ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಗ್ನಿ ಅವಘಡ ವಿಚಾರ ಎಚ್ಚರಿಕೆ ಅಗತ್ಯ’

ವಿಜಯಪುರದಲ್ಲಿ ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮ
Last Updated 17 ಏಪ್ರಿಲ್ 2019, 13:11 IST
ಅಕ್ಷರ ಗಾತ್ರ

ವಿಜಯಪುರ: ಆಕಸ್ಮಿಕವಾಗಿ ಬೆಂಕಿ ತಗುಲಿದಾಗ ಅನಾಹುತ ತಪ್ಪಿಸಲು ಏನು ಮಾಡಬೇಕು, ಬೆಂಕಿಯನ್ನು ನಿಯಂತ್ರಿಸಲು ಯಾವ ಕ್ರಮ ಅನುಸರಿಸಬೇಕು ಹೀಗೆ ಅವಘಡಗಳು ಸಂಭವಿಸಿದಾಗ ಯಾವ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಅಗ್ನಿ ಶಾಮಕ ಸಿಬ್ಬಂದಿ ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಇಲ್ಲಿನ ಪ್ರಗತಿ ಕೈಗಾರಿಕಾ ತರಬೇತಿ ಕೇಂದ್ರದ ಆವರಣದಲ್ಲಿ ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಅಗ್ನಿ ನಂದಿಸುವ ಕುರಿತು ಅಣುಕು ಪ್ರಾತ್ಯಕ್ಷಿಕೆ ನಡೆಸಿದರು.

ಮನೆಗಳಲ್ಲಿ ಪೆಟ್ರೋಲ್, ಸೀಮೆ ಎಣ್ಣೆ, ಜಿಡ್ಡಿನ ಅಂಶವಿರುವ ಪದಾರ್ಥಗಳು ಸೇರಿದಂತೆ ಇತರೆ ಪದಾರ್ಥಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಸಂದರ್ಭದಲ್ಲಿ ತಕ್ಷಣ ನೀರನ್ನು ಹಾಕುವ ಬದಲು ಮರಳನ್ನು ಎರಚಬೇಕು. ಅಡುಗೆ ಮನೆಯಲ್ಲಿ ಸಿಲಿಂಡರ್‌ಗಿಂತ ಸ್ಟವ್ ಸ್ವಲ್ಪ ಮಟ್ಟದ ಎತ್ತರದಲ್ಲಿ ಇರಬೇಕು. ಅಡುಗೆ ಕೆಲಸ ಮುಗಿದ ನಂತರ ರಾತ್ರಿ ಕಡ್ಡಾಯವಾಗಿ ರೆಗ್ಯುಲೇಟರ್ ಆಫ್ ಮಾಡಬೇಕು ಎಂಬ ಮಾಹಿತಿ ನೀಡಲಾಯಿತು.

ಹಳ್ಳಿಗಾಡಿನ ಪ್ರದೇಶದಲ್ಲಿ ರೈತರು ಕಬ್ಬಿನ ಸಿಪ್ಪೆ ಹಾಗೂ ತರಗುಗಳಿಗೆ ಬೆಂಕಿ ಹಚ್ಚುವಾಗ ಅಕ್ಕಪಕ್ಕದ ಪ್ರದೇಶಗಳಿಗೆ ಹರಡದಂತೆ ಬಹಳ ಎಚ್ಚರಿಕೆ ವಹಿಸಬೇಕು. ಅಂಗಡಿ ಮಳಿಗೆಯಲ್ಲಿ ರಾತ್ರಿ ವೇಳೆ ಬೀಗ ಹಾಕುವಾಗ ವಿದ್ಯುತ್ ಮೇನ್ ಅನ್ನು ಸ್ವಿಚ್ ಆಫ್ ಮಾಡಬೇಕು. ದೀಪ ಅಥವಾ ಗಂಧದ ಕಡ್ಡಿ ಹಚ್ಚಿ ರಾತ್ರಿ ಬೀಗ ಹಾಕಿ ಹೋಗಬಾರದು ಎನ್ನುವ ಮಾಹಿತಿಯನ್ನು ಅಗ್ನಿ ಶಾಮಕ ಸಿಬ್ಬಂದಿ ಜಾಗೃತಿ ಮೂಡಿಸಿದರು.

ಅಗ್ನಿಶಾಮಕ ಠಾಣಾಧಿಕಾರಿ ನಾಗೇಶ್ ಮಾತನಾಡಿ, ಬೇಸಿಗೆ ಬರುತ್ತಿದ್ದಂತೆ ಅಗ್ನಿ ದುರಂತಗಳು ಸಂಭವಿಸುತ್ತಿರುತ್ತವೆ. ಅವುಗಳನ್ನು ತಡೆಯುವಲ್ಲಿ ಮತ್ತು ಸೂಕ್ತ ನಿರ್ವಹಣೆ ಮಾಡಿ ನಂದಿಸುವಲ್ಲಿ ಎಲ್ಲರಿಗೂ ಜಾಗ್ರತೆ ಇರಬೇಕಾಗುತ್ತದೆ ಎಂದರು.

ಸರ್ಕಾರ ನಿಗದಿ ಪಡಿಸಿರುವಂತೆ ಎಲ್ಲ ಕಚೇರಿ, ಅಂಗಡಿ, ಕಾರ್ಖಾನೆಗಳು ಪೆಟ್ರೋಲ್ ಬಂಕ್‌ಗಳು ಸೇರಿದಂತೆ ವಾಣಿಜ್ಯ ಮಳಿಗೆ ಕಟ್ಟಡಗಳಲ್ಲಿ ಸೂಕ್ತ ಬೆಂಕಿನಂದಕ ಉಪಕರಣಗಳನ್ನು ಇಟ್ಟುಕೊಳ್ಳುವುದರ ಜೊತೆಗೆ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ ಎಂದರು.

ಪ್ರಗತಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಿ.ವೆಂಕಟೇಶ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಮೇವು, ಹೊಟ್ಟು, ಹುಲ್ಲಿನ ಬಣವೆಗಳಿಗೆ ಬೆಂಕಿ ಹೊತ್ತಿ ದುರಂತಗಳಾಗುತ್ತವೆ. ಈ ರೀತಿಯ ಘಟನೆ ಸಂಭವಿಸಿದಾಗ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ವಿದ್ಯಾರ್ಥಿಗಳು ಎಚ್ಚರವಾಗಿರಬೇಕು ಎಂದರು.

ಇಂತಹ ಪ್ರಾತ್ಯಕ್ಷಿಕೆಗಳ ಮೂಲಕ ತೋರಿಸುವಂತಹ ವಿಧಾನಗಳನ್ನು ತಮ್ಮ ಮನಸ್ಸಿನಲ್ಲಿ ಕೇಂದ್ರೀಕೃತ ಮಾಡಿಕೊಂಡು ಎಚ್ಚರಿಕೆ ವಹಿಸಿ ಮನೆಗಳಲ್ಲಿನ ಹಿರಿಯರಿಗೂ ಮನವರಿಕೆ ಮಾಡಿಕೊಡಬೇಕು ಎಂದರು.

ಪ್ರಗತಿ ಕೈಗಾರಿಕಾ ತರಬೇತಿ ಕೇಂದ್ರದ ಉಪನ್ಯಾಸಕರು, ಅಗ್ನಿಶಾಮಕ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT