ಶುಕ್ರವಾರ, ಏಪ್ರಿಲ್ 16, 2021
25 °C
ಗಂಗೋನಹಳ್ಳಿ ಭೂವಿವಾದ; ಅಧಿಕಾರಿಗಳ ಜೊತೆ ಮಾಜಿ ಶಾಸಕ ಬಾಲಕೃಷ್ಣ ಚರ್ಚೆ

ಕ್ರಮಕ್ಕೆ ಮುಂದಾದರೆ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ತಾಲೂಕಿನ ತಿಪ್ಪಸಂದ್ರ ಹೋಬಳಿ ಗಂಗೋನಹಳ್ಳಿ ಗ್ರಾಮದ ಸುಮಾರು 20 ಎಕರೆ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿರುವ ರೈತರಿಗೆ ಈ ಹಿಂದೆ ಮಂಜೂರು ಮಾಡಿದ್ದ ಭೂಮಿಯನ್ನು ಸರ್ಕಾರ ಬಲವಂತದಿಂದ ಹಿಂಪಡೆಯಬಾರದು ಎಂದು ಮಾಜಿ ಶಾಸಕ. ಎಚ್.ಸಿ. ಬಾಲಕೃಷ್ಣ ಆಗ್ರಹಿಸಿದರು.

ಈ ಕುರಿತು ಸೋಮವಾರ ರೈತರ ಸಮ್ಮುಖದಲ್ಲಿ ಉಪವಿಭಾಗಾಧಿಕಾರಿ ದಾಕ್ಷಾಯಿಣಿ, ಮಾಗಡಿ ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್ ಜೊತೆ ಮಾತುಕತೆ ನಡೆಸಿದ ಬಳಿಕ ಪತ್ರಕರ್ತರ ಜೊತೆ ಅವರು ಮಾತನಾಡಿದರು. ‘ನಾನು ಶಾಸಕನಾಗಿದ್ದಾಗ ಕೃಷಿ ಭೂಮಿ ಪಡೆಯಲು ಫಾರಂ ನಂಬರ್ 56 ಪತ್ರಕ್ಕೆ ಅರ್ಜಿ ಹಾಕಿದ ತಾಲೂಕಿನ ಬಹುತೇಕ ರೈತರಿಗೆ ಶಿಫಾರಸು ಮಾಡಿದ್ದೇನೆ. ಈ ಶಿಫಾರಸು ಆಧರಿಸಿ ಕೃಷಿ ಭೂಮಿಗೆ ಹಕ್ಕುಪತ್ರ ನೀಡದೇ ಆ ಭೂಮಿಯನ್ನು ಸಾಮಾಜಿಕ ವಲಯ ಅರಣ್ಯ ಪ್ರದೇಶವನ್ನಾಗಿ ಪರಿವರ್ತಿಸಿ ಅದನ್ನು ರೈತರಿಂದ ಬಲವಂತವಾಗಿ ವಶಪಡಿಸಿಕೊಳ್ಳಲು ಹೊರಟಿರುವುದು ಖಂಡನೀಯ. ಒಂದು ವೇಳೆ ರೈತರನ್ನು ಈ ರೀತಿ ಒಕ್ಕಲೆಬ್ಬಿಸುವ ಕೆಲಸ ಮಾಡಿದರೆ, ಈ ನಿಯಮವನ್ನು ಇಡೀ ಜಿಲ್ಲೆಗೆ ಅನುಸರಿಸಬೇಕು. ಕೇವಲ ಗಂಗೋನಹಳ್ಳಿ ರೈತರಿಗೆ ಮಾತ್ರ ಈ ಕ್ರಮ ಏಕೆ ಎಂದು ಅವರು ಪ್ರಶ್ನಿಸಿದರು.

‘ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶಾಸಕ ಎ. ಮಂಜುನಾಥ ಒತ್ತಡಕ್ಕೆ ಮಣಿದು ಉಪವಿಭಾಗಾಧಿಕಾರಿ ಗಂಗೋನಹಳ್ಳಿ ಜಾಗವನ್ನು ವಶಕ್ಕೆ ತೆಗೆದುಕೊಳ್ಳಲು ಬಂದಿದ್ದರು. ಆದರೆ ಅದಕ್ಕೆ ನಾವು ಅವಕಾಶ ನೀಡಿರಲಿಲ್ಲ. ಉಪವಿಭಾಧಿಕಾರಿ ಕಚೇರಿಗೆ ವಾಪಸ್ ಆಗಿ, ಪೊಸಿಷನ್ ತೆಗೆದುಕೊಂಡಿದ್ದೇನೆ ಎಂಬ ಪತ್ರವನ್ನು ಜಿಲ್ಲಾಧಿಕಾರಿಗೆ ಕಳುಹಿಸಿಕೊಟ್ಟಿದ್ದರು. ಜಿಲ್ಲಾಧಿಕಾರಿ ಪೂರ್ವಾಪರ ವಿಚಾರಿಸದೇ ಈ ಪತ್ರಕ್ಕೆ ಸಮ್ಮತಿ ಮುದ್ರೆ ಒತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಮಾಗಡಿ ಶಾಸಕರು ನಮಗೆ ಈ ಭಾಗದ ಜನರು ಮತ ಹಾಕಲ್ಲ ಎಂಬ ಕಾರಣಕ್ಕೆ ಇಂತಹ ಕೆಲಸ ಮಾಡುತ್ತಿರುವುದು ನಾಚಿಕೆಗೇಡು. ನಮ್ಮ ಅಧಿಕಾರ ಅವಧಿಯಲ್ಲಿ ಇಂತಹ ಯಾವ ಒಕ್ಕಲೆಬ್ಬಿಸುವ ಕೆಲಸವನ್ನು ಮಾಡಿಲ್ಲ’ ಎಂದು ವಿವರಣೆ ನೀಡಿದರು.

‘ರಾಜ್ಯ ಸರ್ಕಾರ ಪಿಟಿಷನ್ ಆ್ಯಕ್ಟ್ ಸಮಿತಿ ರಚಿಸಿದೆ. ಇದರಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರು ಇದ್ದಾರೆ. ಹೀಗಾಗಿ ಮಾಗಡಿಯಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿರುವ ಕ್ರಮವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರವರಿಗೆ ತಿಳಿಸಿ ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಜಿ.ಪಂ. ಅಧ್ಯಕ್ಷ ಎಚ್‌.ಎನ್‌. ಅಶೋಕ್, ರೈತ ಮುಖಂಡರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.