ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಕುಮಾರ ಶ್ರೀ ಸರಳತೆ ಪಾಲಿಸಿ: ಸ್ವರ್ಣಗೌರಿ ಮಹದೇವ್

Last Updated 25 ಜನವರಿ 2023, 5:51 IST
ಅಕ್ಷರ ಗಾತ್ರ

ವಿಜಯಪುರ (ದೇವನಹಳ್ಳಿ): ಪಟ್ಟಣದ ಸೌಮ್ಯಚನ್ನಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ಸೋಮವಾರ ಶ್ರೀಕೃಷ್ಣ ಯತೀಂದ್ರ ಸತ್ಸಂಗ ಸೇವಾ ಸಮಿತಿಯಿಂದ ಶ್ರೀಮದ್ ಭಗವದ್ಗೀತಾ ಪಾರಾಯಣ, ಶ್ರೀಕೈವಾರ ಯೋಗಿ ನಾರೇಯಣ ಯತೀಂದ್ರ ಹಾಗೂ ಕನಕ ಪುರಂದರ ಗೀತಾ ತತ್ವಾಮೃತ ರಸಧಾರೆಯ 211ನೇ ಕಾರ್ಯಕ್ರಮ ಮತ್ತು ಶ್ರೀಕೃಷ್ಣ ಮಾಸಿಕ ದ್ವಾದಶಿ ವಿಚಾರಧಾರೆ ಗೋಷ್ಠಿಯ 162ನೇ ಕಾರ್ಯಕ್ರಮ ನಡೆಯಿತು.

ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಕುರಿತು ಉಪನ್ಯಾಸ ನೀಡಿದ ಕವಯಿತ್ರಿ ಸ್ವರ್ಣಗೌರಿ ಮಹದೇವ್, ‘ಉದ್ಧಾನ ಗುರುಗಳ ಮಾರ್ಗದರ್ಶನವು ಶಿವಕುಮಾರ ಸ್ವಾಮೀಜಿ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಅಧ್ಯಯನ, ಬಸವ ತತ್ವಗಳಿಂದ ಶ್ರೀಗಳು ಪ್ರಭಾವಿತರಾಗಿದ್ದರು’ ಎಂದರು.

ಶಿವಕುಮಾರ ಸ್ವಾಮೀಜಿ ಅವರು ಉದ್ಧಾನ ಸ್ವಾಮೀಜಿಯಿಂದ 1930ರ ಮಾರ್ಚ್ 3ರಂದು ನಿರಂಜನ ಜಂಗಮ ಚಿಹ್ಮಾಂಕಿತ ವಿರಕ್ತಾಶ್ರಮ ದೀಕ್ಷೆ ಪಡೆದರು. ಶ್ರೀಗಳಿಗೆ ಕರ್ನಾಟಕ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದೆ. ರಾಜ್ಯ ಸರ್ಕಾರ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಅವರಲ್ಲಿದ್ದ ಸರಳತೆ, ಭಕ್ತಿಯ ಮಾರ್ಗ, ಪರೋಪಕಾರ ಗುಣ ಇಂದಿನ ಸಮಾಜಕ್ಕೆ ಮಾರ್ಗದರ್ಶನವಾಗಿವೆ ಎಂದು ಹೇಳಿದರು.

ಸತ್ಸಂಗ ಅಧ್ಯಕ್ಷ ಜೆ.ಎಸ್. ರಾಮಚಂದ್ರಪ್ಪ ಮಾತನಾಡಿ, ಶಿವಕುಮಾರ ಸ್ವಾಮೀಜಿ ಅವರ ಬದುಕು, ಸಾಧನೆ ಒಂದು ಪವಾಡವಾಗಿದೆ. ಅವರು ತೋರಿಸಿದ ಮಾರ್ಗದಲ್ಲಿ ನಡೆಯುವ ಮೂಲಕ ನಾವೆಲ್ಲರೂ ಪುನೀತರಾಗಬೇಕಾಗಿದೆ ಎಂದರು.

ಪೂಜ್ಯರು ಜೋಳಿಗೆ ಹಿಡಿದು ಭಿಕ್ಷಾಟನೆ ಮಾಡಿ ಮಠವನ್ನು ಕಟ್ಟಿ ಬೆಳೆಸಿದ್ದಾರೆ. ಮಠಕ್ಕೆ ನಿಶ್ಚಿತ ಆದಾಯವಿಲ್ಲದಿದ್ದಾಗ ದಾಸೋಹಕ್ಕೆ ಸಾಲ ಮಾಡಿದ ಉದಾಹರಣೆ ಸಾಕಷ್ಟಿವೆ. ಗ್ರಾಮೀಣ ಭಾಗದಲ್ಲಿನ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಅವರ ಬದುಕನ್ನು ಹಸನುಗೊಳಿಸುವ ಶ್ರೀಗಳ ಚಿಂತನೆಯೇ ಶಿಕ್ಷಣ ಸಂಸ್ಥೆಯ ಹುಟ್ಟಿಗೆ ಕಾರಣವಾಯಿತು ಎಂದು ಹೇಳಿದರು.

ಸ್ವಾಮೀಜಿಯ ಪರಿಶ್ರಮದಿಂದ ಹೆಣ್ಣು ಮಕ್ಕಳು ಸಹ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದ್ದು ಅವರ ಹೆಗ್ಗಳಿಕೆ. ಇಂತಹ ಮಹನೀಯರು ನಮ್ಮ ನಾಡಿ ನಲ್ಲಿ ಹುಟ್ಟಿದ್ದು ನಮ್ಮೆಲ್ಲರ ಹೆಮ್ಮೆ ಎಂದರು.

ಎಂ.ವಿ. ನಾಯ್ಡು ತಂಡದಿಂದ ಗೀತ ಗಾಯನ ಕಾರ್ಯಕ್ರಮ ನಡೆಯಿತು. ಮಹಿಳೆಯರಿಗೆ ಸೀರೆ ಕುಪ್ಪಸ, ಬಡವರಿಗೆ ಕಂಬಳಿ ವಿತರಣೆ ಹಾಗೂ ಮಕ್ಕಳಿಗೆ ಕಲಿಕೋಪಕರಣ ವಿತರಿಸಲಾಯಿತು.ಾರ್ಯಕ್ರಮದಲ್ಲಿ ವಿ. ವಿಶ್ವನಾಥ್, ಆರ್. ಗೋವಿಂದರಾಜು, ಮುನಿನಾರಾಯಣಪ್ಪ, ಪ್ರೇಮಾ ಮಹೇಶ್ ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ರಮೇಶ್ ಸ್ವಾಮಿ, ಪಿ. ನಾರಾಯಣಪ್ಪ, ವಿ.ಎನ್. ವೆಂಕಟೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT