ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಪುರಸಭೆಗೆ ಚುನಾವಣೆ: ಸೋಂಕಿನ ಭೀತಿ, ಮತದಾನಕ್ಕೆ ಸಿದ್ಧತೆ

ಚುನಾವಣಾ ಆಯೋಗ ಸಜ್ಜು
Last Updated 27 ಏಪ್ರಿಲ್ 2021, 3:36 IST
ಅಕ್ಷರ ಗಾತ್ರ

ವಿಜಯಪುರ: ಪಟ್ಟಣದ ಪುರಸಭೆಗೆ ಮಂಗಳವಾರ ನಡೆಯಲಿರುವ ಚುನಾವಣೆಗೆ ಸಕಲ ಸಿದ್ಧತೆಗಳು ನಡೆದಿದ್ದು, ಕೊರೊನಾ ಸೋಂಕು ಹರಡುತ್ತಿರುವ ಆತಂಕದ ನಡುವೆ ಜನರು ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಮತದಾರರು ಮತದಾನ ಮಾಡಬೇಕಾದಂತಹ ಸನ್ನಿವೇಶ ನಿರ್ಮಾಣವಾಗಿದೆ.

ಪಟ್ಟಣದಲ್ಲಿ 23 ವಾರ್ಡುಗಳಿಗೆ ಮತದಾನ ನಡೆಯಲಿದ್ದು, 88 ಮಂದಿ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಣಯ ಮಾಡಲಿದ್ದಾರೆ. ಏ.27ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದ್ದು, ಮತಗಟ್ಟೆಗಳಿಗೆ ಬರುವ ಮತದಾರರ ದೈಹಿಕ ಉಷ್ಣತೆ ಪರೀಕ್ಷೆ ಮಾಡುವುದು, ಅಂತರ ಕಾಪಾಡಿಕೊಂಡು ಮತದಾನ ಮಾಡಲಿಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮತದಾನ ನಡೆಯುವಂತಹ ಕೊಠಡಿಗಳಿಗೆ ಸ್ಯಾನಿಟೈಸಿಂಗ್ ಮಾಡಲಾಗಿದೆ.

28,036 ಮಂದಿ ಮತದಾರರು 13,979 ಮಂದಿ ಪುರುಷರು, 14,055 ಮಂದಿ ಮಹಿಳಾ ಮತದಾರರು ಇತರೆ 2 ಮಂದಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಸೆಕ್ಷನ್ 144 ಜಾರಿಯಲ್ಲಿದ್ದ ಕಾರಣ ಕಳೆದ ಮೂರು ದಿನಗಳಿಂದ ಮತಯಾಚನೆಗೆ ಅನುಮತಿ ಕೊಟ್ಟಿರಲಿಲ್ಲ. ಈಗ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು, ಅಭ್ಯರ್ಥಿಗಳು ತೆರೆಮರೆಯಲ್ಲಿ ಅಂತಿಮ ಕಸರತ್ತು ನಡೆಸಿದರು.

ಭಯಪಡುತ್ತಿರುವ ಜನತೆ: ಪಟ್ಟಣದಲ್ಲಿಯೂ ಕೊರೊನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಲವರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಜನರು ಮನೆಗಳಿಂದ ಹೊರಗೆ ಬರಲಿಕ್ಕೂ ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ಜನರು ನಿರ್ಭೀತಿಯಿಂದ ಹೊರಗೆ ಬಂದು ಮತದಾನ ಮಾಡುತ್ತಾರೆ ಎನ್ನುವುದೇ ಪ್ರಶ್ನೆಯಾಗಿದೆ.

ಕುಣಿಯುತಿದೆ ಕಾಂಚಾಣ: ಸ್ಥಳೀಯ ಚುನಾವಣೆಯಲ್ಲಿ ಒಂದೊಂದು ಮತವು ಬಹಳ ಪ್ರಮುಖವಾಗಿರುವುದರಿಂದ ಅಭ್ಯರ್ಥಿಗಳು, ಮತದಾರನ ಮನವೊಲಿಕೆಗಾಗಿ ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಒಂದೊಂದು ಮತಕ್ಕೆ ₹3ರಿಂದ 4 ಸಾವಿರ ಹಣವನ್ನು ಹಂಚಿಕೆ ಮಾಡಲಾಗುತ್ತಿದೆ ಎನ್ನಲಾಗಿದೆ.

ಕೆಲವು ಅಭ್ಯರ್ಥಿಗಳು ಮತದಾರರ ಬಳಿಯಲ್ಲಿ ಪ್ರಮಾಣ ಮಾಡಿಸಿಕೊಂಡು ಹಣ, ಮದ್ಯ, ಉಡುಗೊರೆಗಳನ್ನು ಹಂಚಿಕೆ ಮಾಡುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಕೆಲ ವಾರ್ಡುಗಳನ್ನು ಮತದಾರರ ಮನೆಗಳಿಗೆ ಮಾಂಸದ ಪಾಕೇಟುಗಳನ್ನು ಕಳುಹಿಸಿ ಮತದಾರರ ಮನವೊಲಿಸಿಕೊಳ್ಳುವ ಕಸರತ್ತುಗಳು ನಡೆಯುತ್ತಿದ್ದು, 8 ವರ್ಷಗಳ ನಂತರ ನಡೆಯುತ್ತಿರುವ ಚುನಾವಣೆಯಲ್ಲಿ ಕೊರೊನಾ ಸಂಕಷ್ಟದ ಕಾಲದಲ್ಲಿ ಮತದಾರನ ಕೈಯಲ್ಲಿ ಕಾಂಚಾಣ ಕುಣಿಯುತ್ತಿದೆ.

ಸೋಂಕಿತರಿಗೆ ಅವಕಾಶ: ಕೋವಿಡ್ ನಿಯಮಗಳನ್ನು ಪಾಲನೆ ಮಾಡಿಕೊಂಡು ಕೋವಿಡ್ ಸೋಂಕಿತರು ಮತದಾನ ಮಾಡಲಿಕ್ಕೆ ಮತದಾನ ಮುಕ್ತಾಯವಾಗುವುದಕ್ಕಿಂತ ಒಂದು ಗಂಟೆ ಮುಂಚಿತವಾಗಿ ಅವಕಾಶ ಮಾಡಿಕೊಡಲಾಗಿದೆ.

ಕೋವಿಡ್ ‌ನಿಯಮ ಪಾಲಿಸಿ, ಮತ ಚಲಾಯಿಸಿ
ದೊಡ್ಡಬಳ್ಳಾಪುರ:
ವಿಜಯಪುರ ಪುರಸಭಾ ಚುನಾವಣೆಗೆ ಏ.27ರಂದು ಮತದಾನ ನಡೆಯಲಿದ್ದು, ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸುವ ಮೂಲಕ ಮತ ಚಲಾಯಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.

ಮತ ಚಲಾವಣೆ ಸಂದರ್ಭದಲ್ಲಿ ಕಡ್ಡಾಯವಾಗಿ ಮುಖ ಕವಚ(ಮಾಸ್ಕ್) ಧರಿಸಿರಬೇಕು. ಸರತಿ ಸಾಲಿನಲ್ಲಿ ಅಂತರ ಕಾಯ್ದುಕೊಳ್ಳಬೇಕು. ಮತಗಟ್ಟೆ ಒಳಗೆ ಪ್ರವೇಶಿಸುವ ಮುನ್ನ ಮತದಾರರು ದೈಹಿಕ ತಾಪಮಾನವನ್ನು ತಪಾಸಣೆ ಮಾಡಿಸಿಕೊಳ್ಳಬೇಕು ಹಾಗೂ ಮತದಾನದ ಮುನ್ನ, ನಂತರ ಕಡ್ಡಾಯವಾಗಿ ಸ್ಯಾನಿಟೈಸರ್ ಬಳಸಿ ಕೈಗಳನ್ನು ಶುಚಿಗೊಳಿಸಿಕೊಳ್ಳಬೇಕು.

ಕೋವಿಡ್ ಸೋಂಕಿತ ವ್ಯಕ್ತಿಯೂ ಮತದಾನದ ಹಕ್ಕು ಉಳ್ಳವರಾಗಿದ್ದು, ಸೋಂಕಿತ ವ್ಯಕ್ತಿಗಳು ನಿಗದಿತ ಮತದಾನ ಮುಕ್ತಾಯದ ಕೊನೆಯ ಒಂದು ಗಂಟೆ ಅವಧಿಯಲ್ಲಿ ಮತಗಟ್ಟೆಗೆ ಹಾಜರಾಗಿ ಅಗತ್ಯ ಕೋವಿಡ್ ಮುನ್ನೆಚ್ಚರಿಕೆಗಳೊಂದಿಗೆ ಮತ ಹಾಕಲು ಅವಕಾಶ ಕಲ್ಪಿಸಲಾಗಿದೆ. ಮತದಾನಕ್ಕೆ ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಸಮಯಾವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT