃತಿಕ ಕಲಾ ತಂಡದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿ. ನಾಯ್ಡು, ಮತ್ತು ಶೇಷಗಿರಿರಾವ್ ಅವರನ್ನು ಸನ್ಮಾನಿಸಲಾಯಿತು. ಕಸಾಪ ಮುಖಂಡರಾದ ಶಿವಕುಮಾರ್, ನಾರಾಯಣಸ್ವಾಮಿ, ಅಪ್ಪಿ, ಮಹಾತ್ಮಾಂಜನೇಯ, ಮುರಳಿ, ಶ್ರೀನಿವಾಸ್, ವಿಶ್ವನಾಥ್, ರಾಮಕೃಷ್ಣಪ್ಪ ಇದ್ದರು.

ಪ್ರತಿಕ್ರಿಯಿಸಿ (+)