ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯ ಸಂಬಂಧ ಬೆಸೆಯುವ ಜನಪದ ಸಾಹಿತ್ಯ

ಗ್ರಾಮಾಂತರ ಜಿಲ್ಲಾ ಕಲಾವಿದರ ಸಮ್ಮೇಳನ, ಪ್ರಶಸ್ತಿ ಪ್ರದಾನ
Last Updated 31 ಆಗಸ್ಟ್ 2020, 8:28 IST
ಅಕ್ಷರ ಗಾತ್ರ

ವಿಜಯಪುರ: ಜನಪದ ಮಾನವೀಯ ಸಂಬಂಧ ಬೆಸೆಯುವ ಸಾಹಿತ್ಯವಾಗಿದ್ದು ಇದನ್ನು ಯುವ ಪೀಳಿಗೆ ಬೆಳೆಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ.ಸುಧಾಕರ್ ಹೇಳಿದರು.

ಇಲ್ಲಿನ ಗಾಂಧಿಚೌಕದಲ್ಲಿರುವ ಮಹಂತಿನಮಠದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಆಯೋಜಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ರಂಗಕಲಾವಿದರು, ಯಕ್ಷಗಾನ ಕಲಾವಿದರು, ಜಾನಪದ ಕಲಾವಿದರು, ಭಾವಗೀತೆಗಳ ಕಲಾವಿದರು, ರಂಗ-ಸಂಗೀತ ಕಲಾವಿದರು, ರಂಗ-ಹಾರ‍್ಮೋನಿಯಂ ಕಲಾವಿದರು, ರಂಗ-ತಬಲಾ ಕಲಾವಿದರ, ಸಮ್ಮೇಳನ ಹಾಗೂ ಎನ್.ರಾಜಗೋಪಾಲ್‌ರವರ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ರಂಗಕಲಾವಿದರು ಹಲವು ವೈಯಕ್ತಿಕ ಕಷ್ಟ ನಷ್ಟಗಳ ನಡುವೆಯೂ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾರೆ. ನಾಟಕ ಕಲಾವಿದರಿಗೆ ಸರ್ಕಾರ ಆರ್ಥಿಕ ನೆರವು ಒದಗಿಸಬೇಕು. ಈ ಮೂಲಕ ರಂಗಭೂಮಿ ಹಾಗೂ ರಂಗ ಕಲಾವಿದರು ಚೇತರಿಸಿಕೊಳ್ಳಲು ಸಾಧ್ಯವಿದೆ’ ಎಂದರು.

‘ಇತ್ತೀಚಿನ ವರ್ಷಗಳಲ್ಲಿ ನಾಟಕ ನೋಡುವವರ ಸಂಖ್ಯೆ ತುಂಬಾ ಕಡಿಮೆಯಾಗುತ್ತಿದ್ದು ಇದರ ಪರಿಣಾಮವಾಗಿ ವಾದ್ಯಗಳನ್ನು ನುಡಿಸುವ ಕಲಾವಿದರ ಸಂಖ್ಯೆಯೂ ಗಣನೀಯವಾಗಿ ಇಳಿಮುಖವಾಗುತ್ತಿದ್ದು ಇರುವ ಕಲಾವಿದರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ರಂಗಭೂಮಿ ಮತ್ತು ರಂಗ ಕಲಾವಿದರು ಹಲವಾರು ಸಮಸ್ಯೆ ಎದುರಿಸುವಂತಾಗಿದೆ. ಜನರು ನೈಜ ಅನುಭವ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಕಟ್ಟಿಕೊಡುವ, ಪರಿಹಾರ ಸೂಚಿಸುವ ನಾಟಕಗಳತ್ತ ಒಲವು ತೋರಬೇಕು’ ಎಂದರು.

ಸಮ್ಮೇಳನಾಧ್ಯಕ್ಷ ರಾಮಾಂಜನಪ್ಪ ಮಾತನಾಡಿ, ‘ನಾಟಕದ ಕಥೆ, ಪಾತ್ರಧಾರಿಗಳು ಹಾಗೂ ನಾಟಕದ ಸನ್ನಿವೇಶಗಳು ನಮ್ಮ ಬದುಕಿಗೆ ತೀರಾ ಹತ್ತಿರವಾಗಿರುತ್ತವೆ. ರಂಗಭೂಮಿಯಲ್ಲಿ ಕೆಲಸ ಮಾಡುತ್ತಿರುವ ಅನೇಕ ಕಲಾವಿದರು ಹಾಗೂತಂತ್ರಜ್ಞರು ತಮ್ಮ ಬದುಕನ್ನು ರಂಗಭೂಮಿಯ ಮೂಲಕ ಕಟ್ಟಿಕೊಂಡಿರುತ್ತಾರೆ. ಇವರಲ್ಲಿ ಅನೇಕರು ಅಸಂಘಟಿತರಾಗಿದ್ದು, ತಮ್ಮ ಅಸ್ತಿತ್ವವನ್ನು ಗುರ್ತಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಇಂತಹ ಸಮಯದಲ್ಲೇ ಕೊರೊನಾ ಸಮಸ್ಯೆ ಭುಗಿಲೆದ್ದಿರುವುದು ಮತ್ತಷ್ಟು ಆತಂಕವನ್ನುಂಟು ಮಾಡಿದ್ದು, ಸರ್ಕಾರ ಕಲಾವಿದರ ನೆರವಿಗೆ ಧಾವಿಸಬೇಕು’ ಎಂದರು.

ಕವಿಯತ್ರಿ ಸ್ವರ್ಣಗೌರಿ ಮಹದೇವ್ ಮಾತನಾಡಿ, ನಾಟಕವು ಎಲ್ಲವನ್ನು ಒಳಗೊಂಡ ಸಮಗ್ರ ಕಲೆಯಾಗಿದ್ದು, ಇದನ್ನು ಪ್ರತಿಯೊಬ್ಬರೂ ಸ್ವೀಕರಿಸುವಂತಾಗಬೇಕು. ಸಮಾಜದ ಹುಳುಕುಗಳನ್ನು ಎತ್ತಿ ತೋರಿಸುವ, ಸಮಾಜದ ಸಂಬಂಧಗಳನ್ನು ಗಟ್ಟಿಗೊಳಿಸುವ ಸಾಮರ್ಥ್ಯ‌ ನಾಟಕಗಳಿಗಿದೆ. ನಾಟಕಗಳಿಗೆ ಎಲ್ಲಾ ಕಾಲದಲ್ಲೂ ಬೆಲೆ ಇದೆ. ಜಾಗತೀಕರಣ ಮತ್ತು ಅಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳಾಗಿರುವ ನಾಟಕಗಳು ಇಂದು ಹೆಚ್ಚು ಜನರನ್ನು ತಲುಪುತ್ತಿಲ್ಲ. ಜನತೆ ಸಿನಿಮಾ, ಟಿವಿ ಕಡೆಗೆ ಆಕರ್ಷಿತರಾಗಿ ನಾಟಕಗಳನ್ನು ನೋಡುವುದನ್ನೇ ಕಡಿಮೆ ಮಾಡಿದ್ದಾರೆ. ಈ ಬೆಳವಣಿಗೆ ಭವಿಷ್ಯದಲ್ಲಿ ರಂಗಕಲೆ ವಿನಾಶದ ಹಂಚಿಗೆ ಹೋಗುವಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಹಿರಿಯ ರಂಗ ಕಲಾವಿದ ದಿ.ಎನ್.ರಾಜಗೋಪಾಲ್‌ ಅವರ ಹೆಸರಿನಲ್ಲಿ ಹಾರೋಹಳ್ಳಿ ಸುಬ್ರಮಣಿ ಹಾಗೂ ಮುದುಗುರ್ಕಿ ಡಾ.ಮೋಹನ್ ಬಾಬು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಾಪ ಜಿಲ್ಲಾ ಘಟಕದ ಕಾರ್ಯದರ್ಶಿ ಚಂದ್ರಶೇಖರ್ ಬಿ.ಹಡಪದ್ ಮಾತನಾಡಿದರು. ಜಿಲ್ಲಾ ಕಸಾಪ ಗೌರವಾಧ್ಯಕ್ಷ ಬಿ.ಕೆ.ಶಿವಪ್ಪ, ಕಂಠನಕುಂಟೆ ಕೃಷ್ಣಮೂರ್ತಿ, ನಾಗಮಂಗಲ ಅಪ್ಪಣ್ಣ, ರಬ್ಬನಹಳ್ಳಿ ಕೆಂಪಣ್ಣ,ಮಹಾತ್ಮಾಂಜನೇಯ, ಜೆ.ಎಸ್.ಮುನಿನಾರಾಯಣ, ಜೆ.ಎಸ್.ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT