ಮಂಗಳವಾರ, ಫೆಬ್ರವರಿ 7, 2023
27 °C
243 ದಿನ ಪೂರೈಸಿದ ಅನಿರ್ದಿಷ್ಟಾವಧಿ ಧರಣಿ l ಕೆಐಎಡಿಬಿ ಅಧಿಕಾರಿಗಳ ಸಮಾಲೋಚನೆ

ವಿಜಯಪುರ | ಫಲವತ್ತಾದ ಭೂಮಿ ಕಸಿದರೆ ತಕ್ಕ ಪಾಠ: ರೈತರ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ(ಬೆಂ.ಗ್ರಾಮಾಂತರ): ಚನ್ನರಾಯಪಟ್ಟಣದಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಹೋರಾಟಗಾರರ ನೇತೃತ್ವದಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 243 ದಿನ ಪೂರೈಸಿದ್ದು, ಸ್ಥಳಕ್ಕೆ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ(ಕೆಐಎಡಿಬಿ) ವಿಶೇಷ ಭೂಸ್ವಾಧೀನ ಅಧಿಕಾರಿ ಬಾಳಪ್ಪ ಹಂದಿಗುಂದಿ ಅವರು ಶುಕ್ರವಾರ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿದರು.

ಈ ವೇಳೆ ಹೋರಾಟಗಾರ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ‘ರೈತರ ಫಲವತ್ತಾದ ಕೃಷಿ ಭೂಮಿಗಳನ್ನೇ ನೀವು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವುದಕ್ಕೆ ರಾಜ್ಯದೆಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ನಮ್ಮನ್ನು ಒಕ್ಕಲೆಬ್ಬಿಸಿ, ಪೊಲೀಸರಿಂದ ದೌರ್ಜನ್ಯ ನಡೆಸಿ ಭೂಮಿ ಕಸಿಯಲು ಮುಂದಾದರೆ, ಇದಕ್ಕೆ ತಕ್ಕ ಪ್ರತಿಫಲವನ್ನು ನಾವು ಕೊಡಲಿದ್ದೇವೆ’ ಎಂದು ಎಚ್ಚರಿಸಿದರು.

‘ಈಗಾಗಲೇ ರೈತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರನ್ನು ಹಲವು ಬಾರಿ ಭೇಟಿ ಮಾಡಿ, ನಮ್ಮ ನಿಲುವು ಸ್ಪಷ್ಟಪಡಿಸಿದ್ದೇವೆ. ಅವರೂ ಕೂಡಾ ಸದನದಲ್ಲಿ ಶೇ 50ಕ್ಕಿಂತ ಹೆಚ್ಚು ರೈತರು ಭೂಮಿ ಕೊಡುವುದಿಲ್ಲ ಎಂದರೆ ಅಂತಹ ಕಡೆ ಸ್ವಾಧೀನ ಕೈಬಿಡುವುದಾಗಿ ತಿಳಿಸಿದ್ದಾರೆ. ಅವರು ಹೇಳಿದ ಮಾತಿನಂತೆ ನಡೆದುಕೊಳ್ಳಲಿ’ ಎಂದರು.

‘ಪ್ರತಿಯೊಂದು ಹಳ್ಳಿಯ ರೈತರಿಂದ ಮಾಹಿತಿ ಸಂಗ್ರಹಿಸಿದ್ದೇವೆ. ಶೇ 70 ರಷ್ಟು ರೈತರು ಭೂಮಿ ಕೊಡುವುದಿಲ್ಲ ಎಂದು ದಾಖಲೆ ಕೊಟ್ಟಿದ್ದಾರೆ. ಅವುಗಳನ್ನು ನಿಮಗೆ ಕೊಡುತ್ತೇವೆ. ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ನಮ್ಮ ಭೂಮಿಯನ್ನು ಸ್ವಾಧೀನದಿಂದ ಕೈಬಿಡಬೇಕು’ ಎಂದು ಕೋರಿದರು.

ಕೆಐಎಡಿಬಿ ವ್ಯವಸ್ಥಾಪಕ ಶಿವಾನಂದ, ವಿಮಲಾ, ಹೋಬಳಿಯ ಉಪ ತಹಶೀಲ್ದಾರ್ ಸುರೇಶ್, ರಾಜಸ್ವ ನಿರೀಕ್ಷಕ ರಾಜು ಸೆಬಾಸ್ಟಿನ್, ರೈತ ಹೋರಾಟಗಾರರಾದ ಮಾರೇಗೌಡ, ಕಾರಹಳ್ಳಿ ಶ್ರೀನಿವಾಸ್, ನಲ್ಲಪ್ಪನಹಳ್ಳಿ ನಂಜಪ್ಪ, ವೆಂಕಟರಮಣಪ್ಪ, ಅಶ್ವಥಪ್ಪ, ಮುಕುಂದ್, ನಂಜೇಗೌಡ, ತಿಮ್ಮರಾಯಪ್ಪ, ಸೇರಿದಂತೆ ನೂರಾರು ರೈತರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು