ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಹಿಂಗಾರು ಹಂಗಾಮಿನತ್ತ ರೈತರ ಚಿತ್ತ

ಪೂರ್ಣಗೊಳ್ಳದ ಮುಂಗಾರು ಬಿತ್ತನೆ, ಪ್ರಮುಖ ಘಟ್ಟದಲ್ಲಿ ಕೈಕೊಟ್ಟ ವರುಣದೇವ
Last Updated 1 ಸೆಪ್ಟೆಂಬರ್ 2018, 14:24 IST
ಅಕ್ಷರ ಗಾತ್ರ

ದೇವನಹಳ್ಳಿ: ಮುಂಗಾರು ಹಂಗಾಮಿನ ಆರಂಭದಲ್ಲಿ ಉತ್ತಮ ಮಳೆ ಮುನ್ಸೂಚನೆ ನೀಡಿದ್ದ ವರುಣ ಬಿತ್ತನೆಯ ಪ್ರಮುಖ ಘಟ್ಟದಲ್ಲಿ ಕೈಕೊಟ್ಟ ಪರಿಣಾಮ ಬಿತ್ತನೆ ಕಾರ್ಯ ಪೂರ್ಣಗೊಳ್ಳದೆ ಹಿಂಗಾರು ಹಂಗಾಮಿನತ್ತ ರೈತರ ಚಿತ್ತ ನೆಟ್ಟಿದೆ.

ಮುಂಗಾರು ಬಿತ್ತನೆ ಪೂರ್ವಭಾವಿಯಾಗಿ ಕೃಷಿಭೂಮಿ ಹಸನು ಮಾಡಲು ಪೂರಕವಾಗಿ ಸುರಿದ ಮಳೆ, ಆಗಸ್ಟ್‌ ತಿಂಗಳ ಆರಂಭದಲ್ಲಿ ಒಂದೆರಡು ಬಾರಿ ಹದ ಮಳೆ ಸುರಿದಿದ್ದು ಹೊರತುಪಡಿಸಿದರೆ ಬರಿ ತುಂತುರು ಮಳೆಯಷ್ಟೇ ಸುರಿದಿದ್ದು, ರೈತರು ಧೈರ್ಯ ಮಾಡಿ ಬಿತ್ತನೆ ಮಾಡಿದ್ದಾರೆ.

ಒಂದು ಕಡೆ ಮೊಳಕೆ ಹೊರ ಬಂದು ಪೈರು ಒಣಗುತ್ತಿದ್ದರೆ, ಮತ್ತೊಂದೆಡೆ ಬೀಜ ಮೊಳಕೆಯಾಗಿ ಹೊರಬರದೆ ನೆಲದಲ್ಲೇ ಕಚ್ಚಿಕೊಂಡಿವೆ ಎಂಬುದು ರೈತರ ಆತಂಕ.

ಬಯಲು ಸೀಮೆ ಪ್ರದೇಶದ ಪ್ರಮುಖ ಚೈತನ್ಯದಾಯಕ ಆಹಾರ ಬೆಳೆ ಎಂದೆ ಕರೆಯಲ್ಪಡುವ ರಾಗಿ ಗ್ರಾಮಾಂತರ ಜಿಲ್ಲೆಯಲ್ಲಿ ಈ ಬಾರಿ 2018 ಆ.31ರವರೆಗೆ 45,101 ಹೆಕ್ಟರ್‌ನಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 50,368 ಹೆಕ್ಟರ್‌ನಲ್ಲಿ ಬಿತ್ತನೆಯಾಗಿತ್ತು. ಶೇಕಡ 95ರಷ್ಟು ರಾಗಿ ಬೆಳೆಯನ್ನೇ ಅವಲಂಬಿಸಿರುವ ಜಿಲ್ಲೆಯ ಕೃಷಿಕರಲ್ಲಿ ದಿನನಿತ್ಯ ಬೆಳಿಗ್ಗೆ ಮೋಡ ಸಂಜೆ ಮೊಡ ಕವಿದ ವಾತಾವರಣ ಹೊರತುಪಡಿಸಿದರೆ ವರುಣನ ಕೃಪೆ ಧರೆಗೆ ಇಳಿಯುತ್ತಿಲ್ಲ. ಎಲ್ಲಾ ದಿಕ್ಕುಗಳ ಕಡೆ ಮಳೆಗಾಗಿ ರೈತರು ನೋಡುವಂತಾಗಿದೆ ಎಂದು ಕೆ.ಹೊಸೂರು ಗ್ರಾಮದ ರೈತ ಮುನಿ ಆಂಜಿನಪ್ಪ ತಿಳಿಸಿದರು.

ಜಂಟಿ ಕೃಷಿ ಇಲಾಖೆ ಮಾಹಿತಿಯಂತೆ ಜಿಲ್ಲೆಯ ನಾಲ್ಕು ತಾಲ್ಲೂಕು ವ್ಯಾಪ್ತಿಯಲ್ಲಿ ಹೊಸಕೋಟೆ ಶೇ68ರಷ್ಟು ಬಿತ್ತನೆಯಾಗಿದೆ. ದೇವನಹಳ್ಳಿ ಶೇ73, ನೆಲಮಂಗಲ ಶೇ86ರಷ್ಟು, ದೊಡ್ಡಬಳ್ಳಾಪುರ ತಾಲ್ಲೂಕು ಶೇ92 ರಷ್ಟು ಮಾತ್ರ ಬಿತ್ತನೆಯಾಗಿದೆ. ಮಳೆ ಕೊರತೆಯಿಂದಾಗಿ ಕೃಷಿ ಇಲಾಖೆ ಗುರಿ ಮತ್ತು ಸಾಧನೆ ನಿರೀಕ್ಷೆ ಸಾಕಾರಗೊಳ್ಳುವುದೇ ಅನುಮಾನ ಎಂದು ಕೃಷಿ ಅಧಿಕಾರಿಗಳು ಕೂಡ ಆತಂಕ ಪಡುವಂತಾಗಿದೆ.

2013ರಿಂದ 2016ರವರೆಗೆ ಸತತ ನಾಲ್ಕು ವರ್ಷಗಳ ಕಾಲ ಬರಗಾಲದಿಂದ ತತ್ತರಿಸಿದ ಜಿಲ್ಲೆಯಲ್ಲಿ 2017ರಲ್ಲಿ ಸಕಾಲದಲ್ಲಿ ಮುಂಗಾರು ಆರಂಭವಾಗಿ ಬಿತ್ತನೆ ಸಾಧಾರಣ ಮಳೆಯಲ್ಲೇ ನಡೆದಿತ್ತು. ಹಿಂಗಾರಿನಲ್ಲಿ ಸುರಿದ ಚಂಡಮಾರುತ ಪರಿಣಾಮ ಉತ್ತಮ ಫಲಸು ಕಾಣುವಂತಾಗಿತ್ತು. ಆದರೆ, ಈ ಬಾರಿ ಅದೇ ರೀತಿ ಎನ್ನುವ ಆಗಿಲ್ಲ. ಎನ್ನುತ್ತಾರೆ ಕುಂದಾಣ ಗ್ರಾಮದ ರೈತ ಕೃಷ್ಣಪ್ಪ.

ಕೃಷಿ ಇಲಾಖೆ ಮಾಹಿತಿ ಆಧಾರದ ಮೇಲೆ ಲೆಕ್ಕಹಾಕಿದರೆ ಪ್ರಯೋಜನವಿಲ್ಲ. ರಸಗೊಬ್ಬರ ಮತ್ತು ಬೀಜ ವಿತರಣೆ ಹಾಗೂ ಬಿತ್ತನೆ ಪೂರ್ಣಗೊಂಡಿರುವ ಮಾಹಿತಿಯನ್ನಷ್ಟೇ ಕೃಷಿ ಇಲಾಖೆ ನೀಡುತ್ತದೆಯೇ ಹೊರತು ಬಿತ್ತನೆ ಮಾಡಿದ ಬೆಳೆ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡುವುದಿಲ್ಲ.

ಬಿತ್ತನೆ ಆಗದೆ ಉಳಿದಿರುವ ಭೂಮಿ ಮತ್ತು ಒಣಗುತ್ತಿರುವ ಬೆಳೆಗಳ ವಿಸ್ತೀರ್ಣ ಎಷ್ಟು ಎಂಬುದರ ಮಾಹಿತಿ ಪಡೆದು ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಸರ್ಕಾರ ಜಿಲ್ಲಾಧಿಕಾರಿ ಸಭೆ ಕರೆದು ತುರ್ತು ಆದೇಶ ಮಾಡಬೇಕು. ಬೆಂಕಿ ಬಿದ್ದ ಮೇಲೆ ಮನೆಗಳ ಕಡ್ಡಿ ಎಳೆಯುವ ಕೆಲಸ ಸರ್ಕಾರ ಮಾಡಬಾರದು. ಮೊದಲೇ ಎಚ್ಚೆತ್ತುಕೊಳ್ಳಬೇಕು ಎಂದು ಪ್ರಾಂತ ರೈತ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಎನ್‌.ವೀರಣ್ಣ ಅವರ ಒತ್ತಾಯ.

ತಾಲ್ಲೂಕಿನಲ್ಲಿ ಈಗಾಗಲೇ ಬರ ಆವರಿಸಿದೆ. ಕೃಷಿ ಅಧಿಕಾರಿಗಳಿಂದ ಸೂಕ್ತ ಮಾಹಿತಿ ಪಡೆದು ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು ಎಂದು ಕೊಯಿರಾ ಗ್ರಾಮದ ರೈತ ಆಶ್ವಥ್‌ ಅವರ ಆಗ್ರಹವಾಗಿದೆ.

ರೈತರು ಬಿತ್ತಿದ ಬೆಳೆ ಒಣಗುತ್ತಿದೆ. ಅನೇಕ ಕಡೆ ಬಿತ್ತನೆಯಾಗಿಲ್ಲ. ಸರ್ಕಾರ ಪ್ರತಿ ಎಕರೆಗೆ ಕನಿಷ್ಠ ₹ 15 ಸಾವಿರ ಪರಿಹಾರ ನೀಡಲು ತ್ವರಿತವಾಗಿ ಮುಖ್ಯಮಂತ್ರಿ ಸ್ಪಂದಿಸಬೇಕು ಎಂದು ಕೆ.ಹೊಸೂರು ಗ್ರಾಮದ ರೈತ ಮುನಿ ಆಂಜಿನಪ್ಪ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT