ಪರಿಹಾರಕ್ಕೆ ಒತ್ತಾಯಿಸಿ ಟವರ್‌ ಹತ್ತಿ ಪ್ರತಿಭಟನೆ

7
ಪವರ್‌ಗ್ರಿಡ್ ಲೈನ್ ಹಾದುಹೋಗುವ ಜಾಗ ನೀಡುವ ವಿಚಾರದಲ್ಲಿ ಸಮಸ್ಯೆ

ಪರಿಹಾರಕ್ಕೆ ಒತ್ತಾಯಿಸಿ ಟವರ್‌ ಹತ್ತಿ ಪ್ರತಿಭಟನೆ

Published:
Updated:
Deccan Herald

ಆನೇಕಲ್: ಪವರ್‌ಗ್ರಿಡ್ ಲೈನ್ ಹಾದುಹೋಗುವ ಜಾಗಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ರೈತರು ಪವರ್‌ಗ್ರಿಡ್ ಟವರ್ ಏರಿ ತಾಲ್ಲೂಕಿನ ಲಕ್ಷ್ಮೀಪುರದಲ್ಲಿ ಪ್ರತಿಭಟನೆ ನಡೆಸಿದರು. ‌ರೈತರು ಪ್ರತಿಭಟನೆ ಮಾಡುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ರೈತ ಸಂಘಗಳ ಮುಖಂಡರು ಟವರ್‌ ಬಳಿ ಜಮಾಯಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ರೈತ ಮುಖಂಡ ಮಂಟಪ ನಾಗೇಂದ್ರ ಮಾತನಾಡಿ, ರೈತರಿಗೆ ಪರಿಹಾರ ನೀಡದ ವಿನಾ ಪವರ್‌ಗ್ರಿಡ್ ಕಾಮಗಾರಿ ಕೆಲಸ ಮಾಡಲು ಬಿಡುವುದಿಲ್ಲ. ಈ ಹಿಂದೆ ಪ್ರತಿಭಟನೆ ನಡೆಸಿದಾಗ ಉಪವಿಭಾಗಾಧಿಕಾರಿ ಪ್ರತಿಭಟನಾಕಾರರನ್ನು ಭೇಟಿ ಮಾಡಿ ಪರಿಹಾರ ನೀಡಿದ ನಂತರ ಕೆಲಸ ಮಾಡುವಂತೆ ಸಂಬಂಧಿಸಿದ್ದವರಿಗೆ ಸೂಚಿಸಿದ್ದರು. ಆದರೆ ಪವರ್‌ಗ್ರಿಡ್ ಕಾಮಗಾರಿ ಪರಿಹಾರ ನೀಡದೇ ಮುಂದುವರೆಸಿರುವುದು ರೈತರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಟವರ್‌ ಮೇಲೆ ಏರಿ ಕುಳಿತಿದ್ದ ರೈತ ಮುಖಂಡ ಸೋಮಶೇಖರ್‌ ರೆಡ್ಡಿ ಮಾತನಾಡಿ, ಬೇರೆ ತಾಲ್ಲೂಕುಗಳಲ್ಲಿ ಹೆಚ್ಚಿನ ಪರಿಹಾರ ನೀಡಲಾಗಿದೆ. ಆನೇಕಲ್ ತಾಲ್ಲೂಕಿನ ಕಾಡುಜಕ್ಕನಹಳ್ಳಿ, ತಿಮ್ಮಸಂದ್ರಗಳಲ್ಲಿ ಹೆಚ್ಚಿನ ಪರಿಹಾರ ನೀಡಲಾಗಿದೆ. ಆದರೆ ಉಳಿದೆಡೆ ತಾರತಮ್ಯ ಮಾಡಲಾಗುತ್ತಿದೆ. ರಿಯಲ್ ಎಸ್ಟೇಟ್ ಜಮೀನುಗಳಿಗೆ ಹೆಚ್ಚಿನ ಪರಿಹಾರ ನೀಡಲಾಗಿದೆ. ಕೃಷಿ ಭೂಮಿಗಳಿಗೆ ಪರಿಹಾರ ನೀಡಲು ಮೀನಾ ಮೇಷ ಎಣಿಸಲಾಗುತ್ತಿದೆ. ಪವರ್‌ಗ್ರಿಡ್ ಅಧಿಕಾರಿಗಳು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸ್ಥಳಕ್ಕೆ ತಹಶೀಲ್ದಾರ್ ಲಕ್ಷ್ಮೀಸಾಗರ್ ಭೇಟಿ ನೀಡಿ ಉಪವಿಭಾಗಾಧಿಕಾರಿ ಆದೇಶವನ್ನು ಪಾಲಿಸುವಂತೆ ಪವರ್‌ಗ್ರಿಡ್ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು. ತಹಶೀಲ್ದಾರ್ ಅವರ ಭರವಸೆಯ ನಂತರ ಟವರ್‌ ಏರಿ ಕುಳಿತಿದ್ದವರು ಕೆಳಗಿಳಿದು ಬಂದರು. ಡಿವೈಎಸ್ಪಿ ಎಸ್.ಕೆ.ಉಮೇಶ್, ಸರ್ಕಲ್ ಇನ್ಸ್‌ಪೆಕ್ಟರ್ ಮಾಲತೇಶ್, ಸಬ್‌ ಇನ್ಸ್‌ಪೆಕ್ಟರ್ ಹೇಮಂತ್‌ಕುಮಾರ್ ಪ್ರತಿಭಟನೆ ಸ್ಥಳದಲ್ಲಿದ್ದು ಪ್ರತಿಭಟನಾಕಾರರ ಮನವೊಲಿಸಿದರು.

ಮರಸೂರು ಜಿಲ್ಲಾ ಪಂಚಾಯಿತಿ ಸದಸ್ಯ ಬಂಡಾಪುರ ರಾಮಚಂದ್ರ ಮುಖಂಡರಾದ ಆರ್.ಮಧು, ಜೆ.ನಾರಾಯಣಪ್ಪ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !