ಮಂಗಳವಾರ, ಸೆಪ್ಟೆಂಬರ್ 28, 2021
25 °C
ರೈತರಿಗೆ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಆರ್ಥಿಕ ನೆರವು

ಅರಣ್ಯ ಆಧಾರಿತ ಕೃಷಿಯತ್ತ ಒಲವು

ನಟರಾಜ ನಾಗಸಂದ್ರ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಅಂತರ್ಜಲ ಮಟ್ಟ ಕುಸಿತ, ಕಾರ್ಮಿಕರ ಕೊರತೆ, ಮಾರುಕಟ್ಟೆಯಲ್ಲಿನ ಬೆಲೆಯ ಏರಿಳಿತ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಇತ್ತೀಚೆಗೆ ಅರಣ್ಯ ಆಧಾರಿತ ಕೃಷಿ ವಿಧಾನದ ಕಡೆಗೆ ರೈತರು ಹೆಚ್ಚಿನ ಒಲವು ತೋರುತ್ತಿದ್ದಾರೆ.

ಕೊರೊನಾ ಮೊದಲ ಅಲೆಯಲ್ಲಿ ಜಾರಿಯಾದ ಲಾಕ್‌ಡೌನ್‌ನಿಂದಾಗಿ ಗ್ರಾಮಗಳ ಕಡೆಗೆ ಬಂದ ಹೆಚ್ಚಿನ ಸಂಖ್ಯೆಯ ಜನರು ಅರಣ್ಯ ಕೃಷಿ ಕಡೆಗೆ ಪ್ರಥಮ ಆದ್ಯತೆ ನೀಡಿದರು. ಇದಕ್ಕೂ ಮುನ್ನವೇ ಜಿಲ್ಲೆಯಲ್ಲಿ ಮೂರು ವರ್ಷದ ಹಿಂದೆ ಆರಂಭವಾದ ನೀಲಗಿರಿ ಮರಗಳ ತೆರವು ಆಂದೋಲನದಿಂದ ಖಾಲಿಯಾದ ಜಮೀನುಗಳಲ್ಲಿ ರಾಗಿ, ಜೋಳ ಬೆಳೆಯುವ ಕಡೆಗೆ ತೋರಿದಷ್ಟೇ ಆಸಕ್ತಿಯನ್ನೇ ಅರಣ್ಯ ಕೃಷಿ ಕಡೆಗೂ ತೋರಲಾಗುತ್ತಿದೆ.

ಅರಣ್ಯ ಆಧಾರಿತ ಕೃಷಿ ಮಾಡುವುದರಿಂದ ನೀಲಗಿರಿ ಮರಗಳ ಮಾರಾಟಕ್ಕಿಂತಲೂ ಹೆಚ್ಚಿನ ಆದಾಯ, ಅಂತರ್ಜಲ ಸಂರಕ್ಷಣೆ ಹಾಗೂ ಭೂಮಿಯ ಫಲವತ್ತತೆಯನ್ನು ಉಳಿಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ತಾಲ್ಲೂಕಿನ ಶ್ರವಣೂರು ಗ್ರಾಮದ ಯುವ ರೈತ ರೋಹಿತ್‌.

ಮೂರು ಎಕರೆ ಪ್ರದೇಶದಲ್ಲಿ ಅರಣ್ಯ ಆಧಾರಿತ ಕೃಷಿ ಆರಂಭಿಸಿರುವ ರೋಹಿತ್‌ ಹೇಳುವಂತೆ, ‘ಅರಣ್ಯ ಅನ್ನುತ್ತಿದ್ದಂತೆ ರೈತರು ಕಾಡು ಬೆಳೆಸುತ್ತ ಕುಳಿತರೆ ಜೀವನ ಹೇಗೆ ಎನ್ನುವ ಪ್ರಶ್ನೆ ಮಾಡುವುದು ಸಹಜ. ಆದರೆ, ಅರಣ್ಯ ಆಧಾರಿತ ಕೃಷಿಯ ಪರಿಕಲ್ಪನೆಯೇ ಬೇರೆಯಾಗಿದೆ’ ಎನ್ನುತ್ತಾರೆ.

ಜಮೀನಿನ ಸುತ್ತಲಿನ ಬದುಗಳಲ್ಲಿ ಮರಗಳಾಗಿ ಬೆಳೆಯುವುದು, ಒಳಭಾಗದಲ್ಲಿ ಹುಣಸೆ, ನುಗ್ಗೆ, ಮಾವು, ನೇರಳೆ, ನಿಂಬೆ ಹೀಗೆ ತಮ್ಮ ಮಣ್ಣಿನ ಗುಣಕ್ಕೆ ಹೊಂದುವ ಹಣ್ಣಿನ ಸಸಿಗಳನ್ನು ಬೆಳೆಸಬಹುದಾಗಿದೆ. ನೀರಾವರಿ ಸೌಲಭ್ಯ ಇಲ್ಲದೆಯೂ ಅರಣ್ಯ ಆಧಾರಿತ ಕೃಷಿ ಮಾಡಲು ಅವಕಾಶ ಇದೆ ಎಂದು ವಿವರಿಸುತ್ತಾರೆ.

ಬೇಸಿಗೆಯಲ್ಲಿ ಟ್ಯಾಂಕರ್‌ ಮೂಲಕ 10 ರಿಂದ 15 ದಿನಗಳಿಗೆ ಒಮ್ಮೆ ನೀರು ಹಾಕಿದರೆ ಸಾಕಾಗುತ್ತದೆ. ಎರಡು ವರ್ಷಗಳ ಕಾಲ ಸಸಿಗಳನ್ನು ಪೋಷಣೆ ಮಾಡಿದರೆ ಮತ್ತೆ ಮಳೆ ನೀರು ಜಮೀನಿನಿಂದ ಹೊರ ಹೋಗದಂತೆ ಹಿಡಿದಿಟ್ಟರೆ ಸಾಕಾಗಲಿದೆ. ಇದೇ ವಿಧಾನವನ್ನು ನಮ್ಮ ತೋಟದಲ್ಲಿ ಮಾಡಲಾಗಿದೆ ಎನ್ನುತ್ತಾರೆ.

ಅರಣ್ಯ ಇಲಾಖೆಯಲ್ಲಿ ಅರಣ್ಯ ಪ್ರೋತ್ಸಾಹ ಯೋಜನೆ ಇದೆ. ರೈತರು ತಮ್ಮ ಸ್ವಂತ ಜಮೀನಿನಲ್ಲಿ ಹಣ್ಣಿನ ಅಥವಾ ಇತರೆ ಮರಗಳನ್ನು ಬೆಳೆಸಬಹುದು. ಸಸಿ ನಾಟಿ ಮಾಡಿದ ಒಂದು ವರ್ಷದ ನಂತರ ಸಸಿಗೆ ₹ 30ರಂತೆ ಮೂರು ವರ್ಷದವರೆಗೆ ವಿವಿಧ ಹಂತದಲ್ಲಿ ಆರ್ಥಿಕ ನೆರವು ಸಿಗಲಿದೆ. ಆದರೆ, ಅರಣ್ಯ ಇಲಾಖೆ ರೈತರಿಗೆ ಈ ಯೋಜನೆಯಡಿ ದೊರೆಯುವ ಸೌಲಭ್ಯ ತಲುಪಿಸುವಲ್ಲಿ ಅಧಿಕಾರಿಗಳ ನಿರುತ್ಸಾಹದಿಂದಾಗಿ ಯೋಜನೆಯು ಅಷ್ಟಾಗಿ ಯಶಸ್ವಿಯಾಗಿಲ್ಲ ಎನ್ನುವ ಆರೋಪ ರೈತರದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.