ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕತೆಯಿಂದ ನೇಪಥ್ಯಕ್ಕೆ ಸರಿದ ಜನಪದ

‘ಜಾನಪದ ಪರಿಸರ ಸಿರಿ’ ಸಂಸ್ಥೆ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಡಾ.ಕಂಬಾರ
Last Updated 6 ನವೆಂಬರ್ 2019, 20:01 IST
ಅಕ್ಷರ ಗಾತ್ರ

ಆನೇಕಲ್: ಜಾನಪದ ಜನರಿಂದ ದೂರವಾಗುತ್ತಿದೆ. ಪಾರಂಪರಿಕವಾಗಿ ನಡೆದು ಬಂದಿರುವ ಸಂಸ್ಕೃತಿ, ಕಲೆ, ಸಾಹಿತ್ಯ, ನೃತ್ಯಗಳನ್ನು ಉಳಿಸಿ ಬೆಳೆಸುವುದು ಈ ನೆಲದ ಪ್ರತಿಯೊಬ್ಬರ ಜವಬ್ದಾರಿಯಾಗಿದೆ ಎಂದು ಸಾಹಿತಿ ಡಾ.ಚಂದ್ರಶೇಖರ ಕಂಬಾರ ತಿಳಿಸಿದರು.

ಅವರು ತಾಲ್ಲೂಕಿನ ಶಿವನಹಳ್ಳಿ ಸಮೀಪದ ರಂಗಪ್ಪನದೊಡ್ಡಿಯಲ್ಲಿ ಕಂಠೀರವ ನೃತ್ಯ ಸಂಗೀತ ಸಭಾ ವತಿಯಿಂದ ಆಯೋಜಿಸಿದ್ದ “ಜಾನಪದ ಪರಿಸರ ಸಿರಿ” ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಶಿಕ್ಷಣ ಹೆಚ್ಚಾದಂತೆ ಜಾನಪದ ದೂರವಾಗುತ್ತಿದೆ. ಹಲವಾರು ವಿಶ್ವವಿದ್ಯಾಲಯಗಳಲ್ಲಿ ಜಾನಪದ ಸಾಹಿತ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಜಾನಪದಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯವಿದೆ. ಆದರೆ ಜಾನಪದ ಉಳಿಸುವುದು ಬೆಳೆಸುವ ನಿಟ್ಟಿನಲ್ಲಿ ಹಲವಾರು ಸವಾಲುಗಳಿವೆ. ಆಧುನಿಕತೆಯ ಪ್ರಭಾವದಿಂದಾಗಿ ಜಾನಪದ ಸಾಹಿತ್ಯ, ಜಾನಪದ ಕಲೆಗಳು ನೇಪಥ್ಯಕ್ಕೆ ಸರಿಯುತ್ತಿವೆ. ಈ ಕಾಲಘಟ್ಟದಲ್ಲಿ ಇವುಗಳನ್ನು ಉಳಿಸುವುದು ಸಂಘ ಸಂಸ್ಥೆಗಳ, ಶಾಲಾ ಕಾಲೇಜುಗಳ ಜವಬ್ದಾರಿಯಾಗಿದೆ ಎಂದರು.

ಒಬ್ಬ ವಿದ್ಯಾರ್ಥಿ ಇಂಗ್ಲಿಷ್‌ನಲ್ಲಿ ಕಥೆಯೊಂದನ್ನು ಹೇಳಿದರೆ ಅದನ್ನು ಉರು ಹೊಡೆದು ಯಥಾವತ್ತಾಗಿ ಹೇಳುತ್ತಾನೆ. ಆದರೆ ಅದೇ ವಿದ್ಯಾರ್ಥಿಗೆ ಮಾತೃಭಾಷೆಯಲ್ಲಿ ಕಥೆ ಹೇಳಿದರೆ ಆ ಕಥೆಯನ್ನು ಪ್ರಸ್ತುತ ಪರಿಸ್ಥಿತಿಗೆ ಹೊಂದುವಂತೆ ಹೊಸ ಕಥೆಗಳನ್ನು ಸೃಷ್ಠಿ ಮಾಡುವ ಸಾಮರ್ಥ್ಯ ಅವನಲ್ಲಿರುತ್ತದೆ. ಹಾಗಾಗಿ ಮಾತೃಭಾಷೆಯಲ್ಲಿ ಕಲಿತದ್ದು ಹೃದಯಕ್ಕೆ ಸೇರುತ್ತದೆ ಎಂದರು.

ಭಾರತೀಯರು ಪ್ರಪಂಚಕ್ಕೆ ಕಥೆಗಳನ್ನು ಕಲಿಸಿಕೊಟ್ಟವರು. ಪಂಚತಂತ್ರದ ಮೂಲಕ ವಿವಿಧ ತಂತ್ರಗಳನ್ನು ತಿಳಿಸಿಕೊಟ್ಟವರು. ಹಾಗಾಗಿ ಭಾರತೀಯ ಕಥೆಗಳು, ಜಾನಪದ ಕಥೆ, ಕಲೆಗಳಿಗೆ ಪರಂಪರೆ ಇತಿಹಾಸವಿದೆ. ಈ ನಿಟ್ಟಿನಲ್ಲಿ ಇವುಗಳ ಬಗ್ಗೆ ಸಂಶೋಧನೆ ಮಾಡುವ ಪ್ರಚಾರ ಮಾಡುವ ಪ್ರದರ್ಶಿಸುವ ಕಾರ್ಯಕ್ರಮಗಳನ್ನು ವಿಶ್ವವಿದ್ಯಾಲಯಗಳು ಸರ್ಕಾರ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಕಂಠೀರವ ನೃತ್ಯ ಸಂಗೀತ ಸಭಾ ಕಾಡಿನಂಚಿನ ಭಾಗದಲ್ಲಿ ಜಾನಪದ ಕಲೆ, ಸಂಸ್ಕೃತಿಯ ಬಗ್ಗೆ ಅರಿವು ಮಾರ್ಗದರ್ಶನ ನೀಡಲು ಹಾಗೂ ಪರಿಸರ ಸ್ನೇಹಿಯಾಗಿ ರೂಪಿಸುವ ನಿಟ್ಟಿನಲ್ಲಿ ಜಾನಪದ ಪರಿಸರ ಸಿರಿ ಸಂಸ್ಥೆಯನ್ನು ಪ್ರಾರಂಭಿಸಿರುವುದು ಅರ್ಥಪೂರ್ಣವಾಗಿದೆ. ಹಂಪಿ ವಿಶ್ವವಿದ್ಯಾಲಯ ಜಾನಪದ ವಿಭಾಗದ ನೆರವು ಪಡೆದು ಕೇಂದ್ರವನ್ನು ವೈಜ್ಞಾನಿಕವಾಗಿ ರೂಪಿಸುವಂತೆ ಸಲಹೆ ಮಾಡಿದರು.

ಕಂಠೀರವ ನೃತ್ಯ ಸಂಗೀತ ಸಭಾ ಅಧ್ಯಕ್ಷ ಪಿ.ಧನಂಜಯ ಮಾತನಾಡಿ, ಸಂಸ್ಥೆಯ ಸಂಸ್ಥಾಪಕರಾದ ದಿವಂಗತ ಆರ್‌.ಪುಟ್ಟಸ್ವಾಮಿ ಅವರು ಜಾನಪದ ಕಲಾವಿದರಾಗಿದ್ದು ದೆಹಲಿಯ ಗಣರಾಜ್ಯೋತ್ಸವದಲ್ಲಿ ಕಲಾವಿದರಾಗಿ ಪಾಲ್ಗೊಂಡಿದ್ದರು. ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದರು. ಅವರ ಸ್ಮರಣಾರ್ಥವಾಗಿ ರಂಗಪ್ಪನದೊಡ್ಡಿಯಲ್ಲಿ ಜಾನಪದ ಕಲೆಗಳು, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತರಬೇತಿ, ಮಾರ್ಗದರ್ಶನ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ ಎಂದರು.

ಸಿಎನ್‌ಆರ್‌ ಪ್ರತಿಷ್ಠಾನದ ಅಧ್ಯಕ್ಷ ರವಿಚಂದ್ರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಶಿವಣ್ಣ, ಖಜಾಂಚಿ ಜಿ.ನಾಗರಾಜು, ಉಪಾಧ್ಯಕ್ಷ ಆರ್.ಶ್ರೀನಿವಾಸ್‌, ಕಾರ್ಯದರ್ಶಿ ಮಂಜುನಾಥ್‌, ದೈಹಿಕ ಶಿಕ್ಷಣಾಧಿಕಾರಿ ಡಿ.ಎನ್‌.ವೀರಭದ್ರಪ್ಪ, ಕರ್ನಾಟಕ ಜಾಗೃತ ದಳ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ನಾಗಲೇಖ, ಮುಖಂಡರಾದ ಮಾರಪ್ಪ, ಆಸರೆ ಚಂದ್ರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT