ದೇವನಹಳ್ಳಿ: ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರು ಕೃಷಿ ಭೂಮಿ ಉಳಿವಿಗಾಗಿ 586 ದಿನಗಳಿಂದ ಹೋರಾಟ ನಡೆಸುತ್ತಿದ್ದು, ಈ ಮಧ್ಯೆ ಕೆಲ ಕಿಡಿಗೇಡಿಗಳು ಗೋಕೆರೆ, ಬಚ್ಚೇನಹಳ್ಳಿ, ಹ್ಯಾಡಾಳ ಗ್ರಾಮದ ಭೂಮಿ ಕೊಡಲು ರೈತರು ಸಿದ್ಧರಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ರೈತ ಮುಖಂಡ ಮಾರೇಗೌಡ ತಿಳಿಸಿದರು.
ಚನ್ನರಾಯಪಟ್ಟಣ ನಾಡ ಕಚೇರಿಯ ಬಳಿಯ ಧರಣಿ ಸ್ಥಳದಲ್ಲಿ ಗುರುವಾರ ಮಾತನಾಡಿದ ಅವರು, ಅ.18ರಂದು ಕೈಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿದ್ದು, ಸ್ಪಷ್ಟ ನಿರ್ಧರಕ್ಕೆ ಬರಲು ಸಾಧ್ಯವಾಗದೇ ಇರುವ ಕಾರಣ ಮತ್ತೊಂದು ಸಭೆ ಸೇರಿ ಚರ್ಚಿಸೋಣ ಎಂದು ತಿಳಿಸಿದ್ದಾರೆ.
ಆದರೆ ಹೋರಾಟಗಾರರ ದಿಕ್ಕು ತಪ್ಪಿಸಲು, ಭೂ ದಲ್ಲಾಳಿಗಳೊಂದಿಗೆ, ಅಧಿಕಾರಿಗಳೊಂದಿಗೆ ಸೇರಿಕೊಂಡು ಸ್ಥಳೀಯರೇ ಗೋಖರೆ, ಬಚ್ಚೇನಹಳ್ಳಿ, ಹ್ಯಾಡಾಳ ಗ್ರಾಮದಲ್ಲಿ ರೈತರು ಭೂಮಿ ನೀಡಲು ಒಪ್ಪಿದ್ದಾರೆ ಎಂದು ಗೊಂದಲ ಸೃಷ್ಟಿಸುತ್ತಿದ್ದಾರೆ. ಇದರಿಂದ ಸರ್ಕಾರ, ಮಂತ್ರಿಗಳು ಸೇರಿದಂತೆ ರೈತರ ಒಗ್ಗಟ್ಟನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದರು.
‘ಗೋಕೆರೆ, ಬಚ್ಚೇನಹಳ್ಳಿ, ಹ್ಯಾಡಾಳ ಗ್ರಾಮದ ಯಾವುದೇ ಕಾರಣಕ್ಕೂ ಭೂಮಿ ಕೊಡಲು ನಾವು ಸಿದ್ಧರಿಲ್ಲ. ಸ್ವಾಧೀನಕ್ಕೆ ಒಳಗಾಗುತ್ತಿರುವ ಗ್ರಾಮಗಳ ವ್ಯವಸ್ಥೆಯನ್ನು ಸಚಿವರು ಒಮ್ಮೆ ಭೇಟಿ ನೀಡಿ ಪರಿಶೀಲಿಸಬೇಕು. ಕೃಷಿಗೆ ಯೋಗ್ಯವಲ್ಲದ ಭೂಮಿಯಲ್ಲಿ ಕೈಗಾರಿಕೆ ಸ್ಥಾಪಿಸಲಿ’ ಎಂದು ಹ್ಯಾಡಾಳ ರೈತ ಮಂಜುನಾಥ ಹೇಳಿದರು.
ಕೃಷಿ ನಂಬಿ ಜೀವನ ನಡೆಸುತ್ತಿರುವ ನೂರಾರು ಕುಟುಂಬಗಳಿವೆ. ಇಂತಹ ಭೂಮಿಯನ್ನು ಸರ್ಕಾರ ಕಿತ್ತುಕೊಳ್ಳಲು ಯತ್ನಿಸುತ್ತಿದೆ. ಇದರಿಂದ ಅನ್ನದಾತರು ನಿರ್ಗತಿಕರಾಗಿ ಬೀದಿ ಪಾಲಾಗುತ್ತಾರೆ. ಭೂಮಿ ಕಳೆದುಕೊಂಡಿರುವವ ಸ್ಥಿತಿ ಏನಾಗಿದೆ ಎಂಬುದನ್ನು ಕಣ್ಣಾರೆ ಕಂಡಿದ್ದೇವೆ ಎಂದರು.
ಗೋಕರೆ ಬಚ್ಚೇನಹಳ್ಳಿ ಗ್ರಾಮದ ಖಾತೆದಾರರಾದ ಸುಬ್ರಮಣಿ ಮಾತನಾಡಿ, ‘ಭೂಮಿ ಅವಲಂಬಿಸಿ ಜೀವನ ನಡೆಸುತಿದ್ದೇವೆ. ಈ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡರೆ ಮುಂದಿನ ಜೀವನ ಹೇಗೆ ಎಂದು ಕಂಗಲಾಗಿದ್ದೇವೆ. 584 ದಿನಗಳ ಹೋರಾಟ ಮಾಡಿದರೂ ಸಹ ಸರ್ಕಾರ ಅಥವಾ ಮಂತ್ರಿಗಳು ರೈತರ ಸಮಸ್ಯೆಗೆ ಕಿವಿಗೊಡದೆ ದಳ್ಳಾಳಿಗಳ ಮಾತನ್ನು ಕೇಳುತ್ತಿರುವುದು ಖಂಡನೀಯ ಎಂದು ಹೇಳಿದರು.
ಸಭೆಯಲ್ಲಿ ಗೋಕೆರೆ ಬಚ್ಚೇನಹಳ್ಳಿ ಮತ್ತು ಹ್ಯಾಡಾಳ ಗ್ರಾಮದ ಖಾತೆದಾರರಾದ ಆಂಜಿನಪ್ಪ, ಕೃಷ್ಣಪ್ಪ, ಹನುಮಂತಣ್ಣ, ಕರಗಪ್ಪ, ಸತ್ಯನಾರಾಯಣಸ್ವಾಮಿ, ಕೃಷ್ಣಮೂರ್ತಿ, ಶ್ರೀರಾಮಪ್ಪ, ಸುಭ್ರಮಣಿ, ಮೋಹನ್, ಚಿಕ್ಕಮುನಿಶಾಮಪ್ಪ, ಚಿಕ್ಕವೆಂಕಟರಾಯಪ್ಪ, ಸುಭ್ರಮಣಿ,ನಾರಾಯಣಪ್ಪ, ಲಗುಮಪ್ಪ, ಮಹೇಂದ್ರ, ಕುಮಾರ್, ನಾರಾಯಣಸ್ವಾಮಿ, ಬಾಬು, ಶಂಕರ್, ಮಂಜುನಾಥ್ ಸುರೇಶ್, ವೆಂಕಟಮ್ಮ, ನಾರಾಯಣಮ್ಮ ಇದ್ದರು.
ಭೂಮಿ ಬಿಡುವುದುಲ್ಲ ‘ನಮಗೆ ಗೋಖರೆ ಬಚ್ಚನೇಹಳ್ಳಿ ಭಾಗದಲ್ಲಿರುವ ಭೂಮಿ ನಂಬಿ ಜೀವನ ನಡೆಸುತ್ತಿದ್ದೇವೆ. ಆ ಅಲ್ಪಸ್ವಲ್ಪ ಭೂಮಿ ಕಿತ್ತುಕೊಂಡರೆ ನನ್ನ ಕುಟುಂಬದ ಗತಿಯೇನು. ಈ ಭೂಮಿಗೋಸ್ಕರ ಪ್ರಾಣವನ್ನಾದರೂ ನೀಡುತ್ತೇನೆ ವಿನಹ ಭೂಮಿ ಮಾತ್ರ ಬಿಡಲು ಸಾದ್ಯವೇ ಇಲ್ಲ’ ಗೋಕೆರೆ ಬಚ್ಚೇನಹಳ್ಳಿಯಲ್ಲಿರುವ ಕೃಷಿ ಭೂಮಿಯ ಖಾತೆದಾರ ಗಂಗಪ್ಪ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.