ಗುರುವಾರ , ಆಗಸ್ಟ್ 22, 2019
21 °C

ತಪ್ಪದ ಮೇವಿನ ಬರ, ರೈತರು ಕಂಗಾಲು

Published:
Updated:
Prajavani

ವಿಜಯಪುರ: ಮಳೆಗಾಲವಾದರೂ ಮಳೆಯ ಹನಿಗಳು ಕಾಣದೆ, ರಾಸುಗಳಿಗೆ ಮೇವಿಲ್ಲದೆ ಜನರು ಹೈರಾಣಾಗುತ್ತಿದ್ದು ದಿನೇ ದಿನೇ ಹಸಿರು ಮೇವಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ರೈತ ಚಿಕ್ಕಹನುಮಂತಪ್ಪ ಆತಂಕ ವ್ಯಕ್ತಪಡಿಸಿದರು.

ಬೇಸಿಗೆಯಲ್ಲಿ ಒಣಮೇವಿಗೆ ಪರದಾಡುತ್ತಿದ್ದ ನಾವು, ಮಳೆಗಾಲ ಆರಂಭವಾದ ನಂತರವಾದರೂ ಈ ಸಮಸ್ಯೆ ಬಗೆಹರಿಯುತ್ತದೆ ಎನ್ನುವ ನಿರೀಕ್ಷೆಯಲ್ಲೆ ಕಾಲ ಕಳೆಯುತ್ತಿದ್ದೆವು. ಮಳೆಗಾಲ ಆರಂಭವಾಗಿ ಎರಡು ತಿಂಗಳಾಗಿದೆ. ಮಳೆಗಾಲ ಆರಂಭವಾದ ಮೇಲೆ ಮೂರು ಬಾರಿ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದೆ. ನಮ್ಮ ಭಾಗದಲ್ಲಿ ನಿರೀಕ್ಷೆಯಷ್ಟು ಮಳೆಯು ಆಗಿಲ್ಲ.

‘ಸಾಮಾನ್ಯವಾಗಿ ಬೇಸಿಗೆಯಲ್ಲಿ ರಾಸುಗಳ ಬೆಲೆ ಕಡಿಮೆಯಾಗುತ್ತದೆ. ಕಡಿಮೆ ಬೆಲೆಗೆ ಸಿಕ್ಕಾಗ ಖರೀದಿ ಮಾಡಿಕೊಂಡು ಬಂದಿದ್ದೆವು. ತುಂಬಾ ಕಷ್ಟಪಟ್ಟು ಅವುಗಳನ್ನು ಪೋಷಣೆ ಮಾಡಿಕೊಂಡು ಬಂದಿದ್ದೇವೆ. ಯಾವಾಗ ಬೇಸಿಗೆ ಮುಗಿಯುತ್ತದೋ ಎಂದು ಕಾಯುತ್ತಿದ್ದೇವೆ. ಈಗ ಬೇಸಿಗೆ ಮುಗಿದರೂ ನಮ್ಮ ಗೋಳು ಹೇಳಿಕೊಳ್ಳಲು ಆಗುತ್ತಿಲ್ಲ. ಈಗ ರಾಸುಗಳನ್ನು ಮಾರಾಟ ಮಾಡುವುದು ಒಳ್ಳೆಯದು ಎನಿಸುತ್ತಿದೆ’ ಎಂದರು.

‘ರೈತ ನಂಜಪ್ಪ ಅವರ ಪ್ರಕಾರ, ಒಂದು ಮೂಟೆ ಬೂಸಾ ₹ 1 ಸಾವಿರ ಇದೆ. ಹಿಂಡಿ ₹ 1,200, ಹಸಿರು ಮೇವು ಕೊಡದಿದ್ದರೆ ಹಾಲು ಬರುವುದಿಲ್ಲ. ಅದನ್ನೆ ನಂಬಿಕೊಂಡಿರುವ ನಾವು ಬದುಕಲಾರದ ಪರಿಸ್ಥಿತಿ ಇದೆ. ಒಂದು ಲೋಡು ಗೊಬ್ಬರ 3 ಸಾವಿರಕ್ಕೆ ಕೇಳುತ್ತಾರೆ. ಹಾಲಿಗೆ ಕೊಡುವ ಬೆಲೆಯಿಂದಲೂ ನಮಗೆ ಅನುಕೂಲವಾಗುತ್ತಿಲ್ಲ. ಗೊಬ್ಬರದಲ್ಲೂ ಲಾಭ ಬರುವುದಿಲ್ಲ. ಒಂದು ಹಸು ಮನೆಯಲ್ಲಿದ್ದರೆ ಇಬ್ಬರು ಅದಕ್ಕಾಗಿ ಇರಬೇಕು. ಒಬ್ಬರು ಮೇವು ಅರಸಿಕೊಂಡು ಹೋದರೆ ಒಬ್ಬರು ಅದರ ಸಮೀಪದಲ್ಲಿದ್ದುಕೊಂಡು ಸ್ವಚ್ಛತೆ ಕಾಪಾಡಿಕೊಂಡು ಪೋಷಣೆ ಮಾಡಬೇಕು. ಈಗ ಮೇವು ಸಿಗದೆ ತುಂಬಾ ಕಷ್ಟಕರವಾಗಿದೆ’ ಎಂದರು.

ರೆಡ್ಡಿಹಳ್ಳಿ ಗ್ರಾಮದ ನಿವಾಸಿ ವೆಂಕಟರಾಮಪ್ಪ ಮಾತನಾಡಿ, ‘ತೋಟಗಳಲ್ಲಿ ನೀರು ಇರುವ ರೈತರು ಜೋಳ ಬೆಳೆದಿದ್ದಾರೆ. ತೋಟಗಳಲ್ಲೆ ಮಾರಾಟ ಮಾಡುತ್ತಿದ್ದಾರೆ. ತೋಟಗಳಲ್ಲಿ ಖರೀದಿ ಮಾಡಬೇಕಾದರೆ 20 ಸಾವಿರದವರೆಗೂ ಹಣ ನಮ್ಮಲ್ಲಿರಬೇಕು. ಅಷ್ಟೊಂದು ಹಣ ನಮ್ಮಲ್ಲಿಲ್ಲದ ಕಾರಣ ನಾವು ಮೇವು ಖರೀದಿ ಮಾಡಲಿಕ್ಕೆ ಸಾಧ್ಯವಾಗುತ್ತಿಲ್ಲ. ಒಂದು ವಾರದಲ್ಲಿ ಮಳೆ ಬಾರದೆ ಇದ್ರೆ ರಾಸುಗಳನ್ನು ಮಾರಾಟ ಮಾಡೋದು ಬಿಟ್ಟರೆ ಬೇರೆ ದಾರಿಯಿಲ್ಲ. ಮನೆ ಸಂಸಾರ ನಿಭಾಯಿಸಬೇಕು, ಮಕ್ಕಳನ್ನು ಓದಿಸಬೇಕು, ಹಾಲಿನ ಬಿಲ್ಲಿನಿಂದಲೇ ಹಸುಗಳಿಗೆ ಮೇವು ಖರೀದಿ ಮಾಡಬೇಕು, ಪಶು ಆಹಾರಗಳನ್ನೂ ಖರೀದಿ ಮಾಡಬೇಕು. ಪಂಚಾಯಿತಿಯಿಂದ ಒಂದಷ್ಟು ಮೇವು ಕೊಟ್ಟಿದ್ದರು. ಈಗ ಕೊಡುತ್ತಿಲ್ಲ. ಒಂದು ತಿಂಗಳಾದರೂ ಮೇವು ವಿತರಣೆ ಮಾಡಿದರೆ ಒಳ್ಳೆಯದು’ ಎಂದು ಒತ್ತಾಯ ಮಾಡಿದರು.

Post Comments (+)