ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಗಣಿ ಮಾಲೀಕರಿಗೆ ರೈತರ ದಿಗ್ಬಂಧನ

ರೈತರು, ಗಣಿ ಕಾರ್ಮಿಕರ ನಡುವೆ ಜಟಾಪಟಿ
Last Updated 1 ಸೆಪ್ಟೆಂಬರ್ 2021, 17:45 IST
ಅಕ್ಷರ ಗಾತ್ರ

ದೇವನಹಳ್ಳಿ:ತಾಲ್ಲೂಕಿನ ತೈಲಗೆರೆ ಗ್ರಾಮದ ಸರ್ವೆ ನಂ. 110ರಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸವಾಗಿರುವ ಜನರ ನೆಮ್ಮದಿಗೆ ಭಂಗವಾಗುತ್ತಿದೆ. ಮನೆಗಳು ಬಿರುಕು ಬಿಟ್ಟಿದ್ದು, ರಸ್ತೆಗಳು ಹಾಳಾಗಿವೆ. ಬೆಳೆ ನಾಶವಾಗಿದೆ ಎಂದು ಆರೋಪಿಸಿ ರೈತರು ಬುಧವಾರ ಪ್ರತಿಭಟನೆ ನಡೆಸಿದರು.

ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಮುಂದೆ ರೈತರು ಹಾಗೂ ಗ್ರಾಮಸ್ಥರು ಸಮಸ್ಯೆ ತೋಡಿಕೊಂಡರು. ಈ ನಡುವೆ ರೈತರು ಮತ್ತು ಗಣಿ ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆಯಿತು. ಆಕ್ರೋಶಗೊಂಡ ರೈತರು ಗಣಿ ಮಾಲೀಕರಿಗೆ ಸ್ಥಳದಲ್ಲಿಯೇ ದಿಗ್ಬಂಧನ ವಿಧಿಸಿದರು. ಕೊನೆಗೆ, ಪೊಲೀಸರು ರೈತರನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಇತ್ತೀಚೆಗೆ ನಂದಿಬೆಟ್ಟದಲ್ಲಿ ಭೂ ಕುಸಿತವಾಗಿದೆ. ತೈಲಗೆರೆಗೂ ಅದು ಪರಿಣಾಮ ಬೀರುತ್ತಿದೆ. ಕಲ್ಲು ಗಣಿಗಾರಿಕೆ ನಡೆಸುವುದರಿಂದ ಬೆಳೆಗಳಿಗೆ ಹಾನಿಯಾಗುತ್ತಿದೆ ಎಂದು ರೈತರು ದೂರಿದರು.

ಬಂಡೆಗಳನ್ನು ಸಿಡಿಸಲು ಸ್ಫೋಟಕ ಬಳಕೆ ಮಾಡುತ್ತಿದ್ದಾರೆ. ಇದರಿಂದ ಕ್ವಾರಿಗಳ ಸಮೀಪದಲ್ಲಿರುವ ಮನೆಗಳು ಬಿರುಕು ಬಿಟ್ಟಿವೆ. ಕಲ್ಲು ಗಣಿಗಾರಿಕೆಗೆ ಅನುಮತಿ ಕೊಡಬಾರದು. ಕಲ್ಲು ಸಾಗಾಣಿಕೆ ಮಾಡುತ್ತಿರುವ ವಾಹನಗಳ ಸಂಚಾರದಿಂದ ಇಲ್ಲಿನ ಬಹುತೇಕ ರಸ್ತೆಗಳು ಹಾಳಾಗಿವೆ ಎಂದು ರೈತರು ಹೇಳಿದರು.

ದೇವನಹಳ್ಳಿ: ಗಣಿ ಮಾಲೀಕರಿಗೆ ರೈತರ ದಿಗ್ಬಂಧನ

ಆ ವೇಳೆ ರೈತರು ಮತ್ತು ಗಣಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ನಡುವೆ ಜಟಾಪಟಿ ನಡೆಯಿತು. ‘ಪ್ರತಿವರ್ಷ ಬೆಳೆಗಳು ಹಾಳಾಗಿವೆ ಎಂದು ರೈತರು ಪರಿಹಾರ ಪಡೆಯುತ್ತಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಹಣ ಕೊಡುತ್ತಾರೆ. ದೇವಾಲಯಗಳ ಅಭಿವೃದ್ಧಿಗಾಗಿ ಸಹಕಾರ ನೀಡುತ್ತಾರೆ. ಈಗ ಬಂದು ನಮಗೆ ಏನೂ ನೀಡಿಲ್ಲ ಎಂದು ರೈತರು ಸುಳ್ಳು ಹೇಳುತ್ತಿದ್ದಾರೆ’ ಎಂದು ಗಣಿ ಕಾರ್ಮಿಕರು ವಾದಿಸಿದರು.

ಗಣಿಗಾರಿಕೆ ನಿಲ್ಲಿಸಿ ನಮ್ಮ ಹೊಟ್ಟೆಯ ಮೇಲೆ ಯಾಕೆ ಹೊಡೆಯುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಅಧಿಕಾರಿಗಳ ಎದುರಿನಲ್ಲೇ ರೈತರು ಹಾಗೂ ಗಣಿ ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿಯು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಡಾ.ಲಕ್ಷ್ಮಮ್ಮ ಮಾತನಾಡಿ, ‘ನಾವು ನೆಪಮಾತ್ರಕ್ಕೆ ಬಂದಿಲ್ಲ. ಗಣಿ ಇಲಾಖೆ ಸಚಿವರು ಹಾಗೂ ಕಾರ್ಯದರ್ಶಿ ಅವರ ಆದೇಶದ ಮೇರೆಗೆ ಭೇಟಿ ನೀಡಿದ್ದೇವೆ. ಇಲ್ಲಿನ ಸಾಧಕ, ಬಾಧಕ ಕುರಿತು ವರದಿ ಸಲ್ಲಿಸಬೇಕಾಗಿದೆ’ ಎಂದು ತಿಳಿಸಿದರು.

‘14 ಮಂದಿಗೆ ಗುತ್ತಿಗೆ ಕೊಟ್ಟಿದ್ದಾರೆ. ಗುತ್ತಿಗೆ ಪಡೆದಿರುವವರು ನಿಯಮದ ಪ್ರಕಾರ ಗಣಿಗಾರಿಕೆ ಮಾಡುತ್ತಿದ್ದಾರೆ. ಇಲ್ಲಿನ ಸಾಧಕ, ಬಾಧಕದ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಜಿಲ್ಲಾ ಟಾಸ್ಕ್‌ಪೋರ್ಸ್ ಕಮಿಟಿಯಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.

ದೇವನಹಳ್ಳಿ: ಗಣಿ ಮಾಲೀಕರಿಗೆ ರೈತರ ದಿಗ್ಬಂಧನ

ತೈಲಗೆರೆ ಸರ್ವೆ ನಂ. 110ರ 55 ಎಕರೆ ಪ್ರದೇಶವನ್ನು ಗುತ್ತಿಗೆ ನೀಡಿದ್ದಾರೆ. ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ. ಅದರಲ್ಲಿ ಉಲ್ಲಂಘನೆಗಳಾಗಿದ್ದರೆ ಕ್ರಮ ಕೈಗೊಳ್ಳುತ್ತೇವೆ. ಇಲ್ಲಿ ಎಷ್ಟು ಮಂದಿಗೆ ಉದ್ಯೋಗ ನೀಡಿದ್ದಾರೆ ಎನ್ನುವ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ವಿವರಿಸಿದರು.

ಡಿಜಿಎಂಎಸ್ (ಡೆಪ್ಯುಟಿ ಜನರಲ್ ಮೈನ್ಸ್ ಸೆಫ್ಟಿ)ಯಿಂದ ಅನುಮತಿ ಪಡೆದಿದ್ದಾರೆ. ಅಧಿಕೃತವಾಗಿ 11 ಮಂದಿಗೆ ಅನುಮತಿಯಿದೆ. ಉಳಿದ ಮೂವರು ಅರ್ಜಿ ಹಾಕಿಕೊಂಡಿದ್ದಾರೆ. ಎಷ್ಟು ಮಂದಿ ರೈತರಿದ್ದಾರೆ, ಎಷ್ಟು ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ ಎನ್ನುವ ಕುರಿತು ಕೃಷಿ ಇಲಾಖೆ ಅಧಿಕಾರಿಗಳಿಂದ ತಾಂತ್ರಿಕ ವರದಿ ಪಡೆದುಕೊಂಡು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ತೈಲಗೆರೆ ಸರ್ವೆ ನಂ. 110 ರಲ್ಲಿ 55 ಎಕರೆ 16 ಗುಂಟೆ, ಮುದ್ದನಾಯಕನಹಳ್ಳಿ ಸರ್ವೆ ನಂ. 112 ರಲ್ಲಿ 2 ಎಕರೆಗೆ ಅಧಿಕೃತವಾಗಿ ಗುತ್ತಿಗೆಗೆ ಕೊಟ್ಟಿದ್ದೇವೆ. ಇದರಿಂದ ಕಳೆದ ವರ್ಷ ಸರ್ಕಾರಕ್ಕೆ ₹ 11.50 ಕೋಟಿ ರಾಯಧನ ಬಂದಿದೆ. ಈ ವರ್ಷ ₹ 2.70 ಕೋಟಿ ರಾಯಧನ ಬಂದಿದೆ. ಡಿಸ್ಟಿಕ್ ಮಿನರಲ್ ಫೌಂಡೇಷನ್ ಟ್ರಸ್ಟ್‌ಗೆ ಗಣಿ ಮಾಲೀಕರು ಪ್ರತಿ ಟನ್‌ಗೆ ಇಂತಿಷ್ಟು ಎಂದು ಹಣ ಕಟ್ಟುತ್ತಿದ್ದಾರೆ ಎಂದು ವಿವರಿಸಿದರು.

ಕಳೆದ ₹ 16.5 ಲಕ್ಷ ಸಂದಾಯವಾಗಿದೆ. ಈ ಹಣವನ್ನು ಗಣಿಬಾಧಿತ ಪ್ರದೇಶದ ಸುತ್ತಮುತ್ತಲಿನ ಪ್ರದೇಶದಲ್ಲಿನ ಅಭಿವೃದ್ಧಿಗೆ ಬಳಕೆ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆಯಡಿ ರಾಜ್ಯ ಸರ್ಕಾರ, ಗಣಿಬಾಧಿತ ಪ್ರದೇಶದಲ್ಲಿ ಸುತ್ತಮುತ್ತಲಿನ ಜನರಿಗೆ ಅನುಕೂಲ ಮಾಡಲಾಗುತ್ತಿದೆ. ಹಾಳಾಗಿರುವ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆಯಿಂದ ಮಾಹಿತಿ ಪಡೆದು ಈ ಅನುದಾನದಲ್ಲಿ ರಸ್ತೆಗಳ ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತೇವೆ ಎಂದರು.

ರಾಜ್ಯ ಕಲ್ಲು ಗಣಿಗಾರಿಕೆ ಮತ್ತು ಕಲ್ಲಿನ ಕ್ರಷರ್‌ಗಳ ಮಾಲೀಕರ ಅಸೋಸಿಯೇಷನ್ ಕಾರ್ಯದರ್ಶಿ ಕಿರಣ್ ಜೈ ಮಾತನಾಡಿ, ‘ನಾವು ನಿಯಮಗಳನ್ನು ಮೀರಿ ಗಣಿಗಾರಿಕೆ ಮಾಡುತ್ತಿಲ್ಲ. ಪ್ರತಿ ಟನ್‌ಗೂ ಹಣ ಕೊಡುತ್ತೇವೆ. ನಿಗದಿತ ಪ್ರಮಾಣದಲ್ಲಿ ನುರಿತ ಕೆಲಸಗಾರರಿಂದ ಸ್ಫೋಟಕ ಬಳಕೆ ಮಾಡುತ್ತಿದ್ದೇವೆ’ ಎಂದರು.

‘ಇಲ್ಲಿಂದ ನಂದಿಬೆಟ್ಟ 20 ಕಿ.ಮೀ ದೂರ ಇದೆ. 500 ಮೀಟರ್ ಹೊರಗೆ ಕಲ್ಲುಗಳು ಸಿಡಿಯಲು ಸಾಧ್ಯವೇ ಇಲ್ಲ. ಸ್ಫೋಟಕಗಳು ಕಡಿಮೆ ಪ್ರಮಾಣದ ತೀವ್ರತೆ ಹೊಂದಿವೆ. ಸರ್ಕಾರದ ನಿರ್ದೇಶನದಂತೆ ನಾವು ಕಲ್ಲು ತೆಗೆಯುತ್ತಿದ್ದೇವೆ’ ಎಂದು ಹೇಳಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲಾ ಉಪ ನಿರ್ದೇಶಕಿ ರೇಣುಕಾ, ಭೂ ವಿಜ್ಞಾನಿ ವಿಕ್ರಂ, ಮೂರ್ತಿ, ಎಇಇ ರಾಜಶೇಖರ್‌ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT