ಚನ್ನರಾಯಪಟ್ಟಣ (ದೇವನಹಳ್ಳಿ): ಹೋಬಳಿಯ 13 ಹಳ್ಳಿಗಳ 1,777 ಎಕರೆ ಕೃಷಿ ಭೂಮಿಯ ಸ್ವಾಧೀನ ವಿರೋಧಿಸಿ ಕಳೆದ ವರ್ಷದ ಏಪ್ರಿಲ್ ನಾಲ್ಕರಂದು ಪ್ರಾರಂಭವಾದ ರೈತರ ಹೋರಾಟವು ಇದೇ ಸೋಮವಾರ 300ನೇ ದಿನಕ್ಕೆ ಕಾಲಿಟ್ಟಿದೆ.
ಈ ಕುರಿತು ಮಾತನಾಡಿದ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮುಖ್ಯಸ್ಥ ಅಶ್ವತಪ್ಪ, ‘ಕಳೆದ ವರ್ಷದ ಜನವರಿ 28ರಂದು ನಾಡಕಚೇರಿ ಎದುರು ಸಾಂಕೇತಿಕವಾಗಿ ಒಂದು ದಿನ ಪ್ರತಿಭಟನೆ ಕೈಗೊಳ್ಳಲಾಗಿತ್ತು. ಈ ವೇಳೆ ಕೆಐಎಡಿಬಿ ಅವರು ನೀಡಿದ ನೋಟಿಸ್‌ಗಳನ್ನು ಸಾರ್ವಜನಿಕವಾಗಿ ಸುಡಲಾಗಿತ್ತು. ಅಲ್ಲಿಂದ ಹೋರಾಟ ಆರಂಭಿಸಿ, ಸರ್ಕಾರದ ಗಮನ ಸೆಳೆಯಲು ಯತ್ನಿಸಲಾಯಿತು. ಆದರೆ, ಸರ್ಕಾರವು ನಮ್ಮ ಹೋರಾಟವನ್ನು ನಿರ್ಲಕ್ಷ್ಯ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಳೆದ ವರ್ಷದ ಏಪ್ರಿಲ್ ನಾಲ್ಕರಂದು ದರಣಿಯನ್ನು ಆರಂಭಿಸಲಾಗಿತ್ತು. ಅದು ಸೋಮವಾರ 300ನೇ ದಿನಕ್ಕೆ ಕಾಲಿಟ್ಟಿದೆ. ಇದು ಸರ್ಕಾರದ ಸಾಧನೆಯಲ್ಲಿ ಸರ್ಕಾರದ ನಿರ್ಲಕ್ಷ್ಯತೆಗೆ ಹಿಡಿದ ಕನ್ನಡಿ ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು’ ಎಂದರು.
ಮುಖಂಡ ನಲ್ಲಪ್ಪನಹಳ್ಳಿ ನಂಜಪ್ಪ ಮಾತನಾಡಿ, ‘ನಾವು ಬಹಳ ಶ್ರಮಪಟ್ಟ ದುಡಿಯುವ ಜನರಾಗಿದ್ದು, ನಮ್ಮ ಬದುಕು ಭೂಮಿಯನ್ನೇ ಆಶ್ರಯಿಸಿದೆ. ಭೂಮಿ ಇಲ್ಲದೆ ನಾವು ಬದುಕುವುದು ಸಾಧ್ಯವೇ ಇಲ್ಲ. ನಮ್ಮ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಭೂಮಿ ಅನಿವಾರ್ಯ’ ಎಂದರು.
ನಮ್ಮ ಹೋರಾಟವನ್ನು ಸರ್ಕಾರ ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ರೂಪಿಸುವ ಆಲೋಚನೆ ಇದೆ ಎಂದು ರೈತ ವೆಂಕಟರಮಣಪ್ಪ ಅಭಿಪ್ರಾಯಪಟ್ಟರು.
ಹೊಸಳ್ಳಿ ನಾರಾಯಣಸ್ವಾಮಿ ಮಾತನಾಡಿ, ‘ನಮ್ಮ ಭೂಮಿಯ ಉಳಿವಿಗಾಗಿ ನಾವು ಯಾವುದೇ ತ್ಯಾಗಕ್ಕೂ ಸಿದ್ಧರಾಗಿದ್ದೇವೆ. ರೈತರ ಜೊತೆ ಸಂಘರ್ಷ ಮಾಡುವುದನ್ನು ಬಿಟ್ಟು ಭೂಮಿಯನ್ನು ಬಿಡುಗಡೆ ಮಾಡಬೇಕು. ಇಲ್ಲವಾದರೆ ಮುಂದಿನ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆಯಾಗಲಿದೆ’ ಎಂದು ಎಚ್ಚರಿಕೆ ನೀಡಿದರು. ರೈತ ಹೋರಾಟಗಾರ ಸಿ.ಬಿ. ಮೋಹನ್, ನಂದನ್, ಮುನಿರಾಜು, ಮರಿಯಪ್ಪ, ಗಂಗಪ್ಪ ಮುನಿಕೃಷ್ಣಪ್ಪ, ನಂಜೇಗೌಡ ಕರಿಗಪ್ಪ ಶ್ರೀನಿವಾಸ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.