ಗುರುವಾರ , ಜೂನ್ 30, 2022
27 °C

ಧರಣಿಗೆ ಕಲಬುರಗಿ ರೈತರ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಚನ್ನರಾಯಪಟ್ಟಣದಲ್ಲಿ ಕೈಗಾರಿಕಾ ವಲಯ ನಿರ್ಮಾಣಕ್ಕೆ ವಿರೋಧಿಸಿ ರೈತರು ನಡೆಸುತ್ತಿರುವ 52ನೇ ದಿನದ ಅನಿರ್ದಿಷ್ಟಾವಧಿ ಧರಣಿಯಲ್ಲಿ ಕಲಬುರಗಿ ಜಿಲ್ಲೆಯ ನವ ಕರ್ನಾಟಕ ರೈತ ಸಂಘದ ಮುಖಂಡರು ಪಾಲ್ಗೊಂಡು ಬೆಂಬಲ ಘೋಷಿಸಿದರು.

ನವ ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ದಯಾನಂದ ಪಾಟೀಲ್ ಮಾತನಾಡಿ, ಸರ್ಕಾರ ಹಾಗೂ ಕೆಐಎಡಿಬಿ ಸೇರಿ ರೈತರ ಕಣ್ಣಿಗೆ ಮಣ್ಣೆರಚುವಂತಹ ಕಾರ್ಯಕ್ಕೆ ಕೈ ಹಾಕಿದ್ದಾರೆ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ರೈತರು ಅಕ್ಷರ ಕಲಿತವರಲ್ಲ. ಅವರು ತಮ್ಮ ತೋಳಿನ ಬಲ ನಂಬಿಕೊಂಡು ಭೂಮಿಗೆ ಬೆವರುಹರಿಸಿ ಕೆಲಸ ಮಾಡಿ ಬದುಕುತ್ತಿದ್ದಾರೆ. ಇಂತಹ ಪ್ರಾಮಾಣಿಕರ ಭೂಮಿ ಕಸಿದುಕೊಳ್ಳಲು ಮುಂದಾಗಿರುವ ಸರ್ಕಾರ ನಿರ್ದಯಿಯಾಗಿದೆ ಎಂದು ಟೀಕಿಸಿದರು.

ಹೋರಾಟಗಾರ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಈಗಿನ ಸರ್ಕಾರ ರೈತರ ಪರವಾದ ಚಿಂತನೆಗಳನ್ನು ಕೈಬಿಟ್ಟಿದೆ. ಕೈಗಾರಿಕೋದ್ಯಮಿಗಳ ಪರವಾಗಿ ಕೆಲಸ ಮಾಡುವ ಮೂಲಕ ಬ್ರಿಟಿಷರಂತೆ ವರ್ತನೆ ಮಾಡುತ್ತಿದೆ. ರೈತರು ಬೀದಿಯಲ್ಲಿದ್ದರೂ ಬಂದು ನೋಡದ ಜನಪ್ರತಿನಿಧಿಗಳು ನಿರಂತರವಾಗಿ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ ಎಂದು ದೂರಿದರು.

ಚನ್ನರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ನಾವು ರೈತರಾಗಿದ್ದು ಅವರ ಜೊತೆಗೆ ಎಂದಿಗೂ ಇರುತ್ತೇವೆ. ಕೆಐಎಡಿಬಿಯವರು ಪಂಚಾಯಿತಿಯಿಂದ ಯಾವುದೇ ರೀತಿಯ ನಿರಾಪೇಕ್ಷಣಾ ಪತ್ರ ಪಡೆದುಕೊಂಡಿಲ್ಲ. ನಾವು ಯಾವುದೇ ಕಾರಣಕ್ಕೂ ಪಂಚಾಯಿತಿ ವ್ಯಾಪ್ತಿಯ ಭೂಮಿಯನ್ನು ಕೈಗಾರಿಕೆಗಳ ಸ್ಥಾಪನೆ ಮಾಡಲು ಬಿಟ್ಟುಕೊಡುವುದಿಲ್ಲ ಎಂದು ಹೇಳಿದರು.

ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮಾರೇಗೌಡ ಮಾತನಾಡಿದರು. ನವ ಕರ್ನಾಟಕ ರೈತ ಸಂಘದ ಮುಖಂಡ ಸುರೇಶ್ ಗೌಡ, ಎಂ.ಡಿ. ಜಗದೀಶ್, ರಾಜು, ನಾಗರಾಜು, ರೈತರಾದ ನಲ್ಲಪ್ಪನಹಳ್ಳಿ ನಂಜಪ್ಪ, ಮುನಿರಾಜು, ದೇವರಾಜು, ನಂಜೇಗೌಡ, ಗೋಪಾಲಪ್ಪ, ಪುನೀತ್, ನಂಜಣ್ಣ, ಮುಕುಂದ್, ನಾರಾಯಣಮ್ಮ, ವೆಂಕಟೇಶ್, ವೆಂಕಟರಮಣಪ್ಪ, ಈರಮ್ಮ, ಮೋಹನ್ ಕುಮಾರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.