ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತರ ₹ 19 ಕೊಟಿ ಸಾಲ ಮನ್ನಾ’

Last Updated 5 ಸೆಪ್ಟೆಂಬರ್ 2019, 13:02 IST
ಅಕ್ಷರ ಗಾತ್ರ

ದೇವನಹಳ್ಳಿ: ತಾಲ್ಲೂಕಿನಲ್ಲಿರುವ ವ್ಯವಸಾಯ ಸೇವಾ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ರೈತರು ಪಡೆದಿರುವ ಸಾಲ 19 ಕೋಟಿ ಮನ್ನಾ ಆಗಿದೆಎಂದು ಜಿಲ್ಲಾ ಸಹಕಾರ ಸಂಘದ ನಿರ್ದೇಶಕ ಸೊಣ್ಣಪ್ಪ ಹೇಳಿದರು.

ಇಲ್ಲಿನ ಬಿದಲೂರು ವ್ಯವಸಾಯ ಸೇವಾ ಸಹಕಾರ ಸಂಘದ ಆವರಣದಲ್ಲಿ ನಡೆದ 2018–19ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯ ಸರ್ಕಾರದ ಈ ಹಿಂದಿನ ಸಮ್ಮಿಶ್ರ ಸರ್ಕಾರ ಆಡಳಿತಾವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಕೈಗೊಂಡ ದಿಟ್ಟ ಹೆಜ್ಜೆಯ ಫಲವಾಗಿ ರೈತರು ಸಂಕಷ್ಟದಿಂದ ಪಾರಾಗುವಂತಾಗಿದೆ’ ಎಂದು ಹೇಳಿದರು.

‘ರೈತರಿಗೆ ವೈಯಕ್ತಿಕವಾಗಿ ₹ 1 ಲಕ್ಷದವರೆಗೆ ಸಾಲ ನೀಡಬೇಕು. ಸ್ವಸಹಾಯ ಮತ್ತು ಸ್ತ್ರೀಶಕ್ತಿ ಗುಂಪುಗಳಿಗೆ ಶೂನ್ಯ ಬಡ್ಡಿಯಲ್ಲಿ ₹ 5 ಲಕ್ಷದವರೆಗೆ ಸಾಲ ನೀಡಬೇಕು. ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ’ ಎಂದು ಹೇಳಿದರು.

ಸಹಕಾರ ಸಂಘ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್ ಮಾತನಾಡಿ, ‘ರೈತ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಸಂಘ ತನ್ನ ವಹಿವಾಟಿನ ಲೆಕ್ಕ ಪತ್ರಗಳನ್ನು ಪಾರದರ್ಶಕವಾಗಿ ಇಡಲು ಸಂಪೂರ್ಣ ಗಣಕೀಕೃತ ವ್ಯವಸ್ಥೆ ಮಾಡಲಾಗಿದೆ. ಕೋರ್ ಬ್ಯಾಂಕಿಂಗ್ ಸಾಫ್ಟ್‌ವೇರ್ ಅಳವಡಿಸಲಾಗಿದ್ದು ವ್ಯವಹಾರದ ಮಾಹಿತಿಯನ್ನು ಎಸ್ಎಂಎಸ್ ಮೂಲಕ ರವಾನಿಸಲಾಗುತ್ತಿದೆ. ಸಂಘ ಸುಸ್ತಿ ಸಾಲಗಳನ್ನು 2019 ಜ.31ಕ್ಕೆ ಅನುತ್ಪಾದಕ ಆಸ್ತಿ ಪ್ರಮಾಣವನ್ನು ಶೇ 2.99 ಇಳಿಸುವಲ್ಲಿ ಯಶಸ್ವಿಯಾಗಿರುವುದು ಸಂಘದ ಹೆಗ್ಗಳಿಕೆ’ ಎಂದು ಹೇಳಿದರು.

‘ಪ್ರಸ್ತುತ ಸಂಘದಿಂದ 280 ರೈತರು ಪಡೆದಿರುವ ₹ 1.41 ಕೋಟಿ ಸಾಲದ ಪೈಕಿ ₹ 1.34 ಕೋಟಿ ಮನ್ನಾ ವ್ಯಾಪ್ತಿಯಲ್ಲಿದೆ. 256 ರೈತರಿಗೆ ಋಣ ಮುಕ್ತ ಪ್ರಮಾಣ ಪತ್ರ ನೀಡಲಾಗಿದೆ. ₹ 79.51 ಕೋಟಿ ವಾರ್ಷಿಕ ವಹಿವಾಟಿನಿಂದ ₹ 19.43 ಲಕ್ಷ ನಿವ್ವಳ ಲಾಭಗಳಿಸಿದೆ’ ಎಂದರು.

ಎಪಿಎಂಸಿ ಅಧ್ಯಕ್ಷ ಕೆ.ವಿ.ಮಂಜುನಾಥ್ ಮಾತನಾಡಿ, ‘ಸಂಘ ಆರಂಭವಾದ ನಂತರ ಪ್ರಗತಿಯತ್ತ ಹೆಜ್ಜೆ ಇಡಲು ಆನೇಕ ನಿರ್ದೇಶಕರ ಮತ್ತು ಈ ಹಿಂದೆ ಕಾರ್ಯನಿರ್ವಹಿಸಿದ ಅಧ್ಯಕ್ಷರ ಪರಿಶ್ರಮ ಕಡೆಗಣಿಸುವಂತಿಲ್ಲ. ರೈತರ ಜೀನವಾಡಿಯಾಗಿರುವ ಸಹಕಾರ ಸಂಘಗಳು ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳನ್ನು ನೀಡಬೇಕು, ಕುರಿ, ಕೋಳಿ, ಪಶು, ತೋಟಗಾರಿಕೆಗೆ ಒತ್ತು ನೀಡಿದರೆ ಮಾತ್ರ ರೈತರು ಆರ್ಥಿಕವಾಗಿ ಸುಧಾರಣೆ ಕಾಣಲು ಸಾಧ್ಯ’ ಎಂದರು.

ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕಿ ಯಶಸ್ವಿನಿ ಮಾತನಾಡಿ, ‘ಇಲ್ಲಿನ ಸಹಕಾರ ಸಂಘ ವಹಿವಾಟು ಮತ್ತು ಪ್ರಗತಿಯಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಮತ್ತು ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುವುದು ಇತರ ಸಂಘಗಳಿಗೆ ಮಾದರಿಯಾಗಿದೆ’ ಎಂದು ಹೇಳಿದರು.

ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಆರ್.ರಾಮಾಂಜಿನಪ್ಪ, ಉಪಾಧ್ಯಕ್ಷೆ ನೇತ್ರಾವತಿ, ಜಿಲ್ಲಾ ಸಹಕಾರ ಸಂಘ ದೇವನಹಳ್ಳಿ ಶಾಖೆ ವ್ಯವಸ್ಥಾಪಕ ರಮೇಶ್, ನಿರ್ದೇಶಕರಾದ ಎಂ.ನಾಗರಾಜ್, ಬಿ.ಆರ್.ಆನಂದ್, ಚಿಕ್ಕನಾರಾಯಣಸ್ವಾಮಿ, ಎನ್.ರವಿ, ಮಹೇಶ್, ವನಜಾಕ್ಷಿ, ಆರ್.ತಿಮ್ಮಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT