ಸೋಮವಾರ, ಸೆಪ್ಟೆಂಬರ್ 16, 2019
26 °C

ಪ್ರವಚನಗಳಿಂದ ಸಕಾರಾತ್ಮಕ ಭಾವನೆ

Published:
Updated:
Prajavani

ವಿಜಯಪುರ: ಪುರಾಣ ಪ್ರವಚನಗಳನ್ನು ಕೇಳುವುದರಿಂದ, ಓದುವುದರಿಂದ ಮನಸ್ಸಿನಲ್ಲಿನ ಕೆಟ್ಟವಿಚಾರಗಳು ದೂರವಾಗಿ ಸಕಾರಾತ್ಮಕ ಭಾವನೆಗಳು ಮೂಡುತ್ತವೆ ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್. ಭಾಸ್ಕರ್ ಹೇಳಿದರು.

ಇಲ್ಲಿನ ಜಯಚಾಮರಾಜೇಂದ್ರ ಒಡೆಯರ್ ಬಡಾವಣೆಯ ಕೆಬಿಎಸ್ ಬಸವರಾಜು ಅವರ ನಿವಾಸದಲ್ಲಿ ಭಾನುವಾರ ಅರಿವಿನ ಮನೆ ವತಿಯಿಂದ ಆಯೋಜಿಸಿದ್ದ ತಿಂಗಳ ಬೆಳಕು, ಪುರಾಣ ಪ್ರವಚನ, ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶರಣ ಲೀಲಾಮೃತದಂತಹ ಕೃತಿಗಳು ಸಿದ್ಧಗಂಗಾ ಮಠಾಧ್ಯಕ್ಷ ಶಿವಕುಮಾರ ಸ್ವಾಮೀಜಿ ಅವರಿಗೆ ಪ್ರಿಯವಾಗಿದ್ದವು. ಅವರ ಮಾರ್ಗದರ್ಶನದಂತೆ ಆಧ್ಯಾತ್ಮದ ಬದುಕನ್ನು ಕಟ್ಟಿಕೊಳ್ಳಲು ಪ್ರತಿಯೊಬ್ಬರಿಗೂ ಬೇಕಾದ ಮೌಲ್ಯಗಳನ್ನು ಪುರಾಣಗಳಿಂದ ಗಳಿಸಿಕೊಳ್ಳಬಹುದಾಗಿದ್ದು ಇಂತಹ ಕಾರ್ಯಕ್ರಮಗಳು ಇಂದಿನ ಸಮಾಜಕ್ಕೆ ಅವಶ್ಯಕವಾಗಿದೆ ಎಂದರು.

ಮುಖಂಡ ಎಸ್.ಬಸವರಾಜು ಮಾತನಾಡಿ, ಪುರಾಣ ಪ್ರವಚನವನ್ನು ಓದುವುದು ಮತ್ತು ಆಲಿಸುವಿಕೆಯಿಂದ ಸಂಸ್ಕಾರ, ನೆಮ್ಮದಿ ದೊರೆಯುತ್ತದೆ. ಪುರಾಣ ಪ್ರವಚನಕ್ಕೆ ಸರ್ವಕಾಲವೂ ಪ್ರಶಸ್ತವಾದರೂ ಶ್ರಾವಣಮಾಸವು ಉತ್ತಮ ಕಾಲವೆಂದು ಪೂರ್ವ ಕಾಲದಿಂದಲೂ ನಂಬಲಾಗಿದೆ ಎಂದರು.

ಮುಖಂಡ ಪಿ.ಚಂದ್ರಪ್ಪ ಮಾತನಾಡಿ, ಜಗತ್ತಿನಲ್ಲಿ ಎಲ್ಲವೂ ನಶ್ವರವಾದರೂ ಎಲ್ಲರೂ ಜಗತ್ತನ್ನು ಆನಂದದಿಂದ ನೋಡುವ, ಜೀವನವನ್ನು ಸಾರ್ಥಕಪಡಿಸಿಕೊಳ್ಳುವ ಮಾರ್ಗಗಳನ್ನು ಅನುಸರಿಸಬೇಕಿದೆ ಎಂದರು.

ಶ್ರಾವಣ ಮಾಸದ ಪುರಾಣ ಪ್ರವಚನ ನಡೆಯಿತು. ಶರಣರ ಭಾವಚಿತ್ರಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ವಚನಗಳ ಗಾಯನ ನಡೆಯಿತು. ಬ್ಯಾಂಕ್ ನಿವೃತ್ತ ನೌಕರ ಎಸ್.ಪ್ರಕಾಶ್, ಧಾರ್ಮಿಕ ಮುಖಂಡ ಎಸ್.ಪಿ. ಕೃಷ್ಣಾನಂದ್, ಬಾಲಗೋಕುಲ ಭಗವದ್ಗೀತಾ ಶಾಲೆಯ ಕೃಷ್ಣಪ್ಪ ದಾಸ, ಅರಿವಿನ ಮನೆಯ ಸದಸ್ಯರು ಉಪಸ್ಥಿತರಿದ್ದರು.

Post Comments (+)