ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಮೇವಿಗೆ ಕಳೆಗಿಡಗಳ ಮೊರೆ

ತೀವ್ರ ಮಳೆ ಕೊರತೆ: ಜಾನುವಾರುಗಳ ಪೋಷಣೆಗೆ ರೈತರ ಪರದಾಟ
Last Updated 23 ಮೇ 2019, 13:29 IST
ಅಕ್ಷರ ಗಾತ್ರ

ವಿಜಯಪುರ: ತೀವ್ರ ಮಳೆ ಕೊರತೆಯಿಂದ ಪರದಾಡುತ್ತಿರುವ ಬಯಲುಸೀಮೆ ಭಾಗದಲ್ಲಿ ಜಾನುವಾರುಗಳಿಗೆ ಮೇವಿನ ಬ್ಯಾಂಕ್‌ ತೆರೆದು ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಿದ್ದರೂ ಗ್ರಾಮೀಣ ಭಾಗದಲ್ಲಿ ಮೇವಿನ ಕೊರತೆ ನೀಗಿಸಲು ಜನರು ಪರದಾಡುತ್ತಿದ್ದಾರೆ.

ಪ್ರತಿ ಹೋಬಳಿ ಮಟ್ಟದಲ್ಲಿ ಮೇವಿನ ಬ್ಯಾಂಕ್‌ ತೆರೆದು ಮೇವಿನ ಕೊರತೆ ನೀಗಿಸಲು ಪ್ರಯತ್ನ ಮಾಡುತ್ತಿರುವ ಬೆನ್ನಲ್ಲೇ ಹಳ್ಳಿಗಳಲ್ಲಿನ ಮಹಿಳೆಯರು ದಿನಬೆಳಗಾದರೆ ಜಾನುವಾರುಗಳ ಪೋಷಣೆಗೆ ಬಯಲು ಪ್ರದೇಶಗಳಲ್ಲಿನ ಕಳೆ ಗಿಡಗಳು, ಬೇವಿನ ಸೊಪ್ಪನ್ನು ತಂದು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದ ನಾರಾಯಣಮ್ಮ ಮಾತನಾಡಿ ‘ಸರ್ಕಾರ ಮೇವಿಗಾಗಿ ಭತ್ತದ ಹುಲ್ಲನ್ನು ಕೊಡುತ್ತಾರಂತೆ. ಒಂದು ಕೆ.ಜಿ.ಗೆ ₹2 ನೀಡಬೇಕು ಎನ್ನಲಾಗುತ್ತಿದೆ. ನಾವು ವಿಜಯಪುರಕ್ಕೆ ಹೋಗಿ ತರೋದು ಸಾಧ್ಯವಿಲ್ಲ. ಹಾಗಾಗಿ ಹೊಲಗಳಲ್ಲಿನ ನಿರುಪಯುಕ್ತ ಕಳೆ ಗಿಡಗಳೇ ಈಗ ಗತಿಯಾಗಿವೆ’ ಎಂದರು.

ರೈತ ವೆಂಕಟಸ್ವಾಮಪ್ಪ ಮಾತನಾಡಿ ‘ಈ ಬಾರಿ ಮೇವಿಗೆ ತೀವ್ರ ಸಮಸ್ಯೆ ಎದುರಾಗಿದೆ. ಇಂತಹ ಪರಿಸ್ಥಿತಿ ಇದೇ ಮೊದಲು. ಒಂದು ಟ್ರ್ಯಾಕ್ಟರ್‌ ರಾಗಿ ಹುಲ್ಲಿಗೆ ₹ 30 ಸಾವಿರ ಹೇಳುತ್ತಾರೆ. ಕುರಿಗಳನ್ನು ಮಾರಿ, ಒಡವೆಗಳನ್ನು ಗಿರವಿ ಇಟ್ಟು ಮೇವು ಖರೀದಿ ಮಾಡಿದ್ದೇವೆ. ಈ ಬಾರಿಯೂ ಮಳೆ ಬಾರದಿದ್ದರೆ ದನಕರುಗಳನ್ನು ಮಾರಾಟ ಮಾಡಿ, ಕೆಲಸಕ್ಕಾಗಿ ದೇಶಾಂತರ ಹೋಗಬೇಕಾಗುತ್ತದೆ’ ಎಂದು ನೋವು ಹಂಚಿಕೊಂಡರು.

ಪಶು ವೈದ್ಯ ಇಲಾಖೆ ಜಿಲ್ಲಾ ಘಟಕದ ಹೆಚ್ಚುವರಿ ಉಪನಿರ್ದೇಶಕ ಡಾ.ನಾರಾಯಣಸ್ವಾಮಿ ಮಾತನಾಡಿ, ‘ಸರ್ಕಾರದ ಆದೇಶದ ಪ್ರಕಾರ ನಮ್ಮ ಹಂತದಲ್ಲಿ ಮೇವಿನ ಬ್ಯಾಂಕ್‌ಗಳನ್ನು ತೆರೆದಿದ್ದೇವೆ. ಕಂದಾಯ ಇಲಾಖೆ ಅಧಿಕಾರಿಗಳು ವಿತರಣೆ ಮಾಡುತ್ತಾರೆ. ಜಾನುವಾರುಗಳಿಗೆ ನೀರಿನ ಕೊರತೆ ಆಗದಂತೆ ಆಯಾ ಗ್ರಾಮ ಪಂಚಾಯಿತಿಗಳ ಹಂತದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಮುಂದೆ ಸರ್ಕಾರದ ಆದೇಶದ ಪ್ರಕಾರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT