ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ₹ 1.39 ಕೋಟಿ ಸಾಲ ಮನ್ನಾ

ದೊಡ್ಡಸಣ್ಣೆ ವ್ಯವಸಾಯ ಸೇವಾ ಸಹಕಾರ ಸಂಘದ ಸಭೆ
Last Updated 15 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ದೇವನಹಳ್ಳಿ: ಸರ್ಕಾರದ ಈ ಹಿಂದಿನ ಆಡಳಿತದಲ್ಲಿ ಎರಡು ಹಂತದಲ್ಲಿ ರೈತರ ₹ 1.39 ಕೋಟಿ ಸಾಲ ಮನ್ನಾ (ಸಂಘದ ವ್ಯಾಪ್ತಿ) ಆಗಿದೆ ಎಂದು ದೊಡ್ಡಸಣ್ಣೆ ವಿಎಸ್‌ಎಸ್‌ಎನ್‌ ಅಧ್ಯಕ್ಷ ಎ.ಎಂ. ವೆಂಕಟೇಶಪ್ಪ ಹೇಳಿದರು.

ಇಲ್ಲಿನ ದೊಡ್ಡಸಣ್ಣೆ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ 2017–18 ನೇ ಸಾಲಿನ ಸರ್ವ ಸದಸ್ಯದ ಸಭೆ ಮತ್ತು ವಾರ್ಷಿಕ ಆಯವ್ಯಯದ ಮೇಲಿನ ಚರ್ಚೆಯಲ್ಲಿ ಮಾಹಿತಿ ನೀಡಿದರು.

ಸಂಘಕ್ಕೆ ಒಂದು ಸಾವಿರಕ್ಕೂ ಹೆಚ್ಚು ಇದ್ದ ಸದಸ್ಯರು ಪ್ರಸ್ತುತ 650 ಸದಸ್ಯರಿದ್ದಾರೆ. 160 ಪರಿಶಿಷ್ಟ ಜಾತಿ ಮತ್ತು ಪಂಗಡದ ಸದಸ್ಯರಿಗೆ ಸರ್ಕಾರ ಐದು ನೂರು ಷೇರು ಬಂಡವಾಳ ನೀಡಿ ಮೂರು ವರ್ಷ ಕಳೆದಿದೆ. ಉಳಿಕೆ ₹ 550 ನೀಡಿ ಬ್ಯಾಂಕಿನಲ್ಲಿ ಖಾತೆ ಮಾಡಿಸಿಕೊಂಡಿಲ್ಲ. ಬರಿ ಸಾಲ ಪಡೆಯುವ ಸದಸ್ಯರು ಮಾತ್ರ ಬ್ಯಾಂಕ್‌ ಖಾತೆ ಮಾಡಿಸುತ್ತಾರೆ ಎಂದು ಹೇಳಿದರು.

ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೂಮಿ ಸ್ವಾಧೀನಪಡಿಸಿಕೊಂಡ ನಂತರ ಈ ಭಾಗದ ರೈತರ ಶೇಕಡ 50 ರಷ್ಟು ಭೂಮಿ ಇಲ್ಲದೆ ರೈತರು ನಿರಾಸೆ ಅನುಭವಿಸುವಂತಾಗಿದೆ. ಉಳಿದ ರೈತರು ಭವಿಷ್ಯದ ಪೀಳಿಗೆಗೆ ಈಗಿರುವ ಭೂಮಿಯನ್ನು ಉಳಿಸಿಕೊಳ್ಳಬೇಕು ಜಮೀನು ಮಾರಾಟ ಮಾಡುವುದು ಸುಲಭ. ಬಂಡವಾಳ ಹಾಕಿ ಖರೀದಿಸುವುದು ಕಷ್ಟ ಎಂದರು.

ರೈತರು ಸಹಕಾರ ಸಂಘದಲ್ಲಿ ಹೆಚ್ಚಿನ ವಹಿವಾಟು ನಡೆಸಬೇಕು, ಸಹಕಾರ ಸಂಘ ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತದೆ. ಸಾಲ ವಿತರಣೆಯಲ್ಲಿ ರೈತರಿಗೆ ಆದ್ಯತೆ ನೀಡಲಾಗುತ್ತಿದೆ. ಸಹಕಾರ ಸಂಘದ ಪ್ರಗತಿಗೆ ರೈತರು ಸಹಕಾರಿಸಬೇಕು ಎಂದು ಹೇಳಿದರು.

ಸಹಕಾರ ಸಂಘದ ನಿರ್ದೇಶಕ ಸಿ. ಮುನಿರಾಜು ಮಾತನಾಡಿ, ‘ಕೆಲವು ಸಹಕಾರ ಸಂಘಗಳು ಬಾಗಿಲು ಮುಚ್ಚುವ ಹಂತಕ್ಕೆ ಬಂದು ನಿಂತಿವೆ. ಸದ್ಯ ಆ ಸ್ಥಿತಿ ಇಲ್ಲಿನ ಸಹಕಾರ ಸಂಘಕ್ಕೆ ಇಲ್ಲ. ನಷ್ಟ ಅನುಭವಿಸಿ ಚೇತರಿಸಿಕೊಂಡಿದೆ. ಕೇಂದ್ರ ಜಿಲ್ಲಾ ಸಹಕಾರ ಸಂಘದಿಂದ ಹೆಚ್ಚಿನ ಸಾಲದ ಬೇಡಿಕೆಯನ್ನಿಟ್ಟುಕೊಂಡು ತರಬೇಕು’ ಎಂದರು.

‘ಸ್ತ್ರೀ ಸಂಘಗಳಿಗೆ ಸ್ವ ಸಹಾಯ ಗುಂಪುಗಳಿಗೆ ನೀಡಿ ಸ್ವಾವಲಂಬಿ ಬದುಕಿಗೆ ಸಹಕರಿಸಬೇಕು ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಸಾಲ ನೀಡಿ ಪ್ರೋತ್ಸಾಹ ನೀಡಬೇಕು’ ಎಂದು ಹೇಳಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಲಿಂಗರಾಜು ಮಾಹಿತಿ ನೀಡಿ, ಎ ದರ್ಜೆ ಸದಸ್ಯರ ಷೇರು ₹ 1.72 ಲಕ್ಷ ಇದೆ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ₹ 59.98 ಲಕ್ಷ ಸಾಲ ಪಡೆದುಕೊಳ್ಳಲಾಗಿದೆ. ₹ 2.33 ಲಕ್ಷ ವ್ಯಾಪಾರ ಲಾಭ ಬಂದಿದೆ ಎಂದು ಹೇಳಿದರು.

ಸಹಕಾರ ಸಂಘದಲ್ಲಿ ಸದಸ್ಯತ್ವ ನೋಂದಾಯಿತ ಪ್ರತಿಯೊಬ್ಬ ಸದಸ್ಯರು ಬರಲಿರುವ ನೂತನ ಸಹಕಾರದ ಸಂಘದ ಆದೇಶದಂತೆ ಕನಿಷ್ಠ ₹ 20 ಸಾವಿರ ಸಂಘದಲ್ಲೇ ವಹಿವಾಟು ನಡೆಸಬೇಕು. ವಹಿವಾಟು ಕಡ್ಡಾಯದ ಆದೇಶ ಶೀಘ್ರ ಬರಲಿದೆ ಎಂದು ಹೇಳಿದರು.

ನಿರ್ದೇಶಕರಾದ ಎಂ. ಮುರಳೀಧರ್‌, ಸಿ. ಚಿನ್ನಯ್ಯ, ಎ.ಎನ್‌. ಜಗದೀಶ್‌, ಲಕ್ಷ್ಮಮ್ಮ, ಕ್ಯಾತಮ್ಮ, ಮುಖಂಡ ನಾರಾಯಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT