ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಮರೆಗೆ ಸರಿಯುತ್ತಿರುವ ಗಬ್ಬಿಯಾಳೋ ಹಾಡು

Last Updated 30 ಡಿಸೆಂಬರ್ 2019, 14:35 IST
ಅಕ್ಷರ ಗಾತ್ರ

ವಿಜಯಪುರ: ಗಬ್ಬಿಯಾಳೋ ಯಾಡಾದಿಕೊಕ ದಿನಮು ಯಾಲೋಸ್ತಿವಮ್ಮಾ..ಗಬ್ಬಿಯಾಳೋ...(ಗಬ್ಬಿಯಾಳೋ ವರ್ಷಕ್ಕೊಮ್ಮೆ ಯಾಕೆ ಬಂದಿಯಮ್ಮ..ಗಬ್ಬಿಯಾಳೋ) ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಯಲ್ಲಿ ಕಂಡು ಬರುವ ಜನ‍ಪದರ ಸುಗ್ಗಿ ಹಾಡು.

ಹೀಗೆ ತಲೆ ಮೇಲೊಂದು ಬಿದಿರಿನ ಮಂಕರಿ ಇಟ್ಟುಕೊಂಡು ಅದರಲ್ಲಿ ರಾಗಿ ತುಂಬಿಸಿಕೊಂಡು ಅದರಲ್ಲಿ ಕಾಟಮರಾಯ ದೇವರಮೂರ್ತಿ ಇಟ್ಟುಕೊಂಡು ಮನೆಗೆ ಮನೆಗೆ ತಿರುಗಿ ಧಾನ್ಯ ಸಂಗ್ರಹ ಮಾಡುವುದು ಗ್ರಾಮಾಂತರ ಪ್ರದೇಶದಲ್ಲಿ ವಾಡಿಕೆ.

ಇತ್ತಿಚೆಗೆ ತಂತ್ರಜ್ಞಾನ ಮುಂದುವರಿದಂತೆಲ್ಲಾ ತೆರೆಮರೆಗೆ ಸರಿಯುತ್ತಿರುವ ಜಾನಪದ ಸೊಗಡಿನಲ್ಲಿ ಗುಬ್ಬಿಯಾಳೋ ಸಾಹಿತ್ಯವೂ ಒಂದು. ವರ್ಷಕ್ಕೊಮ್ಮೆ ಹೊಸದಾಗಿ ತಯಾರಿಸಿರುವ ಬಿದಿರಿನ ಮಂಕರಿಯಲ್ಲಿ ಹೊಸ ರಾಗಿಯನ್ನು ತುಂಬಿಕೊಂಡು ಅದರಲ್ಲಿ ಕಾಟಮರಾಯ ದೇವರ ಮೂರ್ತಿಯನ್ನು ಇಟ್ಟುಕೊಂಡು ಅದಕ್ಕೆ ವಿವಿಧ ಬಗೆಯ ಹೂಗಳಿಂದ ಸಿಂಗಾರ ಮಾಡುತ್ತಾರೆ. ಮುಖ್ಯವಾಗಿ ತಂಗಡಿ ಹೂವಿನ ಅಲಂಕಾರವೇ ಶ್ರೇಷ್ಟವಾಗಿರುತ್ತದೆ.

ಇಬ್ಬರು ಮಹಿಳೆಯರು ಹಳ್ಳಿಯೊಳಗೆ ಪ್ರವೇಶ ಮಾಡುತ್ತಿದ್ದಂತೆ ಜಾನಪದ ಶೈಲಿಯಲ್ಲಿ ಹಾಡುಗಾರಿಕೆ ಆರಂಭಿಸುತ್ತಾರೆ. ಹಾಡುಗಾರಿಕೆಗೆ ಮನಸೋಲುವ ಮಕ್ಕಳು ಗುಂಪು ಕಟ್ಟಿಕೊಂಡು ಅವರನ್ನು ಹಿಂಬಾಲಿಸುತ್ತಾರೆ. ಹಾಡಿನೊಂದಿಗೆ ನೃತ್ಯ ಮಾಡುತ್ತಾ ಮನೆ ಮನೆಗೆ ಶುಭ ಹಾರೈಸುತ್ತಾರೆ. ಮನೆಗಳಲ್ಲಿನ ಹೆಣ್ಣು ಮಕ್ಕಳು, ಕಾಟಮರಾಯ ದೇವರಿಗೆ ಹೂಗಳನ್ನು ಇಟ್ಟು ಅರಿಶಿನ ಕುಂಕುಮ ನೀಡಿ ಪೂಜೆ ಸಲ್ಲಿಸುವುದರ ಜೊತೆಗೆ, ಬಿದಿರಿನ ಮಂಕರಿಯಲ್ಲಿ ದೇವರನ್ನು ಹೊತ್ತುಕೊಂಡಿರುವ ಮಹಿಳೆಗೂ ಅರಿಶಿನ ಕುಂಕುಮ ಇಟ್ಟು, ಬಾಗಿನ ನೀಡುವ ಮೂಲಕ ಗೌರವ ಸಮರ್ಪಣೆ ಮಾಡುವುದು ರೂಢಿಯಲ್ಲಿದೆ. ಅವರಿಗೆ ರಾಗಿ, ಅಕ್ಕಿ, ತರಕಾರಿ, ಹಣ ನೀಡಿ ಕಳುಹಿಸುತ್ತಾರೆ.

ಹೀಗೆ ತರಕಾರಿ, ರಾಗಿ, ಅಕ್ಕಿ, ಧಾನ್ಯಗಳನ್ನು ಸಂಗ್ರಹಿಸಿಕೊಂಡು ಹೋಗುವ ಮಹಿಳೆಯರು ಜನವರಿಯಲ್ಲಿ ನಡೆಯಲಿರುವ ಸಂಕ್ರಾಂತಿಯಂದು ಕಾಟಮರಾಯ ದೇವರಿಗೆ ಗುಡಿಯನ್ನು ನಿರ್ಮಾಣ ಮಾಡಿ, ವಿಶೇಷ ಪೂಜೆ ಸಲ್ಲಿಸುವುದರ ಜೊತೆಗೆ ಅನ್ನದಾನ ಮಾಡುತ್ತಾರೆ.
ಮಂಕರಿಯನ್ನು ಹೊತ್ತಿದ್ದ ಲಕ್ಷ್ಮಮ್ಮ ಮಾತನಾಡಿ, ‘ನಾವು ಚಿಕ್ಕವರಿದ್ದಾಗ ನಮ್ಮ ಅಜ್ಜಿ, ತಾಯಿಯವರು ಈ ಪದ್ಧತಿ ಮಾಡುತ್ತಿದ್ದರು. ನಾವೂ ಅವರೊಂದಿಗೆ ಹಳ್ಳಿಗಳಿಗೆ ಹೋಗುತ್ತಿದ್ದೆವು. ಆಗ ಹಳ್ಳಿಗಳಲ್ಲಿ ನಮ್ಮ ತಾಯಿ, ನಮ್ಮ ಅಜ್ಜಿ ಹಾಡಲು ಆರಂಭಿಸುತ್ತಿದ್ದಂತೆ ತುಂಬಾ ಜನ ಮಹಿಳೆಯರು ಸೇರಿಕೊಂಡು ಹಾಡುತ್ತಿದ್ದರು. ತುಂಬಾ ಪರಿಚಯವಾಗಿದ್ದರು. ಒಂದು ವರ್ಷ ಬರಲಿಲ್ಲವೆಂದರೆ ಹಳ್ಳಿಗಳಲ್ಲಿ ಕೇಳೋರು ಯಾಕೆ ಬರಲಿಲ್ಲ ಅಂತ. ಈ ಪದ್ಧತಿಗೆ ಅಷ್ಟೊಂದು ಪ್ರಾಮುಖ್ಯತೆ ಕೊಡುತ್ತಿದ್ದರು. ಅವರ ನಂತರ ಕೆಲ ವರ್ಷಗಳು ಯಾರೂ ಹೋಗುತ್ತಿರಲಿಲ್ಲ. ಸಂಪ್ರದಾಯ ಬಿಡಬಾರದು ಎಂದು ನಾವು ಹೋಗುತ್ತಿದ್ದೇವೆ. ಈಗಲೂ ಹಳಬರು ನಮ್ಮನ್ನು ತುಂಬಾ ಗೌರವದಿಂದ ನೋಡ್ತಾರೆ, ಈಗಿನವರಿಗೆ ಈ ಹಾಡುಗಳು ಹಿಡಿಸುವುದಿಲ್ಲ’ ಎಂದರು.

ಹಿರಿಯ ಮಹಿಳೆ ಸಾಕಮ್ಮ ಮಾತನಾಡಿ, ವರ್ಷಕ್ಕೊಮ್ಮೆ ಗುಬ್ಬಿಯಾಳೋ ಹಾಡುವವರು ಬಂದ್ರೆ ಎಲ್ಲರಿಗೂ ಒಳಿತು ಬಯಸಿ ದೇವರನ್ನು ಬೇಡಿಕೊಳ್ಳುತ್ತಾರೆ. ಇಂತಹವರು ಹಳ್ಳಿಗಳಿಗೆ ಬರುವುದರಿಂದಲೇ ನಾವೆಲ್ಲರೂ ಗೌರಮ್ಮನ ರಂಗೋಲೆ, ಗುಬ್ಬಿಯಾಳೋ, ರಾಗಿ ಬೀಸುವಾಗ ಹಾಡುವ ಹಾಡುಗಳು, ನೆಲ್ಲುಕುಟ್ಟುವಾಗ ಹಾಡುವ ಹಾಡುಗಳನ್ನು ಕಲಿತಿದ್ದೇವೆ. ಈ ಪದ್ಧತಿ ಮುಂದುವರೆಸಬೇಕು. ಈಗಿನ ಹೆಣ್ಣು ಮಕ್ಕಳಿಗೆ ಈ ಸಂಸ್ಕೃತಿಯ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT