ಭಾನುವಾರ, ಆಗಸ್ಟ್ 25, 2019
24 °C

ಮೇವು, ನೀರಿನ ಕೊರತೆ: ಸಂಕಷ್ಟದಲ್ಲಿ ಪಶುಪಾಲನೆ

Published:
Updated:
Prajavani

ವಿಜಯಪುರ: ‘ರಾಜ್ಯದಲ್ಲಿ ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಅನಾವೃಷ್ಟಿಯಿಂದ ಅನಾಹುತಗಳು ಸಂಭವಿಸುತ್ತಿವೆ. ಅನಾವೃಷ್ಟಿಗೆ ಒಳಗಾಗಿರುವ ಬಯಲು ಸೀಮೆ ಭಾಗದಲ್ಲಿನ ಜನರು ಮಳೆ ಕೊರತೆಯಿಂದ ಜಾನುವಾರುಗಳ ಮೇವಿಗೆ ಪರದಾಡುವಂತಾಗಿದೆ’ ಎಂದು ರೈತ ಅಶ್ವಥಪ್ಪ ಅಳಲು ತೋಡಿಕೊಂಡರು.

‘ಹಳ್ಳಿಗಳಲ್ಲಿನ ಮಹಿಳೆಯರು ದಿನ ಬೆಳಗಾದರೆ, ಓರಾರಿ (ಹುಲ್ಲು ಸಂಗ್ರಹಿಸಲು ಬಳಸುವ ಸಾಧನ) ಕುಡುಗೋಲು, ಪಟ್ಟೆಯನ್ನು (ಹುಲ್ಲು ತರಲಿಕ್ಕೆ ಸಿದ್ಧಪಡಿಸಿಕೊಂಡಿರುವ ಪ್ಲಾಸ್ಟಿಕ್ ಚೀಲ) ತೆಗೆದುಕೊಂಡು, ಮುಂಜಾನೆಯೇ ಹೊರಟರೆ, ಅಲ್ಪಸ್ವಲ್ಪ ಹುಲ್ಲು ಸಂಗ್ರಹಿಸಿ ತರಲು ಮದ್ಯಾಹ್ನ 12 ಗಂಟೆಯಾಗುತ್ತದೆ. ಇದು ಪಶುಗಳಿಗೆ ಸಾಲುವುದಿಲ್ಲ. ಮತ್ತೆ ಮಧ್ಯಾಹ್ನ ಹುಲ್ಲು ಅರಸಿ ಹೊರಟರೆ ಸಂಜೆ 5 ಗಂಟೆಯಾದರೂ ಒಂದು ಮೂಟೆ ಹುಲ್ಲು ಸಿಗುವುದು ಕಷ್ಟ. ದಿನವಿಡೀ ಸುತ್ತಾಡಿದರೂ ಬೇಕಾದಷ್ಟು ಹಸಿರು ಮೇವು ಸಿಗುವುದಿಲ್ಲ’ ಎಂದು ಅವರು ಹೇಳಿದರು.

ಗೃಹಿಣಿ ಲಕ್ಷ್ಮಮ್ಮ ಮಾತನಾಡಿ, ‘ನಮಗೆ ಹಸುಗಳನ್ನು ಬಿಟ್ಟರೆ ಜೀವನಕ್ಕೆ ಬೇರೆ ದಾರಿಯಿಲ್ಲ. ಕುಟುಂಬ ನಿರ್ವಹಣೆಗೆ ಡೇರಿಗೆ ಹಾಕುವ ಹಾಲಿನ ದುಡ್ಡೇ ಮೂಲಾಧಾರ. ಮಕ್ಕಳ ಓದು, ಆಸ್ಪತ್ರೆ ಖರ್ಚು ಸೇರಿದಂತೆ ನಮ್ಮೆಲ್ಲ ಬದುಕು ಇದರ ಮೇಲೆಯೇ ಅವಲಂಬಿತ. ಮೇವಿಲ್ಲದೆ ಇತ್ತೀಚೆಗೆ ಹಾಲು ಕಡಿಮೆಯಾಗುತ್ತಿದೆ. ಮೊದಲು ದಿನಕ್ಕೆ 20 ಲೀಟರ್ ಹಾಲು ಡೇರಿಗೆ ಹಾಕುತ್ತಿದ್ದೆವು. ಈಗ 12 ಲೀಟರ್‌ಗೆ ಇಳಿದಿದೆ. ಇದರಿಂದ ಬರುವ ಹಣ ಏನಕ್ಕೂ ಸಾಲುವುದಿಲ್ಲ’ ಎಂದು ನೋವು ತೋಡಿಕೊಂಡರು.

‘ಗೊಬ್ಬರ ಮಾರಾಟ ಮಾಡಿದರೆ ಅದರಿಂದ ಸ್ವಲ್ಪ ಹಣ ಬರುತ್ತಿತ್ತು. ಆದರೆ ಹೊಲಕ್ಕೆ ಗೊಬ್ಬರ ಹಾಕಿ, ರಾಗಿ ಬಿತ್ತನೆ ಮಾಡಿದ್ದೇವೆ. ಮಳೆ ಕೊರತೆಯಿಂದ ರಾಗಿಯೂ ಮೊಳಕೆ ಬಂದಿಲ್ಲ. ಗೊಬ್ಬರವನ್ನಾದರೂ ಮಾರಾಟ ಮಾಡಿದ್ದರೆ 4 ಸಾವಿರ ಹಣ ಸಿಗುತ್ತಿತ್ತು. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ’ ಎಂದರು.

ಪಶು ವೈದ್ಯಾಧಿಕಾರಿ ಡಾ.ನಾರಾಯಣಸ್ವಾಮಿ ಮಾತನಾಡಿ, ‘ಜಿಲ್ಲಾಡಳಿತದಿಂದ ಹೋಬಳಿವಾರು, ಗ್ರಾಮ ಪಂಚಾಯಿತಿವಾರು ಮೇವಿನ ಬ್ಯಾಂಕ್‌ಗಳನ್ನು ತೆರೆದು ಮೇವು ವಿತರಣೆ ಮಾಡುವ ಕಾರ್ಯ ನಡೆಯುತ್ತಿದೆ. ಗೋ ಶಾಲೆಯನ್ನೂ ತೆರೆಯಲಾಗಿದ್ದು, ಅಲ್ಲಿಗೂ ಮೇವು ಪೂರೈಕೆ ಆಗುತ್ತಿದೆ. ಈ ಬಾರಿಯೂ ಮಳೆಯ ಅಭಾವ ಕಾಡುತ್ತಿರುವುದರಿಂದ ಮೇವಿನ ಕೊರತೆ ಯಥಾಸ್ಥಿತಿಯಲ್ಲಿದೆ. ಇದನ್ನು ನಿಭಾಯಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳುತ್ತಿದೆ’ ಎಂದು ತಿಳಿಸಿದರು.

Post Comments (+)